ಚಿಕ್ಕಬಳ್ಳಾಪುರ: ಕೆಲ ದಿನಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಚಿಕ್ಕಬಳ್ಳಾಪುರ ಅನರ್ಹ ಶಾಸಕ ಸುಧಾಕರ್ ವಿರುದ್ಧ ವಾಚಾಮಗೋಚರ ಬೈದಿದ್ದ ಮಾಜಿ ಶಾಸಕ ಎಂ.ಶಿವಾನಂದ್ ಇಂದು ಇದೇ ಅನರ್ಹ ಶಾಸಕರನ್ನ ತ್ಯಾಗಮೂರ್ತಿ, ಅಭಿವೃದ್ಧಿಯ ಹರಿಕಾರ ಎಂದು ಹಾಡಿ ಹೊಗಳಿದ್ದಾರೆ.
ಇಂದು ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಶಿವಾನಂದ್ ಸುಧಾಕರ್ ಅವರನ್ನು ಹಾಡಿ ಹೊಗಳಿದ್ರು. ಅನರ್ಹ ಶಾಸಕ ಸುಧಾಕರ್ ಅವರನ್ನ ತ್ಯಾಗಮೂರ್ತಿ, ಚಿಕ್ಕಬಳ್ಳಾಪುರದ ಅಭಿವೃದ್ಧಿಯ ಹರಿಕಾರ ಎಂದು ಹೊಗಳಿದರು. ಜಿಲ್ಲೆಯ ಅಭಿವೃದ್ಧಿಗೋಸ್ಕರ ರಾಜೀನಾಮೆ ನೀಡಿದ ಏಕೈಕ ವ್ಯಕ್ತಿ ಸುಧಾಕರ್, ವಿಷನ್ 2020-2030 ಅಂತ ಗುರಿ ಹೊಂದಿರುವ ಇಂತಹ ವ್ಯಕ್ತಿಯನ್ನು ಚಿಕ್ಕಬಳ್ಳಾಪುರ ಉಪಚುನಾವಣೆಯಲ್ಲಿ ಗೆಲ್ಲಿಸಲು ನಾವು ಶಸ್ತ್ರಭ್ಯಾಸ ತಯಾರಿ ಮಾಡಿಕೊಂಡು ಚುನಾವಣೆಗೆ ಸಜ್ಜಾಗುವಂತೆ ಕರೆ ನೀಡಿದರು.
ಈ ಹಿಂದೆ ಆಗಸ್ಟ್ 24 ರಂದು ಚಿಕ್ಕಬಳ್ಳಾಪುರ ಹೊರವಲಯದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಶಿವಾನಂದ್, ಅನರ್ಹ ಶಾಸಕ ಸುಧಾಕರ್ ಚಿಕ್ಕಬಳ್ಳಾಪುರದ ಮಹಾರಾಜರು, ಜನರಿಗೆ ಚೆನ್ನಾಗಿ ಟೋಪಿ ಹಾಕ್ತಾರೆ. ಬಿಜೆಪಿಗೆ ಸೆಲ್ಫ್ ಸೇಲ್ ಆದರು ಎಂದು ಲೇವಡಿ ಮಾಡಿದ್ದರು. ಅಲ್ಲದೇ ಚಿಕ್ಕಬಳ್ಳಾಪುರ ಕಂಟ್ರಾಕ್ಟರ್ ಗಳನ್ನ ಹಿಂದಿಕ್ಕಿ ಎಲ್ಲಾ ಕಾಂಟ್ರಾಕ್ಟ್ ಕೆಲಸ ತಾನೇ ಮಾಡುತ್ತಿದ್ದ ಸುಧಾಕರ್, ಚಿಕ್ಕಬಳ್ಳಾಪುರದಲ್ಲಿ ಗನ್ ಸಂಸ್ಕೃತಿ ತಂದ ಎಂದು ಕಿಡಿ ಕಾರಿದ್ದರು.