ಚಿಕ್ಕಬಳ್ಳಾಪುರ: ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಮಲ ಅರಳಿದೆ. ಕಾಂಗ್ರೆಸ್ ಭದ್ರಕೋಟೆ ಎಂದೇ ಪ್ರಸಿದ್ಧಿಯಾಗಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ಕೋಟೆ ಛಿದ್ರ ಛಿದ್ರವಾಗಿದೆ.
ಕಳೆದ ಎರಡು ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಸುಧಾಕರ್ ಈ ಬಾರಿ ಮೂರನೇ ಬಾರಿಗೆ ಮರು ಅಯ್ಕೆ ಆಗಿ ಹ್ಯಾಟ್ರಿಕ್ ಜಯ ದಾಖಲಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಅಸ್ತಿತ್ವ ಕಾದಾಟವಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಇತ್ತು. ಆದರೆ ಈ ಬಾರಿ ಬಿಜೆಪಿಗೆ ಸುಧಾಕರ್ ಆಗಮನದಿಂದ ಬಿಜೆಪಿ ಬಲ ವೃದ್ಧಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆ ಆರಂಭ ಮಾಡಿದೆ. ಇನ್ನೂ ಭದ್ರಕೋಟೆ ಅಹಿಂದ ಮತಗಳೇ ನಿರ್ಣಾಯಕ ಎಂದು ಅಂಟಿಕೊಂಡಿದ್ದ ಕಾಂಗ್ರೆಸ್ ಸೋಲನ್ನು ಅನುಭವಿಸಿದೆ.
Advertisement
Advertisement
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಒಕ್ಕಲಿಗರ ಪ್ರಾಬಲ್ಯ ಕ್ಷೇತ್ರ. ಹೀಗಾಗಿ ಜೆಡಿಎಸ್‍ಗೆ ಕ್ಷೇತ್ರದಲ್ಲಿ ಸಾಕಷ್ಟು ಹಿಡಿತ ಇತ್ತು. ತನ್ನದೇ ಆದ ಮತ ಬ್ಯಾಂಕ್ ಹೊಂದಿದ್ದ ಜೆಡಿಎಸ್ ಸಹ ಪ್ರಬಲ ಪೈಪೋಟಿ ಕೊಡುವಲ್ಲಿ ವಿಫಲವಾಗಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ ಕ್ಷೇತ್ರದಲ್ಲಿ ಜೆಡಿಎಸ್‍ನ ಅಸ್ತಿತ್ವ ಕುಂದಿರೋದಕ್ಕೆ ಇವತ್ತಿನ ಫಲಿತಾಂಶವೇ ಸಾಕ್ಷಿ ಎಂಬಂತಾಗಿದೆ.
Advertisement
ಮೂರು ಪಕ್ಷದ ಅಭ್ಯರ್ಥಿಗಳು ಪಡೆದ ಮತಗಳು ಬಿಜೆಪಿ ಸುಧಾಕರ್ 84,389 ಮತಗಳು. ಕಾಂಗ್ರೆಸ್ ಪಕ್ಷದ ಎಂ ಅಂಜನಪ್ಪ 49,588 ಮತಗಳು. ಜೆಡಿಎಸ್‍ನ ಎನ್ ರಾಧಾಕೃಷ್ಣ 35,869 ಮತಗಳನ್ನು ಪಡೆದಿದ್ದಾರೆ. ಈ ಮೂಲಕ 34,801 ಮತಗಳ ಅಂತರದಲ್ಲಿ ಬಿಜೆಪಿ ಸುಧಾಕರ್ ಗೆಲವು ಸಾಧಿಸಿದ್ದಾರೆ. ಸುಧಾಕರ್ ಈ ಬಾರಿ ಹಿಂದೆಂದಿಗಿಂತಲೂ ಅತಿ ಹೆಚ್ಚಿನ ಮತಗಳ ಅಂತರದಿಂದಲೇ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಸುಧಾಕರ್ ವೈಯುಕ್ತಿಕ ವರ್ಚಸ್ಸು, ರಾಜಕೀಯ ತಂತ್ರಗಾರಿಕೆ ಸೇರಿದಂತೆ ಮೆಡಿಕಲ್ ಕಾಲೇಜು ಘೋಷಣೆ, ಮಂಚೇನಹಳ್ಳಿ ತಾಲೂಕು ಘೋಷಣೆ ಹಾಗೂ ಕ್ಷೇತ್ರದ ಅಭಿವೃದ್ಧಿ ವಿಚಾರಗಳು ಸುಧಾಕರ್ ಕೈ ಹಿಡಿದಿವೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.
Advertisement
ಚಿಕ್ಕಬಳ್ಳಾಪುರ ಕ್ಷೇತ್ರ ಒಕ್ಕಲಿಗರ ಪ್ರಾಬಲ್ಯ ಕ್ಷೇತ್ರವಾದರೂ ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ಮತಗಳೇ ನಿರ್ಣಾಯಕ. ಆದರೆ ಅದೇ ಲೆಕ್ಕಾಚಾರದಲ್ಲಿ ಕಾಂಗ್ರೆಸ್‍ಗೆ ಅಹಿಂದ ಮತಗಳು ಗೆಲುವು ತಂದುಕೊಡಲಿವೆ ಅಂತ ಆತ್ಮವಿಶ್ವಾಸದಲ್ಲಿದ್ದ ಕಾಂಗ್ರೆಸ್‍ಗೆ ಹಿನ್ನೆಡೆಯಾಗಿದೆ. ಕೊನೆ ಕ್ಷಣದಲ್ಲಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಬಂದ ಎನ್ ರಾಧಾಕೃಷ್ಣ ಭರ್ಜರಿ ಪ್ರಚಾರ ನಡೆಸಿದರು. ಸಾಕಷ್ಟು ತಂತ್ರಗಾರಿಕೆಗಳ ಮೂಲಕ ಜೆಡಿಎಸ್ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಹರಸಾಹಸ ಪಟ್ಟರು. ಆದರೆ ಕಳೆದ ಬಾರಿಗಿಂತ ಕಡಿಮೆ ಮತಗಳನ್ನ ಗಳಿಸುವುದರ ಮೂಲಕ ಜೆಡಿಎಸ್ ಮೂರನೇ ಸ್ಥಾನಕ್ಕೆ ಕುಸಿದಿದೆ.