ಚಿಕ್ಕೋಡಿ(ಬೆಳಗಾವಿ): ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಯ ನೀರಿನಲ್ಲಿ ಗಣನೀಯ ಏರಿಕೆಯಾಗಿದ್ದು ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಕೃಷ್ಣಾ ನದಿಯ ಉಪನದಿಗಳಾದ ವೇದಗಂಗಾ ಹಾಗೂ ದೂಧಗಂಗಾ ನದಿಗಳು ತುಂಬಿ ಹರಿಯುತ್ತಿವೆ. ಕೃಷ್ಣಾ ಹಾಗೂ ಅದರ ಉಪ ನದಿಗಳು ತುಂಬಿ ಹರಿಯುತ್ತಿರುವ ಕಾರಣ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ 6 ಸೇತುವೆಗಳು ಮುಳುಗಿವೆ.
Advertisement
Advertisement
ರಾಯಬಾಗ ತಾಲೂಕಿನ ಒಂದು ಸೇತುವೆ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಲ್ಲೋಳ_ ಯಡೂರ, ಮಿರಜ – ಜಮಖಂಡಿ ರಾಜ್ಯ ಹೆದ್ದಾರಿ ಮೇಲಿರುವ ಕುಡಚಿ- ಮಿರಜ ಸೇತುವೆ ಹಾಗೂ ದೂಧಗಂಗಾ ನದಿಯ ಕಾರದಗಾ_ ಭೋಜ, ವೇದಗಂಗಾ ನದಿಯ ಭೊಜವಾಡಿ_ ಕುಣ್ಣೂರ, ವೇದಗಂಗಾ ನದಿಯ ಸಿದ್ನಾಳ – ಅಕ್ಕೋಳ, ವೇದಗಂಗಾ ನದಿಯ ಜತರಾಟ- ಭೀವಶಿ ಹಾಗೂ ದುಧಗಂಗಾ ನದಿಯ _ ಮಲಿಕವಾಡ_ ದತ್ತವಾಡ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಗಳು ಮುಳುಗಡೆಯಾಗಿವೆ.
Advertisement
ಸೇತುವೆ ಮುಳುಗಡೆಯಾದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುತ್ತಿದ್ದು ಸುತ್ತು ಬಳಸಿ ಪರ್ಯಾಯ ಮಾರ್ಗಗಳಿಂದ ಪ್ರಯಾಣ ಬೆಳೆಸುತ್ತಿದ್ದಾರೆ. ಚಿಕ್ಕೋಡಿ ತಾಲೂಕಿನ 3 ದೇವಾಲಯಗಳು ಸಹ ಜಲಾವೃತಗೊಂಡಿದ್ದು ಕೃಷ್ಣಾ ನದಿಗೆ 1 ಲಕ್ಷ 80 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಹರಿದು ಬರುತ್ತಿದ್ದು ಅಷ್ಟೇ ಪ್ರಮಾಣದ ನೀರನ್ನ ಹಿಪ್ಪರಗಿ ಜಲಾಶಯದ ಮೂಲಕ ಹೊರ ಬಿಡಲಾಗುತ್ತಿದೆ.
Advertisement
ಮಹಾರಾಷ್ಟ್ರದ ರಾಧಾ ನಗರ ಜಲಾಶಯ ಭರ್ತಿಯಾಗಿದ್ದು 15 ಸಾವಿರ ಕ್ಯೂಸೆಕ್ ನೀರನ್ನ ಡ್ಯಾಮ್ ನಿಂದ ಕೃಷ್ಣಾ ನದಿ ನೀರಿಗೆ ಹೊರ ಬಿಡಲಾಗುತ್ತಿದೆ. ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದ್ದು ನದಿ ನೀರಿಗೆ ಸಾರ್ವಜನಿಕರು ಇಳಿಯದಂತೆ ಬೆಳಗಾವಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದ್ದು ನದಿ ತೀರದಲ್ಲಿ ನೋಡಲ್ ಅಧಿಕಾರಿಗಳು ಹಾಗೂ ಪೊಲೀಸರನ್ನ ನಿಯೋಜಿಸಿದೆ. ಅಲ್ಲದೇ ನೀರಿನ ಪ್ರಮಾಣ ಹೆಚ್ಚಾಗಿರುವ ಕಾರಣ ನದಿ ತೀರದ ಜನರಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಅಧಿಕಾರಿಗಳು ಜನರಲ್ಲಿ ವಿನಂತಿಸಿದ್ದಾರೆ.