ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾಗಿ ನನ್ನ ತಮ್ಮ-ತಂಗಿಯನ್ನ ನೋಡಿಕೊಳ್ಳುವುದಿಲ್ಲ ಎಂದ ಮಹಿಳಾ ಪೇದೆಯ ತಂಗಿಗೆ ಚಿಕ್ಕಮಗಳೂರು ಎಸ್‍ಪಿ ಅಣ್ಣಾ ಮಲೈ ಅಣ್ಣನಾಗಿ ನಿಂತಿರೋ ಘಟನೆಗೆ ಚಿಕ್ಕಮಗಳೂರು ಎಸ್‍ಪಿ ಕಚೇರಿ ಸಾಕ್ಷಿಯಾಗಿದೆ.
ಬಾಳೂರು ಠಾಣೆಯಲ್ಲಿ ಪೇದೆಯಾಗಿ ಕೆಲಸ ಮಾಡ್ತಿದ್ದ ರೇಣುಕಾ ಅದೇ ಠಾಣೆಯ ಮಹಮದ್ ನೌಫರ್‍ನನ್ನ ಪ್ರೀತಿಸಿ ಓಡಿಹೋಗಿ ಮದುವೆಯಾಗಿದ್ದಳು. ತಂದೆ-ತಾಯಿ ಇಲ್ಲದ ರೇಣುಕಾ ಮದುವೆಯ ಮುಂಚೆ ತಮ್ಮ ಹಾಗೂ ತಂಗಿಯನ್ನ ಸಾಕುತ್ತಿದ್ದಳು. ಆದ್ರೆ, ಮದುವೆಯ ಬಳಿಕ ರೇಣುಕಾ, ತಮ್ಮ ಹಾಗೂ ತಂಗಿಯನ್ನ ನೋಡಿಕೊಳ್ಳುವುದಿಲ್ಲ ಎಂದಳು. ಅಪ್ಪ-ಅಮ್ಮ ಇಲ್ಲದ ರೇಣುಕಾಳ ತಂಗಿ-ತಮ್ಮನ ಕಣ್ಣೀರು ಆಕೆಗೆ ಕಾಣಿಸಲೇ ಇಲ್ಲ. ಕೂಡಲೇ ಹೆಣ್ಣುಮಗಳ ಕಣ್ಣೀರಿಗೆ ಕರಗಿದ ಎಸ್‍ಪಿ ಅಣ್ಣಾಮಲೈ, ನೀನು ಓದೋವರೆಗೂ ಓದಿಸಿ ನಿನಗೆ ಕೆಲಸ ಕೊಡಿಸೋ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದ್ದಾರೆ.
Advertisement
ರೇಣುಕಾಗಿ ಸಂಬಂಧದಲ್ಲೇ ಮದುವೆ ಫಿಕ್ಸ್ ಆಗಿತ್ತು. ಆದ್ರೆ, ಮದುವೆಗೆ 10 ದಿನ ಬಾಕಿ ಇರೋವಾಗ್ಲೆ ಆಕೆ ನೌಫರ್‍ನೊಂದಿಗೆ ವಿವಾಹವಾಗಿ ಬಂದಿದ್ದಾಳೆ. ಮದುವೆಗೆ ರೇಣುಕಾ ಸಹೋದರರು ಹಾಗೂ ಸಂಬಂಧಿಕರು ವಿರೋಧ ವ್ಯಕ್ತಪಡಿಸಿದ್ರು. ಸಂಬಂಧಿಕರು ನೌಫರ್ ಹಾಗೂ ರೇಣುಕಾರನ್ನ ಪೊಲೀಸ್ ಠಾಣೆಗೆ ಕರೆಸಿ ಎಸ್‍ಪಿ ಎದುರು ವಿಚಾರಣೆ ಮಾಡಿದ್ರು. ದಿಕ್ಕಿಲ್ಲದ ಸಂಸಾರದಲ್ಲಿ ಕಡುಬಡತನದಲ್ಲಿರುವ ನಮಗೆ ಇನ್ಯಾರು ದಿಕ್ಕು ಅಂತಾ ರೇಣುಕಾಳ ತಂಗಿ ಪೊಲೀಸ್ ಠಾಣೆಯಲ್ಲಿ ಕಣ್ಣೀರಿಟ್ಟಳು. ಆಕೆಯ ಕಣ್ಣೀರಿಗೆ ಕರಗಿದ ಅಣ್ಣಾಮಲೈ ಅಣ್ಣನ ಸ್ಥಾನದಲ್ಲಿ ನಿಂತು ಆಕೆಯ ಜವಾಬ್ದಾರಿ ಹೊತ್ತಿದ್ದಾರೆ.