ಉಡುಪಿ: ಕುಂದಾಪುರ ತಾಲೂಕಿನ ಎಡಮೊಗೆ ಗ್ರಾಮದಲ್ಲಿ ಗುರುವಾರ ಮುಂಜಾನೆ 4 ಗಂಟೆಯ ಸುಮಾರಿಗೆ ಹೆಣ್ಣು ಮಗುವಿನ ಅಪಹರಣ ಪ್ರಕರಣ ಎಂಬ ಬಗ್ಗೆ ಸುದ್ದಿಯಾಗಿತ್ತು. ಆದರೆ ಇದೀಗ ಮಗುವಿನ ಶವ ಕುಬ್ಜಾ ನದಿಯಲ್ಲಿ ಪತ್ತೆಯಾಗಿದೆ.
ಸಾನ್ವಿಕಾ ಮೃತ ಮಗು. ಸಂತೋಷ್ ನಾಯ್ಕ ಮತ್ತು ರೇಖಾ ದಂಪತಿ ಮಗು ಅಪಹರಣ ಆಗಿತ್ತೆಂದು ಪೊಲೀಸರಿಗೆ ದೂರು ನೀಡಲಾಗಿತ್ತು. ದೂರು ನೀಡಿ ಒಂದು ದಿನ ಆಗುವಷ್ಟರಲ್ಲಿ ಹೆಣ್ಣು ಮಗುವಿನ ಮೃತದೇಹ ಕುಬ್ಜಾ ನದಿಯಲ್ಲಿ ಪತ್ತೆಯಾಗಿದೆ.
ಕುಂದಾಪುರದ ಎಡಮೊಗೆ ಗ್ರಾಮದ ಕುಮ್ಟಿಬೇರು ಸಮೀಪದ ಮನೆಯಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಮಲಗಿದ್ದರು. ಈ ಸಂದರ್ಭದಲ್ಲಿ ಇಬ್ಬರು ಮುಸುಕುಧಾರಿಗಳು ಹಿಂದಿನ ಬಾಗಿಲಿನ ಮೂಲಕ ಬಂದು ಮಗುವನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ತಾಯಿ ದೂರಿದ್ದರು. ಆದರೆ ಈಗ ನದಿಯ ನಡುವೆ ಇರುವ ಪೊದೆಯಲ್ಲಿ ಮಗು ಸಾನ್ವಿಕಾಳ ಮೃತದೇಹ ಸಿಕ್ಕಿಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅಪಹರಣದ ಕಥೆ ಕಟ್ಟಿದ್ಳಾ ತಾಯಿ?
ರೇಖಾ ಇಬ್ಬರು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ್ದಾರೆ ಎನ್ನಲಾಗಿದೆ. ಪ್ರಾಣ ಭಯದಿಂದ ಮಗ ಮತ್ತು ತಾಯಿ ನೀರಿಂದ ಮೇಲೆ ಬಂದಿರಬಹುದು. ಒಂದು ವರ್ಷ ಮೂರು ತಿಂಗಳ ಮಗು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಗಂಡ ಬಂದ ಸಂದರ್ಭದಲ್ಲಿ ಭಯಗೊಂಡು ಅಪಹರಣದ ಕಥೆ ಕಟ್ಟಿದ್ದಾಳೆ ಎನ್ನಲಾಗಿದೆ. ವಿಡಿಯೋವೊಂದಲ್ಲಿ ತಂದೆ ಕಣ್ಣೀರಿಡುತ್ತಿದ್ದರೆ, ತಾಯಿ ಭಯದಲ್ಲಿರುವುದು ಕಂಡುಬಂದಿದೆ.
ಸದ್ಯಕ್ಕೆ ಕುಂದಾಪುರ ಡಿವೈಎಸ್‍ಪಿ ದಿನೇಶ್ ಕುಮಾರ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಮಗುವಿನ ತಾಯಿಯನ್ನು ಶಂಕರ ನಾರಾಯಣ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.