ಚಿಕ್ಕಮಗಳೂರು: ನಗರಸಭೆ ಆಯುಕ್ತ ಚಂದ್ರಶೇಖರ್ ಅವರು ಧ್ವನಿವರ್ಧಕ ಹಾಕಿಕೊಂಡು ಆಟೋದಲ್ಲಿ ಕುಳಿತು ನಗರದ ಪ್ರಮುಖ ಬೀದಿ, ಬೀದಿ ಸುತ್ತಿ ಕೊರೊನಾ ವೈರಸ್ ಬಗ್ಗೆ ಜನಜಾಗೃತಿ ಮೂಡಿಸಿದ್ದಾರೆ.
ರಾಜ್ಯ ಸರ್ಕಾರ ಒಂಬತ್ತು ದಿನಗಳ ಕಾಲ ರಾಜ್ಯವನ್ನು ಲಾಕ್‍ಡೌನ್ ಮಾಡುತ್ತೆಂಬ ಸುದ್ದಿ ತಿಳಿಯುತ್ತಿದ್ದಂತೆ ದಿನಬಳಕೆ ಹಾಗೂ ಅಗತ್ಯ ವಸ್ತುಗಳನ್ನ ಖರೀದಿಸುವುಕ್ಕೆ ನಗರದಾದ್ಯಂತ ಜನ ಮುಗಿ ಬಿದ್ದಿದ್ದರು. ದಿನಸಿ ಅಂಗಡಿ, ತರಕಾರಿ ಮಾರುಕಟ್ಟೆಯಲ್ಲಿ ಜನಗಳ ಸಂತೆಯಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ನಗರಸಭೆ ಆಯುಕ್ತ ಚಂದ್ರಶೇಖರ್ ಅವರು ಆಟೋಗೆ ಮೈಕ್ ಕಟ್ಟಿಕೊಂಡು ನಗರದಾದ್ಯಂತ ಸಂಚರಿಸಿ ಜನಜಾಗೃತಿ ಮೂಡಿಸಿದರು.
Advertisement
ಮೆಡಿಕಲ್ ಸ್ಟೋರ್, ಪೆಟ್ರೋಲ್ ಬಂಕ್ ಸೇರಿದಂತೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆ. ಆಟೋದಲ್ಲಿ ಅನೌನ್ಸ್ ಮಾಡುತ್ತಾ ಕೊರೊನಾದ ಬಗ್ಗೆ ಜಾಗೃತಿ ಮೂಡಿಸಿದರು. ನಗರದ ಎಂ.ಜಿ.ರಸ್ತೆ ಮಧ್ಯೆ ಆಟೋ ನಿಲ್ಲಿಸಿ ಮೈಕ್‍ನಲ್ಲಿ ಜೋರಾಗಿ ಜನರಿಗೆ ಮನೆಯಿಂದ ಹೊರಬಾರದಂತೆ ಮನವಿ ಮಾಡಿಕೊಂಡರು.
Advertisement
50 ವರ್ಷ ದಾಟಿದ ಯಾರೂ ಮನೆಯಿಂದ ಹೊರಬರಬೇಡಿ. ಕೊರೊನಾ ವೈರಸ್ ಇಡೀ ವಿಶ್ವವನ್ನೇ ಕಿತ್ತು ತಿನ್ನುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರು ಹಾಗೂ ಶಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಡಿದರೆ ಮಾತ್ರ ಈ ಮಹಾಮಾರಿಯನ್ನ ನಿಯಂತ್ರಿಸಲು ಸಾಧ್ಯ. ಒಂದು ವಾರಗಳ ಕಾಲ ಯಾರೂ ಮನೆಯಿಂದ ಹೊರಬೇಡಿ ಎಂದು ತಿಳಿಸಿದರು.