– ಇದೇನಾ ಸಾಮಾಜಿಕ ಅಂತರ?
ಚಿಕ್ಕಮಗಳೂರು: ಸರ್ಕಾರ ಉಚಿತವಾಗಿ ನೀಡುತ್ತಿರುವ ಪಡಿತರಕ್ಕಾಗಿ ಬಂದ ಜನ ತಾವು ತಂದ ಬ್ಯಾಗ್ ಗಳನ್ನು ಸಾಲಾಗಿ ಜೋಡಿಸಿಟ್ಟು ಮರದ ಅಡಿ ಸಾಮಾಜಿಕ ಅಂತರವನ್ನ ಗಾಳಿಗೆ ತೂರಿ ಮಾತುಕತೆಯಲ್ಲಿ ತೊಡಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತೀಬೈಲು ಗ್ರಾಮದ ಸೊಸೈಟಿ ಮುಂಭಾಗ ನಡೆದಿದೆ.
ಕಳೆದೊಂದು ತಿಂಗಳಿಂದ ಇಡೀ ದೇಶವೇ ಕೊರೊನಾ ವೈರಸ್ ಹಾವಳಿಗೆ ಕಂಗಾಲಾಗಿದೆ. ಜನರ ಆರೋಗ್ಯದ ದೃಷ್ಠಿಯಿಂದ 21 ದಿನಗಳ ಕಾಲ ದೇಶವನ್ನು ಲಾಕ್‍ಡೌನ್ ಮಾಡಿದ್ದ ಪ್ರಧಾನಿ ಮೋದಿ ಇಂದು ಮತ್ತೆ ಮೇ 3ರವರೆಗೆ ಇಡೀ ದೇಶ ಲಾಕ್ ಡೌನ್‍ನಲ್ಲಿರುವಂತೆ ಆದೇಶಿಸಿದ್ದಾರೆ. ಜೊತೆಗೆ ಮನೆಯಲ್ಲೇ ಇರುವಂತೆ ಮನವಿ ಮಾಡಿಕೊಂಡು, ತುರ್ತು ಸಂದರ್ಭ ಮಾಸ್ಕ್ ಹಾಕಿಕೊಂಡು ಹೊರಬರುವಂತೆ ಮನವಿ ಮಾಡಿದ್ದಾರೆ. ಅಷ್ಟೆ ಅಲ್ಲದೇ ಬಡವರು, ರೈತರಿಗೆ ಮಾತ್ರ ಕೆಲ ವಿನಾಯಿತಿ ಎಂದು ಘೋಷಿಸಿದ್ದಾರೆ.
Advertisement
Advertisement
ಆದರೆ ಗ್ರಾಮೀಣ ಭಾಗದ ಜನ ಮಾತ್ರ ಸರ್ಕಾರದ ಆದೇಶ, ಪ್ರಧಾನಿಯ ಮನವಿ ಮತ್ತು ಕೊರೊನಾ ಭಯ ಯಾವುದೂ ಇಲ್ಲದಂತೆ ಎಂದಿನಂತೆ ಇದ್ದಾರೆ. ಇಂದು ಸೊಸೈಟಿ ಮುಂಭಾಗದ ದೃಶ್ಯವೇ ಇದಕ್ಕೆ ಸಾಕ್ಷಿಯಾಗಿದೆ. ಸಾಮಾಜಿಕ ಅಂತರದ ಅರಿವೇ ಇಲ್ಲದೆ, ಪಡಿತರಕ್ಕಾಗಿ ತಾವು ತಂದ ಬ್ಯಾಗ್‍ಗಳನ್ನ ಸರದಿ ಸಾಲಲ್ಲಿ ಜೋಡಿಸಿಟ್ಟು ಗಂಡಸರೆಲ್ಲಾ ಒಂದೆಡೆ ಸೇರಿದರೆ ಹೆಂಗಸರೆಲ್ಲಾ ಮತ್ತೊಂದೆಡೆ ಕೂತು ತಮ್ಮ ಸರದಿ ಬರುವವರೆಗೆ ಮಾತುಕತೆಯಲ್ಲಿ ತೊಡಗಿದ್ದರು.