ಚಿಕ್ಕಮಗ್ಳೂರು ಉತ್ಸವಕ್ಕೆ ನೆರೆ ಸಂತ್ರಸ್ತರ ವಿರೋಧ – ಮೊದ್ಲು ಪರಿಹಾರ ವಿತರಿಸಿ ಎಂದು ಆಗ್ರಹ

Public TV
1 Min Read
CKM 1 1

ಚಿಕ್ಕಮಗಳೂರು: ಕಳೆದ ವರ್ಷ ಕಾಫಿನಾಡಿನಲ್ಲಿ ಸುರಿದ ಧಾರಾಕಾರ ಮಳೆ ಜಿಲ್ಲೆಯ ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿತ್ತು. ಭೂಕುಸಿತ, ಬೆಳೆ ನಷ್ಟ, ಮನೆ ಹಾಗೂ ಜೀವಹಾನಿಯ ಕಹಿ ನೆನಪಿನಿಂದ ಜನ ಹೊರ ಬರಲಾಗದೇ ಭವಿಷ್ಯದ ಆತಂಕದಲ್ಲಿದ್ದಾರೆ. ಇಂತಹ ವೇಳೆಯಲ್ಲಿಯೇ ಚಿಕ್ಕಮಗಳೂರು ಉತ್ಸವಕ್ಕೆ ಸಚಿವರು ಗ್ರೀನ್‍ಸಿಗ್ನಲ್ ಕೊಟ್ಟಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜನ ಸಂಕಷ್ಟದಲಿದ್ದು ಇನ್ನೂ ಸಂತ್ರಸ್ತರ ಪರಿಹಾರ ಸಿಕ್ಕಿಲ್ಲ. ಇಂತಹ ವೇಳೆಯಲ್ಲಿ ಉತ್ಸವ ಬೇಕಿತ್ತಾ ಎನ್ನುವ ವಿವಾದವೂ ಎದ್ದಿದೆ.

CKM 2 1

ಹೌದು. ಕಳೆದ ವರ್ಷ ಮಲೆನಾಡು ಭಾಗದಲ್ಲಿ ಸುರಿದ ಮಳೆಯ ಅವಾಂತರ ನೆನಪಿಸಿಕೊಂಡರೆ ಮೈ ಜುಂ ಅನ್ನುತ್ತೆ. ಜನ ಮನೆ-ಮಠ ಕಳೆದುಕೊಂಡು ಬೀದಿಗೆ ಬಿದ್ದರು. ಬದುಕು ಮೂರಾಬಟ್ಟೆಯಾಯ್ತು. ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 10ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡರು. ಇಷ್ಟೆಲ್ಲ ಅನಾಹುತ ಸಂಭವಿಸಿದರು ಕೂಡ ಪರಿಹಾರ ಕಾರ್ಯ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ. ಅಂದು ಇದ್ದವರು ಇಂದು ಇಲ್ಲದಂತಾಗಿದ್ದು ಭವಿಷ್ಯದ ಚಿಂತೆಯಲ್ಲಿದ್ದಾರೆ. ಈ ನಡುವೆ ಜಿಲ್ಲಾಡಳಿತ ಕೋಟಿ-ಕೋಟಿ ಖರ್ಚು ಮಾಡಿ 2 ದಶಕಗಳಿಂದ ನಿಂತು ಹೋಗಿದ್ದ ಚಿಕ್ಕಮಗಳೂರು ಉತ್ಸವ ಮಾಡೋಕೆ ಹೊರಟಿರೋದು ಜನರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಪುಟ್ಟಸ್ವಾಮಿ ಹೇಳಿದ್ದಾರೆ.

CKM 3

ಸಂತ್ರಸ್ತರಿಗಿನ್ನೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಮಳೆಯ ಹೊಡೆತದಿಂದ ಜನಜೀವನವೂ ಚೇತರಿಕೆಯಾಗಿಲ್ಲ. ಜನರ ಕಷ್ಟಕ್ಕೆ ಸ್ಪಂದಿಸದೇ ಜಿಲ್ಲಾಡಳಿತ ಅನಗತ್ಯ ದುಂದುವೆಚ್ಚ ಮಾಡ್ತಿರೋದು ಸರಿಯಲ್ಲ ಅಂತ ಜನ ಅಸಮಾಧಾನ ಹೊರ ಹಾಕ್ತಿದ್ದಾರೆ. ವಿರೋಧದ ನಡುವೆಯೂ ಫೆಬ್ರವರಿ 28ರಿಂದ ಮೂರು ದಿನಗಳ ಕಾಲ ಚಿಕ್ಕಮಗಳೂರು ಉತ್ಸವವನ್ನ ಆಚರಿಸಲು ಜಿಲ್ಲಾಡಳಿತ ಭರದ ಸಿದ್ಧತೆ ಮಾಡಿಕೊಳ್ತಿದ್ದು, ಹಬ್ಬದ ಲಾಂಛನವೂ ಬಿಡುಗಡೆಯಾಗಿದೆ. ಈ ಬಗ್ಗೆ ಪ್ರತಿಕ್ರಿಸಿರೋ ಸಚಿವ ಸಿ.ಟಿ.ರವಿ, ಪರಿಹಾರದ ಹಣವನ್ನ ನಾವು ಮುಟ್ಟಿಲ್ಲ. ಉತ್ಸವಗಳಿಗೆಂದೇ ಮೀಸಲಿಟ್ಟಿರೋ ಹಣವಿದು. ಅಂತ ವಿರೋಧಿಗಳಿಗೆ ಟಾಂಗ್ ಕೊಟ್ಟರು.

CKM 4

ಕಳೆದ 2 ದಶಕಗಳಿಂದ ನಿಂತಿದ್ದ ಉತ್ಸವಕ್ಕೆ ಇದೀಗ ಜೀವಕಳೆ ಬಂದಿದೆ. ಪರ-ವಿರೋಧದ ಮಧ್ಯೆಯೂ ಜಿಲ್ಲಾಡಳಿತ ಉತ್ಸವ ಮಾಡೋಕೆ ಹೊರಟಿದ್ದು, ಮುಂದೇನಾಗುತ್ತೋ ಎಂಬುದನ್ನು ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *