ಮಂಗಳೂರು: ಒಂದೇ ಕುಟುಂಬದ ಮೂವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.
ಮೈಸೂರಿನ ಪಿ.ಎಸ್ ನಗರದ ನಿವಾಸಿ ಕವಿತಾ ಮಂದಣ್ಣ ಹಾಗೂ ಮಕ್ಕಳಾದ ಕೌಶಿಕ್ ಮತ್ತು ಕಲ್ಪಿತಾ ತಮ್ಮ ಕಾರನ್ನು ಬಂಟ್ವಾಳದ ಮಂಗಳೂರು ಬಳಿಯ ರಸ್ತೆ ಬದಿ ನಿಲ್ಲಿಸಿ, ನಡೆದುಕೊಂಡು ಸೇತುವೆಯಿಂದ ನದಿಗೆ ಹಾರಿದ್ದಾರೆ. ಶನಿವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಘಟನೆ ನಡೆದಿದ್ದು, ಸ್ಥಳೀಯರು ಕೂಡಲೇ ನದಿಯಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಆದರೆ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ.
Advertisement
Advertisement
ತಮ್ಮ ಮುದ್ದಿನ ನಾಯಿಯ ಜೊತೆ ಮಹಿಳೆ ನದಿಗೆ ಹಾರಿದ್ದರು. ಇವರು ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆ ಕಡಂಗಳ ಬಳ್ಳಚಂಡ ಕುಟುಂಬದವರು. ಕವಿತಾ ಮಂದಣ್ಣ ಅವರ ಪತಿ ಕಿಶನ್ ಕೃಷಿಕರಾಗಿದ್ದು, ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದರು. ತೀವ್ರ ಹುಡುಕಾಟದ ಬಳಿಕ ಶನಿವಾರ ಮಧ್ಯಾಹ್ನ ಶವ ಪತ್ತೆಯಾಗಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು.
Advertisement
ಇದರಿಂದ ಶಾಕ್‍ಗೆ ಒಳಗಾಗಿದ್ದ ಕುಟುಂಬ ಪತ್ರವನ್ನು ಬರೆದಿಟ್ಟು ಕಾರಿನಲ್ಲಿ ಮಂಗಳೂರು ಕಡೆಗೆ ಹೋಗಿದ್ದಾರೆ. ಶನಿವಾರ ರಾತ್ರಿ ಬಂಟ್ವಾಳದಲ್ಲಿ ನೇತ್ರಾವತಿ ಸೇತುವೆ ಹಾದುಹೋದ ವೇಳೆ ಕಾರನ್ನು ರಸ್ತೆ ಬದಿಯ ಹೋಟೆಲ್ ಪಕ್ಕ ನಿಲ್ಲಿಸಿ, ನದಿಯತ್ತ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರು ಮಕ್ಕಳ ಪತ್ತೆಗಾಗಿ ಬಂಟ್ವಾಳ ಪೊಲೀಸರು ಮತ್ತು ಅಗ್ನಿಶಾಮಕ ದಳ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.