ಚಿಕ್ಕಮಗಳೂರು: ಕೊರೊನಾ ಆತಂಕದಿಂದಾಗಿ ಮನೆಯಲ್ಲೇ ಇರಿ ಎಂದು ಪೊಲೀಸರು ಲಾಠಿ ಹಿಡಿದಾಯ್ತು, ಒದೆ ಕೊಟ್ಟಾಯ್ತು, ಕೇಸು ಹಾಕಾಯ್ತು, ಕೈ ಮುಗಿದಾಯ್ತು. ಜನ ಯಾವುದಕ್ಕೂ ಜಪ್ಪಯ್ಯ ಅನ್ನಲಿಲ್ಲ. ಹಾಗಾಗಿ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಪೊಲೀಸರು ವಿಭಿನ್ನವಾಗಿ ಜನಸಾಮಾನ್ಯರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಜಾಗತಿಕ ಶಾಪವಾಗಿ ಕಾಡುತ್ತಿರುವ ಕೊರೊನಾ ಮಹಾಮಾರಿ ವಿರುದ್ಧ ಜನರಿಗೆ ಎಲ್ಲಾ ರೀತಿಯ ಮನವಿ ಮಾಡಿಕೊಂಡಿದ್ದ ಪೊಲೀಸರು ಇದೀಗ ವಿಭಿನ್ನ ಪ್ರಯತ್ನಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಬಾಳೆಹೊನ್ನೂರು ಪೊಲೀಸರು ಬೀದಿ ನಾಟಕ ಪ್ರದರ್ಶಿಸುವ ಮೂಲಕ ಮಹಾಮಾರಿ ಕೊರೊನಾ ಕುರಿತು ಜಾಗೃತಿ ಮೂಡಿಸಿದರು. “ಮಾಡಲು ಕೊರೊನಾ ಸಂಹಾರ, ಪಾಲಿಸಿ ಸಾಮಾಜಿಕ ಅಂತರ” ಎಂಬ ಶೀರ್ಷಿಕೆಯಡಿ ಬೀದಿ ನಾಟಕ ಮಾಡಿ ಪೊಲೀಸರು ಜಾಗೃತಿ ಮೂಡಿಸಿದರು.
Advertisement
Advertisement
ಬಾಳೆಹೊನ್ನೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಾರ್ವಜನಿಕರು ಅನುಸರಿಸಬೇಕಾದ ಎಚ್ಚರಿಕೆ ಕ್ರಮಗಳು ಸೇರಿದಂತೆ ಕೊರೊನಾ ವೈರಸ್ ಉಂಟು ಮಾಡುತ್ತಿರುವ ಹಾನಿಯ ಕುರಿತು ಸಾರ್ವಜನಿಕರಿಗೆ ಎಳೆ ಎಳೆಯಾಗಿ ಬಿಡಿಸಿ ಮನಮುಟ್ಟುವಂತೆ ನಾಟಕ ಪ್ರದರ್ಶಿಸಿದರು. ವಿಶೇಷ ಅಂದ್ರೆ ಪೊಲೀಸ್ ಆಗಿ ಯಕ್ಷಗಾನ ಶೈಲಿಯಲ್ಲಿ ನಾಟಕ ಪ್ರದರ್ಶಿಸಿದ್ದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ವಿವಿಧ ಪ್ರಯತ್ನ ಮಾಡಿದ ಬಾಳೆಹೊನ್ನೂರು ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Advertisement
Advertisement
ಬೀದಿ ನಾಟಕ ಪ್ರದರ್ಶಿಸಿ ಜನಸಾಮಾನ್ಯರಿಗೆ ಜಾಗೃತಿ ಮೂಡಿಸಲು ಮುಂದಾಗ ಪೊಲೀಸರು ಖಾಕಿ ಸಮವಸ್ತ್ರದ ಮೇಲೆಯೇ ನಾಟಕದ ಉಡುಗೆ ತೊಟ್ಟು ರಸ್ತೆಗಳಲ್ಲಿ ನಾಟಕ ಮಾಡಿದ್ದು ವಿಶೇಷವಾಗಿತ್ತು. ಪೊಲೀಸರ ಈ ಬೀದಿ ನಾಟಕವನ್ನು ನಿಂತು ನೋಡಿದ ಜನ ಕೂಡ ಸಾಮಾಜಿಕ ಅಂತರ ಕಾಪಾಡಿಕೊಂಡೇ ಪೊಲೀಸರ ಜಾಗೃತಿಯ ನಾಟಕವನ್ನ ವೀಕ್ಷಿಸಿದರು.