ಕನ್ನಡದಲ್ಲೀಗ ಕಂಟೆಂಟ್ ಆಧರಿಸಿದ ಚಿತ್ರಗಳದ್ದೇ ಕಾರುಬಾರು. ಉತ್ತಮ ಕಂಟೆಂಟ್ ಇರುವ ಚಿತ್ರಗಳು ಇತ್ತೀಚಿಗೆ ಯಶಸ್ವಿಯಾಗಿರುವ ಉದಾಹರಣೆಗಳು ಕನ್ನಡದಲ್ಲಿ ಸಾಕಷ್ಟಿದೆ. ಅಂತಹದೇ ಉತ್ತಮ ಕಂಟೆಂಟ್‌ನೊಂದಿಗೆ ಕನ್ನಡಿಗರ ಮುಂದೆ ಬರುತ್ತಿದೆ ‘ಫಾರೆಸ್ಟ್’ (Forest Film) ಸಿನಿಮಾ. ಸದ್ಯ ಈ ಸಿನಿಮಾ ಚಿತ್ರೀಕರಣ ಕೂಡ ಮುಕ್ತಾಯವಾಗಿದೆ.
ಎನ್.ಎಂ.ಕೆ ಸಿನಿಮಾಸ್ ಲಾಂಛನದಲ್ಲಿ ಎನ್.ಎಂ ಕಾಂತರಾಜ್ ನಿರ್ಮಾಣದ, ಚಂದ್ರ ಮೋಹನ್ ನಿರ್ದೇಶನದ ಹಾಗೂ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಫಾರೆಸ್ಟ್’ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರಕ್ಕಾಗಿ ಪುನೀತ್ ಆರ್ಯ ಅವರು ಬರೆದು ಧರ್ಮವಿಶ್ ಸಂಗೀತ ನೀಡಿರುವ ‘ಓಡೋ ಓಡೋ’ ಹಾಡು ಬಿಡುಗಡೆಯಾಗಿತ್ತು. ಖ್ಯಾತ ಗಾಯಕ ಕೈಲಾಶ್ ಖೇರ್ ಹಾಡಿರುವ ಈ ಹಾಡನ್ನು ಈಗಾಗಲೇ 11 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದರು. ಈ ಹಾಡಿಗೆ ಈಗ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಮಲ್ಟಿಸ್ಟಾರ್ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಮಡಿಕೇರಿ, ಎಂ.ಎಂ.ಹಿಲ್ಸ್, ಸಂಪಾಜೆ ಫಾರೆಸ್ಟ್ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.
ನಿರ್ದೇಶಕ ಚಂದ್ರಮೋಹನ್ ಅವರು ಸತ್ಯಶೌರ್ಯ ಸಾಗರ್ ಅವರ ಜೊತೆಗೂಡಿ ಕಥೆ, ಚಿತ್ರಕಥೆ ರಚಿಸಿದ್ದಾರೆ. ಸಂಭಾಷಣೆಯನ್ನು ಸತ್ಯಶೌರ್ಯ ಸಾಗರ್ ಅವರೆ ಬರೆದಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಧರ್ಮವಿಶ್ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಆನಂದ್ ರಾಜವಿಕ್ರಮ್ ಅವರದಾಗಿದೆ. ರವಿಕುಮಾರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಅಮರ್ ಕಲಾ ನಿರ್ದೇಶನ ಹಾಗೂ ಡಾ||ರವಿವರ್ಮ ಅವರ ಸಾಹಸ ನಿರ್ದೇಶನ ‘ಫಾರೆಸ್ಟ್’ ಚಿತ್ರಕ್ಕಿದೆ. ಇದನ್ನೂ ಓದಿ:ಚಿತ್ರೀಕರಣದ ವೇಳೆ ವರುಣ್ ಧವನ್ ಪಕ್ಕೆಲುಬಿಗೆ ಪೆಟ್ಟು
ಚಿಕ್ಕಣ್ಣ (Chikkanna), ಅನೀಶ್ ತೇಜೇಶ್ವರ್, ಗುರುನಂದನ್, ಶರಣ್ಯ ಶೆಟ್ಟಿ (Sharanya Shetty), ಅರ್ಚನಾ ಕೊಟ್ಟಿಗೆ, ರಂಗಾಯಣ ರಘು, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್ ಕುಮಾರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.