ಚಿಕ್ಕಮಗಳೂರು | ಸರ್ವೆಯರ್ ಆತ್ಮಹತ್ಯೆ ಕೇಸ್‌ – ಹನಿಟ್ರ್ಯಾಪ್‌ಗೆ ಬಲಿ ಶಂಕೆ

Public TV
1 Min Read
chikkamagaluru Mudigere Surveyor suicide case Honeytrap suspected

ಚಿಕ್ಕಮಗಳೂರು: ಮೂಡಿಗೆರೆಯಲ್ಲಿ (Mudigere) ಫೆ.13 ರಂದು ಆತ್ಮಹತ್ಯೆಗೆ ಶರಣಾಗಿದ್ದ ಸರ್ವೇಯರ್ ಶಿವಕುಮಾರ್ ಸಾವಿನ ರಹಸ್ಯ ಹೊರಬಿದ್ದಿದೆ. ಕಚೇರಿಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅವರು ಹನಿಟ್ರ್ಯಾಪ್‌ಗೆ (Honeytrap) ಒಳಗಾಗಿ ಆತ್ಮಹತ್ಯೆಗೆ ಶರಣಾದ್ರಾ ಎಂಬ ಅನುಮಾನ ಹುಟ್ಟಿದೆ.

ಸರ್ವೆಗೆ ಹೋದಾಗ ಪರಿಚಯವಾಗಿದ್ದ ಮಹಿಳೆ ಜೊತೆ ಫೋನಿನಲ್ಲಿ ಆತ್ಮೀಯವಾಗಿ ಮಾತನಾಡಿದ್ದ ಶಿವಕುಮಾರ್ ಬಳಿ ಮಹಿಳೆ ಹಣಕ್ಕಾಗಿ ಪೀಡಿಸುತ್ತಿದ್ದಳು. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಈ ವಿಚಾರ ಎಫ್ಐಆರ್‌ನಲ್ಲಿ ಕೂಡ ಪ್ರಸ್ತಾಪವಾಗಿದೆ. ಆಕೆಗೆ ಶಿವಕುಮಾರ್ ಈಗಾಗಲೇ ಒಂದೂವರೆ ಲಕ್ಷ ರೂ. ಹಣ ನೀಡಿದ್ದರು. ಆಕೆ ಪದೇ ಪದೇ ಹಣ ಕೇಳಿದ್ದಕ್ಕೆ ಅವರು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.

ಈ ಮಧ್ಯೆ ಶಿವಕುಮಾರ್ ಸರ್ವೆಯರ್ ಆಗಿದ್ದರಿಂದ ಸರ್ವೇ ವಿಚಾರವಾಗಿ ಸರಿಯಾಗಿ ಸರ್ವೆ ಮಾಡಿಲ್ಲ ಎಂದು ಇಬ್ಬರು ಅವರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಅಮಾನತ್ತಾಗುತ್ತೇನೆ ಎಂದು ಆತಂಕಕ್ಕೀಡಾಗಿದ್ದರು. ಹಾಗಾಗಿ, ಕಳೆದ ಎಂಟತ್ತು ತಿಂಗಳಿಂದ ಮನೆಯಲ್ಲಿ ಏಕಾಂಗಿಯಾಗಿದ್ದ ಶಿವಕುಮಾರ್ ಖಿನ್ನತೆಗೆ ಓಳಗಾಗಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ಮೃತ ಶಿವಕುಮಾರ್‌ಗೆ ಪತ್ನಿ ಹಾಗೂ ಮಗಳಿದ್ದು, ಮಗಳ ಓದಿಗಾಗಿ ಪತ್ನಿ ಹಾಗೂ ಮಗಳು ಬೆಂಗಳೂರಿನಲ್ಲಿ ವಾಸವಿದ್ದರು. ಮೃತ ಸರ್ವೆಯರ್ ಮೂಲತಃ ತುಮಕೂರು ಜಿಲ್ಲೆಯ ಬೆಣ್ಣೆಹಳ್ಳ ಮೂಲದವರು. ಕಳೆದ ಆರು ವರ್ಷಗಳಿಂದ ಮೂಡಿಗೆರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಮೂಡಿಗೆರೆ‌ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Share This Article