ಚಿಕ್ಕಮಗಳೂರು: ಜಿಲ್ಲೆಯ ಚಂದ್ರದ್ರೋಣ ಪರ್ವತಗಳ ಸಾಲಿನ ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ದರ್ಗಾದಲ್ಲಿ ಇಂದಿನಿಂದ ಆರಂಭಗೊಂಡ ಮೂರು ದಿನಗಳ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರೆತಿದೆ.
ದತ್ತ ಜಯಂತಿಯ ಮೊದಲ ದಿನವಾದ ಇಂದು ಮೂರು ಸಾವಿರಕ್ಕೂ ಅಧಿಕ ಮಹಿಳೆಯರು ಬೃಹತ್ ಸಂಕೀರ್ತನಾ ಯಾತ್ರೆ ನಡೆಸಿ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ಮೆರವಣಿಗೆಯ ಬಳಿಕ ದತ್ತಪೀಠಕ್ಕೆ ತೆರಳಿ ಅನುಸೂಯ ದೇವಿಗೆ ವಿಶೇಷ ಪೂಜೆ-ಹೋಮ-ಹವನ ಸಲ್ಲಿಸಿ ದತ್ತಪಾದುಕೆ ದರ್ಶನ ಪಡೆದರು. ದತ್ತಪೀಠವನ್ನ ಹಿಂದೂಗಳಿಗೆ ಒಪ್ಪಿಸಬೇಕೆಂಬ ಕೂಗು ಎಂದಿನಂತೆ ಇತ್ತು.
Advertisement
ಅನುಸೂಯ ಜಯಂತಿಗೆ ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಮಹಿಳೆಯರು ನಗರದ ಬೋಳರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಯಾತ್ರೆ ಆರಂಭಿಸಿದರು. ಯಾತ್ರೆಯಲ್ಲಿ ದತ್ತಭಕ್ತರು ಹಾಗೂ ಮಹಿಳೆಯರಿಗೆ ಸಚಿವ ಸಿ.ಟಿ.ರವಿ ಮೆರೆವಣಿಗೆಯುದ್ದಕ್ಕೂ ಜೊತೆಗೆ ಬಂದು ಸಾಥ್ ನೀಡಿದರು. ಯಾತ್ರೆಯ ಬಳಿಕ ದತ್ತಪೀಠಕ್ಕೆ ತೆರಳಿದ ಮಹಿಳೆಯರು ದತ್ತಪೀಠದ ಪೂರ್ವ ದಿಕ್ಕಿಗೆ ಹಾಕಿರೋ ಚಪ್ಪರದಲ್ಲಿ ಭಜನೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನ ನೇರವೇರಿಸಿದರು. ಇದಕ್ಕೂ ಮುನ್ನ ಮೆರವಣಿಗೆಯ ಹಾದಿಯುದ್ದಕ್ಕೂ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.
Advertisement
Advertisement
ಮೂರು ದಿನದ ದತ್ತಜಯಂತಿ ಕಾರ್ಯಕ್ರಮದಲ್ಲಿ ಮೊದಲ ಪೂಜೆ ದತ್ತಾತ್ರೇಯ ಸ್ವಾಮಿಯ ತಾಯಿ ಅನುಸೂಯ ದೇವಿಗೆ ಮೀಸಲಾಗುತ್ತದೆ. ಪಂಚ ಪತಿವೃತೆಯರಲ್ಲಿ ಒಬ್ಬಳೆನಿಸಿಕೊಂಡಿರೋ ಅನುಸೂಯ ದೇವಿಯ ಪೂಜೆ ಮಾಡಿದ್ರೆ ಇಷ್ಟಾರ್ಥಗಳು ಸಿದ್ಧಿಸುತ್ತದೆಂಬ ನಂಬಿಕೆ ಭಕ್ತರಲ್ಲಿದೆ. ದತ್ತಪೀಠದಲ್ಲಿ ತ್ರಿಕಾಲ ಪೂಜೆಗೆ ಅವಕಾಶ ಕಲ್ಪಿಸಿ ಹಿಂದೂ ಅರ್ಚಕರ ನೇಮಕ ಮಾಡಬೇಕೆಂದು ಮಹಿಳಾ ಭಕ್ತರು ಸರ್ಕಾರಕ್ಕೆ ಆಗ್ರಹಿಸಿ, ದತ್ತಪೀಠವನ್ನು ಹಿಂದೂಗಳ ಪುಣ್ಯಕ್ಷೇತ್ರವೆಂದು ಘೋಷಿಸಿ, ಅನುಸೂಯ ದೇವಿಗೊಂದು ಭವನ ನಿರ್ಮಿಸಬೇಕೆಂದು ಆಗ್ರಹಿಸಿದರು. ಇದೇ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಹಿಳಾ ಭಕ್ತರು, ದತ್ತಪೀಠ ಹಿಂದೂಗಳ ಪೀಠ. ಅಯೋಧ್ಯೆ ನಮ್ಮದ್ದಾಯ್ತು, ಅದೇ ರೀತಿ ದತ್ತಪೀಠವೂ ಹಿಂದುಗಳಿಗೆ ಸೇರಬೇಕೆಂದು ಆಗ್ರಹಿಸಿದರು.
Advertisement
ದತ್ತಪೀಠಕ್ಕೂ ವಕ್ಫ್ ಬೋರ್ಡ್‍ಗೂ ಸಂಬಂಧವಿಲ್ಲ:
ದತ್ತಪೀಠದ ವಿವಾದ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಿ.ಟಿ.ರವಿ, ಈಗ ವಿವಾದವಿರೋದು ಹಿಂದೂ ಹಾಗೂ ಶಾಖಾದ್ರಿ ಕುಟುಂಬಕ್ಕೆ. ವಕ್ಫ್ ಬೋರ್ಡಿಗೆ ಯಾವುದೇ ಸಂಬಂಧವಿಲ್ಲ. ವಕ್ಫ್ ಬೋರ್ಡ್ ಅರ್ಜಿಯನ್ನ ಸುಪ್ರಿಂಕೋರ್ಟ್ ವಜಾ ಮಾಡಿದೆ. ಶಾಖಾದ್ರಿ ಕುಟುಂಬದೊಂದಿಗೆ ಮಾತನಾಡಬೇಕಿದೆ. ನ್ಯಾಯಾಲಯ ಕೂಡ ತ್ವರಿತಗತಿಯ ವಿಚಾರಣೆ ಮಾಡಬೇಕೆಂದು ವಿನಂತಿ ಮಾಡೋದರ ಜೊತೆ, ಆದಷ್ಟು ಬೇಗ ವಿವಾದವನ್ನ ಇತ್ಯರ್ಥಗೊಳಿಸುವಂತೆ ಸರ್ಕಾರಕ್ಕೆ ಒತ್ತಡ ತರುವ ಕೆಲಸವನ್ನ ಸಂಪುಟದ ಸಚಿವನಾಗಿ ನಾನು ಮಾಡ್ತೀನಿ ಎಂದಿದ್ದಾರೆ. 43 ವರ್ಷಗಳಿಂದ ದತ್ತಪೀಠದ ಮುಕ್ತಿ ಹೋರಾಟ ನ್ಯಾಯಾಲಯ ಹಾಗೂ ಹೊರಗಡೆ ನಿರಂತರವಾಗಿದೆ. ವಕ್ಫ್ ಬೋರ್ಡಿಗೆ ಸೇರಿಸಿದ್ದನ್ನ ಸುಪ್ರೀಂ ಕೋರ್ಟ್ ಇದು ವಕ್ಫ್ ಪ್ರಾಪರ್ಟಿ ಅಲ್ಲ ಅಂತ ಮತ್ತೆ ಮುಜರಾಯಿಗೆ ಸೇರಿಸಿದೆ ಎಂದಿದ್ದಾರೆ.
ಮೂರು ದಿನಗಳ ಕಾಲ ನಡೆಯೋ ಈ ಕಾರ್ಯಕ್ರಮದಲ್ಲಿ ಬುಧವಾರ ಹಾಗೂ ಗುರುವಾರ ಕಾಫಿನಾಡು ಸೂಕ್ಷ್ಮಾತಿ ಸೂಕ್ಷ್ಮ ಜಿಲ್ಲೆಯಾಗಿರಲಿದೆ. ನಾಳೆ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಶೋಭಾಯಾತ್ರೆಯುದ್ದಕ್ಕೂ ದತ್ತಭಕ್ತರ ಒಂದು ಹೆಜ್ಜೆಗೆ ಪೊಲೀಸರು ಎರಡು ಹೆಜ್ಜೆ ಹಾಕೋದರ ಜೊತೆ, ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಗುರುವಾರ ರಾಜ್ಯದ ಮೂಲೆ-ಮೂಲೆಗಳಿಂದ ಬರುವ 25 ಸಾವಿರಕ್ಕೂ ಅಧಿಕ ಭಕ್ತರು ಹೊನ್ನಮ್ಮನ ಹಳ್ಳದಲ್ಲಿ ಸ್ನಾನ ಮಾಡಿ ದತ್ತಪಾದುಕೆ ದರ್ಶನ ಮಾಡೋದ್ರ ಮೂಲಕ ದತ್ತಜಯಂತಿ ಸಮಾಪ್ತಿಗೊಳ್ಳಲಿದೆ.