ಚಿಕ್ಕಮಗಳೂರು: ಅಣ್ಣ-ತಮ್ಮಂದಿರು ಜಗಳವನ್ನು ರಾಜೀ ಮಾಡಿದ್ದಕ್ಕೆ ಅವಧೂತ ವಿನಯ್ ಗುರೂಜಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಗ್ರಾಮದ ತುಂಬಾ ಮೆರವಣೆಗೆ ಮಾಡಲಾಗಿದೆ.
ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗ್ರಾಮವೊಂದರಲ್ಲಿ ಅಣ್ಣ-ತಮ್ಮಂದಿರು ಜಗಳ ಮಾಡಿಕೊಂಡಿದ್ದರು. ಮನೆಗೆ ದೇವರ ಅಡ್ಡೆಗಳನ್ನು (ಪಲ್ಲಕ್ಕಿ) ತಂದಾಗ ಎರಡು ದೇವರಲ್ಲಿ ಒಂದು ದೇವರು ಮನೆ ಪ್ರವೇಶಿಸಿದೆ. ಆದರೆ ಮತ್ತೊಂದು ದೇವರು ಮನೆಯೊಳಗೆ ಹೋಗಿಲ್ಲ. ಪೂಜೆ ಮಾಡಿ ಎಷ್ಟೆ ಬೇಡಿಕೊಂಡರು ದೇವರು ಮನೆಯೊಳಗೆ ಹೋಗಿಲ್ಲ. ಆಗ ಸ್ಥಳಕ್ಕೆ ಬಂದ ಅವಧೂತ ವಿನಯ್ ಗುರೂಜಿ ಅಣ್ಣ-ತಮ್ಮಂದಿರನ್ನು ರಾಜಿ ಮಾಡಿಸುತ್ತಿದ್ದಂತೆ ಮನೆಯೊಳಗೆ ಹೋಗದೆ ಹಠ ಹಿಡಿದು ಕುಳಿತ್ತಿದ್ದ ದೇವರು ಮನೆಯೊಳಕ್ಕೆ ಹೋಗಿದೆ.
ಇದೇ ಖುಷಿಗೆ ಸ್ಥಳೀಯರು ವಿನಯ್ ಗುರೂಜಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಊರಿನ ತುಂಬಾ ಮೆರವಣಿಗೆ ಮಾಡಿದ್ದಾರೆ. ಸ್ಥಳೀಯರು ವಿನಯ್ ಗುರೂಜಿಯನ್ನ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವಾಗ ಅಳುತ್ತಿದ್ದ ಮಗುವನ್ನು ಕಂಡು ವಿನಯ್ ಗುರೂಜಿ ತೊಡೆ ಮೇಲೆ ಕೂರಿಸಿಕೊಂಡು ಸಮಾಧಾನ ಮಾಡುತ್ತಾ ಮಗುವನ್ನು ಸಂತೈಸಿದ್ದಾರೆ. ಅವರ ತೊಡೆ ಮೇಲೆ ಕೂರುತ್ತಿದ್ದಂತೆ ಮಗು ಕೂಡ ಅಳುವುದನ್ನ ನಿಲ್ಲಿಸಿದೆ.
ಹರಿಹರಪುರ ಸಮೀಪದ ನಂದಿಗೋಡು ಗ್ರಾಮದ ಸಚಿನ್ ಹಾಗೂ ಧ್ವನಿ ದಂಪತಿಯ ಹೀರಾ ಮಗು ವಿನಯ್ ಗುರೂಜಿ ಜೊತೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಹೋಗಿದ್ದು, ಹೆತ್ತವರಲ್ಲೂ ಖುಷಿ ತಂದಿದ್ದು, ಸ್ಥಳೀಯರು ಪುಣ್ಯವಂತ ಮಗು ಎಂದಿದ್ದಾರೆ.