ಕಾಫಿನಾಡ ವಿವಾದಿತ ಸಾಹಿತ್ಯ ಸಮ್ಮೇಳನಕ್ಕೆ ಬ್ರೇಕ್

Public TV
1 Min Read
CKM SAHITYA SAMMELANA

ಚಿಕ್ಕಮಗಳೂರು: ಕಾಫಿನಾಡಿನ ಶೃಂಗೇರಿಯಲ್ಲಿ ವಾದ-ವಿವಾದ, ಆರೋಪ-ಪ್ರತ್ಯಾರೋಪಗಳ ಮಧ್ಯೆ ನಡೆಯುತ್ತಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬ್ರೇಕ್ ಬಿದ್ದಿದ್ದು, ಎರಡನೇ ದಿನದ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮುಂದೂಡಿದೆ.

ಪೊಲೀಸರ ಅನುಮತಿ ಇಲ್ಲದ ಕಾರಣ ಕಾರ್ಯಕ್ರಮವನ್ನು ಮುಂದೂಡಲು ಕನ್ನಡ ಸಾಹಿತ್ಯ ಪರಿಷತ್ ನಿರ್ಧರಿಸಿದೆ. ಸಮ್ಮೇಳನ ಅಧ್ಯಕ್ಷರ ವಿರುದ್ಧ ತೀವ್ರವಾದ ವಿರೋಧದ ಮಧ್ಯೆಯೂ ಶುಕ್ರವಾರ ಸಮ್ಮೇಳನ ಆರಂಭಗೊಂಡಿತ್ತು. ಮೆರವಣಿಗೆಗೆ ಪೊಲೀಸರ ಅನುಮತಿ ನೀಡದ ಕಾರಣ ಅಧ್ಯಕ್ಷರ ಮೆರವಣಿಗೆ ಇಲ್ಲದೆ ನೇರವಾಗಿ ವೇದಿಕೆ ಕಾರ್ಯಕ್ರಮದ ಮೂಲಕ ಸಮ್ಮೇಳನ ಆರಂಭವಾಗಿತ್ತು. ಆದರೆ ಸಮ್ಮೇಳನದ ಅಧ್ಯಕ್ಷ ಕಲ್ಕುಳಿ ವಿಠಲ್ ಹೆಗ್ಡೆ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ, ನಕ್ಸಲ್ ವಿರೋಧಿ ಹೋರಾಟ ಸಮಿತಿ, ಶ್ರೀರಾಮಸೇನೆ ಸೇರಿದಂತೆ ಕೆಲವರು ಅಧ್ಯಕ್ಷರ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದರು.

CKM SAHITYA SAMMELANA C

ಕಳೆದೊಂದು ತಿಂಗಳಿಂದಲೂ ಅಧ್ಯಕ್ಷರ ವಿರುದ್ಧ ಆಕ್ರೋಶ ಹೊರಹಾಕಿದ್ದ ಸಂಘಟನೆಗಳು ಶುಕ್ರವಾರ ಕೂಡ ಸಮ್ಮೇಳನದ ಮುಂಭಾಗ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಅನುಮತಿ ಇಲ್ಲದ ಕಾರಣ ಮಧ್ಯಾಹ್ನದ ಕಾರ್ಯಕ್ರಮವನ್ನು ಮೊಟಕುಗೊಳಿಸುವಂತೆ ಪೊಲೀಸರು ಸಾಹಿತ್ಯ ಪರಿಷತ್‍ಗೆ ಸೂಚಿಸಿದರು. ಆದರೆ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮ ನಿಲ್ಲಿಸಲು ಮೀನಾಮೇಶ ಎಣಿಸಿತ್ತು. ಅಷ್ಟೇ ಅಲ್ಲದೆ ಕಸಾಪ ಅನುಮತಿ ಇಲ್ಲದೆ ಧ್ವನಿವರ್ಧಕ ಬಳಸಿತ್ತು.

ಶುಕ್ರವಾರ ಕಾರ್ಯಕ್ರಮಕ್ಕೂ ಪೊಲೀಸರು ಅನುಮತಿ ನೀಡದ ಹಿನ್ನೆಲೆ ಕಸಾಪ ಜನವರಿ 11ರಂದು ಸಮ್ಮೇಳನದ ಎರಡನೇ ದಿನ ನಡೆಯಬೇಕಿದ್ದ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಿದೆ. ಮುಂದಿನ ದಿನಾಂಕವನ್ನು ನಿರ್ಧರವಾಗಿಲ್ಲ. ಸರ್ಕಾರದ ವಿರುದ್ಧ ಕಾರ್ಯಕ್ರಮ ಮಾಡಿ ಕಸಾಪ ಗೆದ್ದಿದೆ. ಸರ್ಕಾರದ ಸಹಕಾರವಿಲ್ಲದ ಕಾರಣ ಕಾರ್ಯಕ್ರಮ ನಿಲ್ಲಿಸಿ ಸರ್ಕಾರವೂ ಗೆದ್ದಿದೆ. ಅಧ್ಯಕ್ಷರ ವಿರುದ್ಧ ಶೃಂಗೇರಿ ಬಂದ್ ಮಾಡಿ ಸಂಘಟನೆಗಳು ಗೆದ್ದವು. ಆದರೆ ಸರ್ಕಾರ ಹಾಗೂ ಕಸಾಪ ಮಧ್ಯೆ ಹೈರಾಣಾಗಿದ್ದು ಮಾತ್ರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಂಬ ಮಾತುಗಳು ಕೇಳಿ ಬಂದಿವೆ.

CKM SAHITYA SAMMELANA A

Share This Article
Leave a Comment

Leave a Reply

Your email address will not be published. Required fields are marked *