ಚಿಕ್ಕಮಗಳೂರು: ಮೂರು ಬಾರಿ ಗ್ರಾಮ ಸಭೆ ಕರೆದು ಆ ದಿನ ಅಧಿಕಾರಿಗಳು ಬರದೇ, ಫೋನ್‍ಗೂ ಸಿಗದೇ ಇದ್ದಿದ್ದರಿಂದ ಬೇಸತ್ತು ಕಳಸ (Kalasa) ತಾಲೂಕಿನ ಸಂಸೆ ಗ್ರಾಮ ಪಂಚಾಯತಿಯ (Samse Gram Panchayat) ಸದಸ್ಯರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ.
ಅಧಿಕಾರಿಗಳು ಹೇಳಿದ ದಿನವೇ ಗ್ರಾಮ ಸಭೆಯನ್ನು ಪಂಚಾಯತಿ ಅಧ್ಯಕ್ಷರು ನಿಗದಿ ಮಾಡಿದ್ದರು. ಆದರೆ ಅಧಿಕಾರಿಗಳು ಸಭೆಗೆ ಗೈರಾಗಿದ್ದಾರೆ. ಅವರು ಹೇಳಿದ ದಿನ ಸಭೆ ಕರೆದರೂ ಯಾರೂ ಬಂದಿಲ್ಲ ಎಂದು ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ. ನಡೆದ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿಲ್ಲ. ಪಿಡಿಓ, ಕಾರ್ಯದರ್ಶಿ, ಅಕೌಂಟೆಂಟ್, ಇಓ ಯಾರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೆಲಸ ನಡೆಯದ ಕಾರಣ ಜನರಿಂದ ದಿನನಿತ್ಯ ಕಿರಿಕಿರಿ ಅನುಭವಿಸಬೇಕಾಗಿದೆ ಎಂದು ಗ್ರಾಮಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸಂಸೆ ಗ್ರಾಮ ಪಂಚಾಯಿತಿ ಕಳಸ ತಾಲೂಕಿನಲ್ಲೇ ದೊಡ್ಡ ಗ್ರಾಮ ಪಂಚಾಯಿತಿಯಾಗಿದೆ. ಅಧಿಕಾರಿಗಳು 2 ಪಂಚಾಯಿತಿಗೆ ಕೆಲಸ ಮಾಡುವುದರಿಂದ ಇಂದು (ಮಂಗಳವಾರ) ಪಂಚಾಯಿತಿಗೆ ಎಲ್ಲರೂ ಗೈರಾಗಿದ್ದರು ಎಂದು ತಿಳಿದು ಬಂದಿದೆ.