ಚಿಕ್ಕಮಗಳೂರು: ಹಸಿರು ಮುತ್ತೈದೆ ಮುಡಿಗೆ ದುಂಡು ಮಲ್ಲಿಗೆ ಸೊಬಗು ಎನ್ನುವಂತೆ, ಮೋಡವೇ ಗಿರಿಗೆ ಮುತ್ತಿಕುತ್ತಿರುವಂತೆ, ಪಶ್ಚಿಮ ಘಟ್ಟದಲ್ಲಿ ಪ್ರಕೃತಿಯೇ ನಾಚುವ ಸೌಂದರ್ಯ ಹೊತ್ತು ಬೀಗುತ್ತಿರುವ ಮುಳ್ಳಯ್ಯನಗಿರಿ ಸೊಬಗಿಗೆ ಪ್ರವಾಸಿಗರು ಫಿದಾ ಆಗಿದ್ದಾರೆ.
ಹೌದು. ಪ್ರಕೃತಿ ಪ್ರಿಯರು, ಪ್ರವಾಸಿಗರ ಕಣ್ಣಿಗೆ ರಸದೌತಣ ನೀಡುವ ಕಾಫಿನಾಡ ಮುಳ್ಳಯ್ಯನಗಿರಿ ಸೌಂದರ್ಯದ ಬಗ್ಗೆ ಹೇಳಲು ಪದ ಸಾಲದು. ಬರೆಯಲು ಪುಟ ಸಾಲದು. ಪದಗಳಲ್ಲಿ ಪುಟದ ತುಂಬಾ ಬರೆದರೂ ಕಣ್ಣುಗಳು ಆನಂದಿಸುವ ವೈಭೋಗವೇ ಬೇರೆ. ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತ ಕಾಫಿನಾಡಲ್ಲಿ ಹೊಸದೊಂದು ಲೋಕವನ್ನೇ ಸೃಷ್ಟಿಸಿದೆ. ಮುಳ್ಳಯ್ಯನಗರಿಯಲ್ಲಿನ ಮೋಡಕವಿದ ವಾತವಾರಣದಲ್ಲಿ ಮೋಡದ ಕಣ್ಣಾಮುಚ್ಚಾಲೆ ಆಟಕ್ಕೆ ಪ್ರವಾಸಿಗರು ಮನಸೋತಿದ್ದಾರೆ.
ಮುಳ್ಳಯ್ಯನಗಿರಿ ಸೊಬಗಿಗೆ ಕೆಲವೇ ಕೆಲವು ಪ್ರವಾಸಿಗರು ಸಾಕ್ಷಿಯಾಗಿದ್ದಾರೆ. ನಿಮಿಷಕ್ಕೊಮ್ಮೆ ಬದಲಾಗೋ ಇಲ್ಲಿನ ಪ್ರಕೃತಿ ಸೌಂದರ್ಯ ನೋಡನೋಡುತ್ತಿದ್ದಂತೆ ಮತ್ತೊಂದು ಲೋಕ ಸೃಷ್ಟಿಸುತ್ತದೆ. ಅದರಲ್ಲೂ ಭಾನುವಾರದಂದು ಪ್ರವಾಸಿಗರು ಕಂಡ ಮುಳ್ಳಯ್ಯನಗಿರಿಯಂತೂ ಅದ್ಭುತ, ಅತ್ಯದ್ಭುತ ಎನ್ನುವಂತಿತ್ತು. ಇಲ್ಲಿನ ನೈಜ ಪ್ರಕೃತಿಯ ಸೊಬಗನ್ನ ಅಲ್ಲೇ ನಿಂತು ಸವಿಯೋದು ಕೋಟಿ ಪುಣ್ಯವೇ ಸರಿ ಎಂದು ಪ್ರವಾಸಿಗರು ಹಾಡಿ ಹೊಗಳಿದ್ದಾರೆ.
ಮುಳ್ಳಯ್ಯನಗಿರಿಯ ಸೌಂದರ್ಯಕ್ಕೆ ಸೋತು ಹೋದ ಪ್ರವಾಸಿಗರು ಅಲ್ಲಿನ ದೃಶ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಅದ್ಭುತ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದ್ದು, ಪ್ರಕೃತಿಯ ಅದ್ಭುತ ಸೊಬಗು ಹೊತ್ತು ಬೀಗುತ್ತಿರುವ ಮುಳ್ಳಯ್ಯನಗಿರಿ ಎಲ್ಲರ ಮನ ಗೆದ್ದಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರವಾಸಿಗರ ದಂಡೇ ಪ್ರಕೃತಿಯ ಸೊಬಗನ್ನು ಕಣ್ಣಾರೆ ಆನಂದಿಸಲು ಮುಳ್ಳಯ್ಯನಗಿರಿಯತ್ತ ಹರಿದು ಬರುತ್ತಿದೆ.