ಚಿಕ್ಕಬಳ್ಳಾಪುರ: ಮನೆಯ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಕಾರು ಹರಿದು, ದಾರುಣವಾಗಿ ಸಾವನ್ನಪ್ಪಿರುವ ಮನಕಲುಕುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿ ನಡೆದಿದೆ.
ವೆಂಕಟೇಶ್ವರಲು-ಮೊನಿಷಾ ದಂಪತಿಯ ಗಿತಿಕ್(4) ಮೃತ ದುರ್ದೈವಿ ಮಗು. ಮಗುವಿನ ಮೇಲೆ ಕಾರು ಹರಿದ ದೃಶ್ಯ ಪಕ್ಕದ ಮನೆಯವರ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಗಿತಿಕ್ ಹಾಗೂ ಅಣ್ಣ ಸೋಹನ್ ಇಬ್ಬರೂ ಮನೆಯ ಮುಂದೆ ಇದ್ದ ಫೀಲ್ಡ್ ನಲ್ಲಿ ಆಟ ಆಡಲು ಹೋಗಿದ್ದು ವಾಪಾಸ್ ಬರುವಾಗ ಅಣ್ಣ ಸೈಕಲ್ ತುಳಿಯುತ್ತಿದ್ದರೆ, ತಮ್ಮ ಗಿತಿಕ್ ತಿರುವಿನಲ್ಲಿನ ನಡುರಸ್ತೆಯಲ್ಲಿ ಕೂತು ಏನೋ ಮಾಡ್ತಿದ್ದ. ಇದನ್ನೂ ಓದಿ: ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಪ್ರಕಟಿಸಿದ ಹೈಕೋರ್ಟ್
ಇದೇ ವೇಳೆ ಮನೆಗಳ ಕಡೆಯಿಂದ ಪ್ರಮುಖ ರಸ್ತೆಯತ್ತ ಫೋರ್ಡೋ ಕಾರು ಬಂದಿದೆ. ರಸ್ತೆಯಲ್ಲಿ ತಿರುವು ಇದ್ದುದರಿಂದ ಮಗು ಇರೋದನ್ನ ಗಮನಿಸಿದ ಕಾರು ಚಾಲಕ, ಏಕಾಏಕಿ ಮಗು ಮೇಲೆ ಕಾರು ಹರಿಸಿದ್ದಾರೆ. ನಂತರ ಕಾರು ಯಾಕೆ ಮುಂದೆ ಹೋಗ್ತಿಲ್ಲ ಅಂತ ಚಾಲಕ ಕೂಡಲೇ ಕೆಳಗಿಳಿದು ನೋಡಿದಾಗ ಚಕ್ರದಡಿ ಮಗು ಸಿಲುಕಿರುವುದು ಬೆಳಕಿಗೆ ಬಂದಿದೆ.
ತಕ್ಷಣ ಸ್ಥಳೀಯರೆಲ್ಲರೂ ಸೇರಿ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಗೆ ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡುವಷ್ಟರಲ್ಲಿ ಮಗು ಮೃತಪಟ್ಟಿದೆ. ಮಗುವಿನ ತಲೆ, ಮೂಗು, ಕೈ, ಕಾಲು ಹಾಗೂ ಎದೆ ಭಾಗದಲ್ಲಿ ಗಾಯಗಳಾಗಿ ರಕ್ತಸ್ರಾವವಾಗಿದೆ. ಮಗು ಮೃತಪಟ್ಟ ವಿಷಯ ತಿಳಿದ ಕಾರು ಚಾಲಕ ಕಾರು ಸಮೇತ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರ – ಶಿವನ ಭಕ್ತನಾಗಿದ್ದ ಗಾಂಜಾ ಆರೋಪಿ
ಇತ್ತ ವಿಷಯ ತಿಳಿದು ಆಸ್ಪತ್ರೆಗೆ ಆಗಮಿಸಿದ ಚಿಂತಾಮಣಿ ನಗರ ಠಾಣೆ ಸಿಪಿಯ ರಂಗರಾಮಯ್ಯ, ಮೃತದೇಹವನ್ನ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಕಾರಿನ ನಂಬರ್ ಆಧರಿಸಿ ಕಾರು ಆಂಧ್ರ ಮೂಲದ ಮದನಪಲ್ಲಿಯವರದ್ದು ಅಂತ ತಿಳಿದು ಬಂದಿದ್ದು, ಕಾರಿನ ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಇತ್ತ ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಈ ಸಂಬಂಧ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸುಳ್ಯದಲ್ಲಿ ಯುವತಿಯ ಅತ್ಯಾಚಾರಕ್ಕೆ ಯತ್ನ- ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು