– ಬಾಳೆಗದ್ದೆ ಗ್ರಾಮದ ಮಂದಿಗೆ ತೆಪ್ಪವೇ ಆಧಾರ
ಚಿಕ್ಕಮಗಳೂರು: ಅದು ತುಂಬಿ ಹರಿಯೋ ನದಿ. ಆಳ ನೋಡೊದ್ರೇನೆ ಭಯವಾಗತ್ತೆ. ಅಂತದ್ರಲ್ಲಿ ಆ ನದಿಯಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವೆರೆಗಿನ ಜನ ಜೀವ ಕೈಯಲ್ಲಿಡಿದು ಸಾಗ್ತಾರೆ. ಸ್ವಲ್ಪ ಯಾಮಾರಿದ್ರೂನೂ ಪರಲೋಕ ಗ್ಯಾರೆಂಟಿ.
ಹೌದು. ಚಿಕ್ಕಮಗಳೂರು ಜಿಲ್ಲೆ ಎನ್‍ಆರ್ ಪುರ ತಾಲೂಕಿನ ಬಾಳೆಗದ್ದೆ ಗ್ರಾಮದಲ್ಲಿ ತುಂಬಿ ಹರಿಯುತ್ತಿರುವ ಭದ್ರಾ ನದಿ, ಬಿದ್ದೋದ ತೂಗುಸೇತುವೆ ಒಂದೆಡೆಯಾದ್ರೆ, ಮತ್ತೊಂದೆಡೆ ಜೀವ ಕೈಯಲ್ಲಿ ಹಿಡಿದು ತೆಪ್ಪದಲ್ಲಿ ನದಿ ದಾಟ್ತಿರೋ ಮಕ್ಕಳು. ಮಕ್ಕಳಿಗಾಗಿ ಪ್ರತಿನಿತ್ಯ ಬೆಳಗ್ಗೆ, ಸಂಜೆ ಕಾಯ್ತಿರೋ ಪೋಷಕರು. ಊರಿನ ಜನ ಓಡಾಡೋಕೂ ಇದೇ ತೆಪ್ಪ, ಊರಿಗೆ ಬರಬೇಕಂದ್ರೂ ಇದೇ ತೆಪ್ಪ ಬೇಕು.
Advertisement
Advertisement
ಕಳೆದೊಂದು ದಶಕದಿಂದ ತೂಗುಸೇತುವೆಯನ್ನೇ ನೆಚ್ಚಿಕೊಂಡಿದ್ದ ಈ ಊರ ಮಂದಿಗೆ ಈಗ ತೆಪ್ಪವೇ ಆಧಾರ. ಆದರೆ ಕಳೆದ ಆಗಸ್ಟ್‍ನಲ್ಲಿ ಸುರಿದ ಮಹಾಮಳೆಗೆ ಇಲ್ಲಿನ ತೂಗುಸೇತುವೆ ಕೊಚ್ಚಿಹೋಗಿದೆ. ಬಾಳೆಗದ್ದೆಯಲ್ಲಿ ಸುಮಾರು 50 ಮನೆಗಳಿದ್ದು ಈ ಊರ ಮಂದಿ ಹೊರಗಡೆ ಹೋಗಬೇಕೆಂದರೆ ಇದೇ ಭದ್ರಾ ನದಿಯನ್ನು ದಾಟಿ ಹೋಗಬೇಕು. ವಿದ್ಯಾರ್ಥಿಗಳು ಶಾಲೆಗೆ ತೆರಳಬೇಕಂದರೆ ಇದೇ ತೆಪ್ಪದಲ್ಲಿ ಪ್ರಯಾಣ ಮಾಡಬೇಕು. ಈ ನದಿಯಲ್ಲಿ ಮೊಳಸೆಗಳಿವೆಯೆಂಬ ಮಾತು ಕೂಡ ಭಯಹುಟ್ಟಿಸಿದೆ ಎಂದು ವಿದ್ಯಾರ್ಥಿನಿ ವಿದ್ಯಾಶ್ರೀ ಹೇಳುತ್ತಾಳೆ.
Advertisement
Advertisement
ಮಳೆ ನಿಂತು 5 ತಿಂಗಳು ಕಳೆದರೂ ಈ ತೂಗುಸೇತುವೆಯ ದುರಸ್ತಿ ಮಾಡುವ ಕೆಲಸವನ್ನು ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಮಾಡುತ್ತಿಲ್ಲ. ಜಿಲ್ಲಾಡಳಿತ ತಾತ್ಕಾಲಿಕವಾಗಿ ಬೋಟ್ ವ್ಯವಸ್ಥೆ ಮಾಡಿದರೂ ತೂಗುಸೇತುವೆ ರಿಪೇರಿ ಮಾಡೋ ಮನಸ್ಸು ಮಾತ್ರ ಮಾಡುತ್ತಿಲ್ಲ. ಜಿಲ್ಲಾಡಳಿತದ ಕಾರ್ಯವೈಖರಿಗೆ ವಿದ್ಯಾರ್ಥಿಗಳು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಳೆಗಾಲದಲ್ಲಿ ರಣಭೀಕರವಾಗಿ ಹರಿಯುವ ಭದ್ರಾನದಿಯನ್ನು ತೆಪ್ಪದಲ್ಲಿ, ಬೋಟ್‍ನಲ್ಲಿ ದಾಟಲು ಸಾಧ್ಯವೇ ಇಲ್ಲ. ಈಗಲಾದ್ರೂ ಸಂಬಂಧಪಟ್ಟ ಜಿಲ್ಲಾಡಳಿತ, ಜನಪ್ರತಿನಿಧಿಗಳು ಕೂಡಲೇ ತೂಗುಸೇತುವೆಯನ್ನು ನಿರ್ಮಿಸಿ ಜನಸಾಮಾನ್ಯರ ಸಂಕಷ್ಟವನ್ನು ಬಗೆಹರಿಸಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.