ಚಿಕ್ಕಮಗಳೂರು: ಎತ್ತಿನಗಾಡಿ ಸ್ಪರ್ಧೆಯಲ್ಲಿ ಭಾಗವಹಿಸಲೆಂದೇ ತಾಲೂಕಿನ ತೇಗೂರು ಗ್ರಾಮದ ರೈತ ಮಂಜುನಾಥ್ ಒಂದೇ ಒಂದು ಎತ್ತಿಗೆ 8 ಲಕ್ಷ ಹಣ ನೀಡಿ ತಂದು ಇದು ಚಿಕ್ಕಮಗಳೂರು ಜಿಲ್ಲೆಯ ಹೆಮ್ಮೆ ಎಂದಿದ್ದಾರೆ.
Advertisement
ನಾನು ಎಲ್ಲಿಗೆ ಹೋಗಿ ಜೋಡಿ ಎತ್ತಿನಗಾಡಿ ಸ್ಪರ್ಧೆಯಲ್ಲಿ ಗೆದ್ದರೂ ಚಿಕ್ಕಮಗಳೂರು ಹೆಸರು ಬರುತ್ತೆ ಅದೇ ನಮ್ಮ ಹೆಮ್ಮೆ ಎಂದಿದ್ದಾರೆ. ಕಳೆದೊಂದು ವರ್ಷದ ಹಿಂದೆ ಈ ಎತ್ತು ಇದೇ ಮಂಜುನಾಥ್‍ಗೆ ಮಾರಾಟವಾಗಿತ್ತು. ಆದರೆ ಕೊಟ್ಟ ಅಡ್ವಾನ್ಸ್ ಕೂಡ ವಾಪಸ್ ಬರಲಿಲ್ಲ. ಮೋಸ ಮಾಡಿದರು. ಬಳಿಕ ಅದೇ ಎತ್ತನ್ನ ತರಬೇಕು ಎಂದು ಅಂದಿನಿಂದ ಹಠಕ್ಕೆ ಬಿದ್ದ ಮಂಜುನಾಥ್, 10 ಲಕ್ಷವಾದರೂ ಪರವಾಗಿಲ್ಲ ಅದೇ ಎತ್ತು ಬೇಕೆಂದು ಎಂಟು ಲಕ್ಷ ಕೊಟ್ಟು ತಂದಿದ್ದಾರೆ. ಮೈಸೂರು ಜಿಲ್ಲೆಯಲ್ಲಿದ್ದ ಈ ಎತ್ತನ್ನ ತರಲು ಹೋಗುವಾಗ 10 ಲಕ್ಷದೊಂದಿಗೆ ಹೋಗಿದ್ದರು. 10 ಲಕ್ಷವಾದರೂ ಎತ್ತನ್ನ ತಂದೇ ತರಬೇಕು ಅಂತ. ಆದರೆ ಮಾತಿಗೆ ಕೂತಾಗ 7 ಲಕ್ಷದ 78 ಸಾವಿರಕ್ಕೆ ಮಾತುಕಥೆ ಮಾಡಿ ತಂದಿದ್ದಾರೆ. ಎತ್ತನ್ನ ಚಿಕ್ಕಮಗಳೂರಿಗೆ ತರುವಷ್ಟರಲ್ಲಿ 8 ಲಕ್ಷ ಖರ್ಚಾಗಿದೆ.
Advertisement
Advertisement
ಈ ಎತ್ತಿನ ವೇಗಕ್ಕೆ ಬೆಲೆಕಟ್ಟಲಾಗಲ್ಲ:
ಈ ಎತ್ತು ಹಳ್ಳಿಕಾರ್ ತಳಿಯದ್ದು. ಭಾರತೀಯ ರಾಸುಗಳ ತಳಿಗಳಲ್ಲೇ ಈ ತಳಿ ಶ್ರೇಷ್ಠವಾದ ತಳಿ, ಕೆಲಸಕ್ಕೂ ಸೈ. ಓಟಕ್ಕೂ ಸೈ. ದಣಿವರಿಯದೆ ದುಡಿಯುವ ಈ ಜಾತಿಯ ರಾಸುಗಳಿಗೆ ಭಾರೀ ಡಿಮ್ಯಾಂಡ್. ಆದರೆ ಈ ತಳಿಯ ರಾಸು ಈ ರೀತಿ 8 ಲಕ್ಷಕ್ಕೆ ಮಾರಾಟವಾಗಿರುವುದು ಇದೇ ಮೊದಲು. ಮಂಜುನಾಥ್, ಈ ರಾಸುವನ್ನ ಎಂಟು ಲಕ್ಷ ನೀಡಿ ತಂದಿರೋದು ದುಡ್ಸೋದಕ್ಕಲ್ಲ. ಬದಲಾಗಿ ರೇಸ್‍ಗಳಲ್ಲಿ ಓಡಿಸೋದಕ್ಕೆ. ಮಂಜುನಾಥ್‍ಗೆ ಜೋಡಿ ಎತ್ತಿನಗಾಡಿ ಸ್ಪರ್ಧೆ ಅಂದ್ರೆ ತುಂಬಾ ಇಷ್ಟ. ರಾಜ್ಯದಲ್ಲಿ ಎಲ್ಲೇ ಸ್ಪರ್ಧೆ ನಡೆದರೂ ಬಿಡುವುದಿಲ್ಲ. ಹೋಗಿ ಬರುತ್ತಾರೆ. ಹಾಗಾಗಿ ಎತ್ತಿನಗಾಡಿ ಸ್ಪರ್ಧೆಗೆಂದೇ ಮಂಜುನಾಥ್ ಈಗ 8 ಲಕ್ಷ ನೀಡಿ ಈ ರಾಸುವನ್ನ ತಂದು ಗಗನ್ ಎಂದು ಹೆಸರಿಟ್ಟಿದ್ದಾರೆ. ಊರಿನ ಜನ ತಮ್ಮ ಊರಿಗೆ ಬಂದ ನೂತನ ಅತಿಥಿಯ ಪಾದಪೂಜೆ ಮಾಡುವ ಮೂಲಕ ಊರಿಗೆ ಸ್ವಾಗತ ಕೋರಿದ್ದಾರೆ.
Advertisement
ಗಗನ್ ಬುದ್ಧಿವಂತ ಎತ್ತು:
ಈ ಗಗನ್ ಓಡೋದಕ್ಕೆ ನಿಂತರೆ ಕುದುರೆ-ಚಿರತೆ ಇದ್ದಂತೆ. ಈಗಾಗಲೇ ರಾಜ್ಯಾದ್ಯಂತ ಹತ್ತಾರು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಕೂಡ ಗೆದ್ದಿದೆ. ಅದಕ್ಕಾಗೇ ಮಂಜುನಾಥ್ ಈ ಎತ್ತಿಗೆ ಎಂಟು ಲಕ್ಷ ನೀಡಿ ತಂದಿದ್ದಾರೆ. ಈ ಎತ್ತು ಸ್ಪರ್ಧೆಗಳಲ್ಲಿ ನಂಬರ್ ಒನ್ ಹೋರಿ. ಎಡಕ್ಕೆ ಕಟ್ಟಿದರೂ ಸೈ. ಬಲಕ್ಕೆ ಕಟ್ಟಿದರೂ ಸೈ. ಓಡುವಾಗ ಬೇರೆ ಎತ್ತುಗಳ ಗಾಡಿ ಅಡ್ಡ ಬಂದರೂ ಕ್ಷಣಾರ್ಧದಲ್ಲಿ ಪಥ ಬದಲಿಸಿ ಗುರಿ ಮುಟ್ಟುತ್ತೆ. ಇದರ ಮುಂದೆ ಬೇರೆ ಯಾವ ಎತ್ತುಗಳು ಓಡಲಾರವು. ಓಡುವಾಗಲೂ ಅಡ್ಡದಿಡ್ಡಿ ಓಡಲ್ಲ. ಒಂದೇ ಲೈನಲ್ಲಿ ಚಿರತೆಯಂತೆ ಓಡುತ್ತೆ. ದೇಶದಲ್ಲೇ ಹಳ್ಳಿಕಾರ್ ತಳಿಯ ಎತ್ತು ಎಂಟು ಲಕ್ಷಕ್ಕೆ ಮಾರಾಟವಾಗಿದ್ದು ಇದೇ ಮೊದಲು. ಲಕ್ಷಾಂತರ ರೂಪಾಯಿ ಹಣ ನೀಡಿ ಕಾರು ತಂದು ಶೆಡ್‍ನಲ್ಲಿ ನಿಲ್ಲಿಸುತ್ತೇವೆ. ಈ ಎತ್ತನ್ನ ನೋಡಲು ಡೈಲಿ 50 ಜನ ಮನೆಬಾಗಿಲಿಗೆ ಬರುತ್ತಾರೆ. ಇದು ಚಿಕ್ಕಮಗಳೂರಿನ ಹೆಮ್ಮೆ ಅಂತಾರೆ ಊರಿನ ಯುವಕರು.