– ಜಿಲ್ಲಾಡಳಿತದಿಂದ್ಲೇ ತರಬೇತಿ
– ಕೋಳಿ ಸಾಕಾಣಿಕೆಗೆ ಶೆಡ್ ನಿರ್ಮಾಣ
ಚಿಕ್ಕಬಳ್ಳಾಪುರ: ಸರ್ಕಾರ ಅನ್ನಭಾಗ್ಯ, ಕೃಷಿಭಾಗ್ಯ, ಶಾದಿಭಾಗ್ಯ ಎಂದು ನಾನಾ ಭಾಗ್ಯಗಳನ್ನ ಜಾರಿ ಮಾಡಿದೆ. ಆದರೆ ಸರ್ಕಾರಕ್ಕೆ ಸೆಡ್ಡು ಹೊಡೆಯುವಂತೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಜನರಿಗೆ ಕೋಳಿ ಭಾಗ್ಯ ಜಾರಿ ಮಾಡಿದೆ.
Advertisement
ಕೇಳೋಕೆ ವಿಚಿತ್ರವಾದರೂ ವಿನೂತನವಾದ ಕೋಳಿ ಭಾಗ್ಯ ಯೋಜನೆ ಜಾರಿ ಮಾಡಲು ರಾಜ್ಯ ರಾಜಧಾನಿಯಿಂದ ಕೂಗಳತೆ ದೂರದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಿರ್ಧರಿಸಿದೆ. ಹೌದು. ಜಿಲ್ಲಾಪಂಚಾಯತಿ ಹಾಗೂ ಜಿಲ್ಲಾಡಳಿತ ಜೊತೆಗೂಡಿ ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಿ ಸ್ವಾವಲಂಬಿಗಳಂತೆ ಮಾಡಲು ವಿಶಿಷ್ಠ ಕೋಳಿ ಭಾಗ್ಯ ಯೋಜನೆ ರೂಪಿಸಿದೆ. ಅಂದಹಾಗೆ ಜಿಲ್ಲೆಯ 21 ಮಹಿಳಾ ಸ್ವ-ಸಹಾಯ ಗುಂಪುಗಳ 400 ಮಂದಿ ಮಹಿಳೆಯರಿಗೆ ಕೋಳಿಭಾಗ್ಯ ಸಿಗಲಿದೆ. ಬರಗಾಲದಲ್ಲಿ ಕೂಲಿ ಕೆಲಸ ಇಲ್ಲದೆ ಪರದಾಡುತ್ತಿರೋ ಗ್ರಾಮೀಣಭಾಗದ ಮಹಿಳೆಯರ ಸಂಕಷ್ಟ ಅರಿತ ಜಿಲ್ಲಾಡಳಿತ ಈ ವಿನೂತನ ಯೋಜನೆ ಜಾರಿಗೆ ತರಲು ಮುಂದಾಗಿದೆ.
Advertisement
Advertisement
ಮೊದಲ ಹಂತದಲ್ಲಿ 400 ಮಂದಿ ಮಹಿಳೆಯರಿಗೆ ಕೋಳಿ ಸಾಕಾಣಿಕೆ ತರಬೇತಿ ನೀಡಿರೋ ಜಿಲ್ಲಾಡಳಿತ ತಲಾ ಮಹಿಳೆಯರಿಗೆ 100 ಕೋಳಿ ಸಮೇತ ಪಂಜರ ಹಾಗೂ ಕೋಳಿಗೆ ಬೇಕಾಗುವ ಆಹಾರವನ್ನ ಪೂರೈಸಲು ಮುಂದಾಗಿದೆ. ಇನ್ನೂ ಈ ಕೋಳಿಗಳಿಂದ ಉತ್ಪಾದನೆಯಾಗೋ ಮೊಟ್ಟೆಗಳನ್ನ ಹಣ ಕೊಟ್ಟು ತಾನೇ ಖರೀದಿಸಿ ಜಿಲ್ಲೆಯ ಅಂಗನವಾಡಿ, ಹಾಸ್ಟೆಲ್ ಹಾಗೂ ಗರ್ಭಿಣಿ ಮಹಿಳೆಯರಿಗೆ ವಿತರಿಸುವ ಉದ್ದೇಶ ಹೊಂದಿದೆ.
Advertisement
ಮಹಿಳೆಯರಿಗೆ ಬಿವಿ 360 ಅನ್ನೋ ವಿಶೇಷ ತಳಿಯ ಕಂದು ಬಣ್ಣದ ಕೋಳಿಗಳನ್ನ ನೀಡಲಾಗುತ್ತದೆ. 100 ಕ್ಕೆ 90 ದಿನ ಮೊಟ್ಟೆಯಿಡೋದು ಈ ಕೋಳಿಗಳ ವಿಶೇಷತೆ. ಹೀಗಾಗಿ ಮೊಟ್ಟೆ ಉತ್ಪಾದನೆಗಂತಲೇ ಈ ತಳಿಯ ಕೋಳಿ ಸಾಕಾಣಿಕೆ ಸಖತ್ ಫೇಮಸ್. ಹೀಗಾಗಿ ವರ್ಷದ ಬಹುತೇಕ ದಿನ ಮೊಟ್ಟೆಯಿಡೋ ಕೋಳಿಗಳಿಂದ ಆದಾಯವೂ ಆಧಿಕ. ಮತ್ತೊಂದೆಡೆ ಮಹಿಳೆಯರಿಂದ ಒಂದು ಮೊಟ್ಟೆಗೆ 6 ರೂಪಾಯಿ ಕೊಟ್ಟು ಜಿಲ್ಲಾಡಳಿತವೇ ಖರೀದಿಸುತ್ತಿದೆ.
ಈಗಾಗಲೇ 400 ಮಂದಿ ಮಹಿಳೆಯರಿಗೆ ಈ ಕೋಳಿ ಸಾಕಾಣಿಕೆ ಬಗ್ಗೆ ಜಿಲ್ಲಾಡಳಿತದಿಂದ ತರಬೇತಿ ಸಹ ನೀಡಲಾಗಿದ್ದು, ಮಹಿಳೆಯರು ಕೋಳಿ ಸಾಕಾಣಿಕೆ ಉತ್ಸುಕರಾಗಿದ್ದಾರೆ. ಇದೆಲ್ಲದರ ನಡುವೆ ಜಿಲ್ಲಾ ಪಂಚಾಯ್ತಿ ವತಿಯಿಂದ ಕೋಳಿ ಸಾಕಾಣಿಕೆಗೆ ಶೆಡ್ ಕೂಡ ನಿರ್ಮಾಣ ಮಾಡಿಕೊಡಲಾಗುವುದು. ಕೋಳಿ ಹಾಗೂ ಪಂಜರ ಖರೀದಿಗೆ 40000 ವೆಚ್ಚ ತಗುಲಲಿದ್ದು ಅದರಲ್ಲಿ ಕೇವಲ ಅರ್ಧದಷ್ಟು ಮೊತ್ತವನ್ನ ಮಹಿಳೆಯರು ಪಾವತಿಸಬೇಕಿದೆ. ಉಳಿದರ್ಧ ಮೊತ್ತವನ್ನ ಜಿಲ್ಲಾ ಖನಿಜಾ ಪ್ರತಿಷ್ಠಾನದಿಂದ ಜಿಲ್ಲಾಡಳಿತವೇ ಭರಿಸಲಿದೆ.
ಪರಿಶಿಷ್ಟ ಪಂಗಡ ಇಲಾಖೆಯಲ್ಲಿ ಈ ಯೋಜನೆಯನ್ನ ಪ್ರಾಯೋಗಿಕವಾಗಿ ಜಾರಿಗೆ ತಂದಿರೋ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಾಕಷ್ಟು ಯಶಸ್ಸು ಕಂಡಿದೆ. ಹೀಗಾಗಿ ಸದ್ಯ ಈ ಯೋಜನೆಯನ್ನ ಜಿಲ್ಲೆಯ ಇತರೆ ಸಮುದಾಯದ ಗ್ರಾಮೀಣ ಭಾಗದ ಬಡ ಮಹಿಳೆಯರಿಗೂ ಜಾರಿ ಮಾಡಿ ಮಹಿಳೆಯರಿಗೆ ಕೆಲಸ ಹಾಗೂ ಕೈ ತುಂಬಾ ಕಾಸು ಕೊಡುವ ಮುಖಾಂತರ ಮಹಿಳೆಯರ ಸ್ವಾವಲಂವಬಿಗಳಾಗುವಂತೆ ಮಾಡೋದು ಜಿಲ್ಲಾಧಿಕಾರಿಯ ಉದ್ದೇಶವಾಗಿದೆ.