ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿ ಝಿಕಾ ವೈರಸ್ (Zika Virus) ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ತ ಪರೀಕ್ಷೆಗೆ ಒಳಪಡಿಸಲಾಗಿದ್ದ 56 ಮಂದಿಯ ವರದಿಯೂ ನೆಗಟಿವ್ ಬಂದಿದೆ. ಇದರಿಂದ ಆರೋಗ್ಯ ಇಲಾಖೆ (Health Department) ನಿಟ್ಟುಸಿರು ಬಿಟ್ಟಿದೆ.
ಅಕ್ಟೋಬರ್ 10 ರಂದು ತಲಕಾಯಲಬೆಟ್ಟ ಗ್ರಾಮದಲ್ಲಿ ಪರೀಕ್ಷೆಗೆ ಸೊಳ್ಳೆಯೊಂದರಲ್ಲಿ ಝಿಕಾ ವೈರಸ್ ಪತ್ತೆಯಾಗಿತ್ತು. ತಕ್ಷಣವೇ ಎಚ್ಚೆತ್ತುಕೊಂಡಿದ್ದ ಆರೋಗ್ಯ ಇಲಾಖೆ ತಲಕಾಯಲಬೆಟ್ಟ ಗ್ರಾಮದ 5 ಕಿಮೀ ವ್ಯಾಪ್ತಿಯಲ್ಲಿರುವ 5 ಗ್ರಾಮಗಳಲ್ಲಿ 43 ಮಂದಿ ಗರ್ಭಿಣಿಯರು, 13 ಮಂದಿ ಜ್ವರಪೀಡಿತರ ರಕ್ತ ಮಾದರಿಯನ್ನ ಸಂಗ್ರಹ ಮಾಡಿ ಪರೀಕ್ಷೆಗೆ ಕಳುಹಿಸಿತ್ತು. ಇದನ್ನೂ ಓದಿ: ಅಭಿಮಾನಿಗೆ ಕಪಾಳಮೋಕ್ಷ: ಕ್ಷಮೆ ಕೇಳಿದ ನಟ ನಾನಾ ಪಾಟೇಕರ್
ಬೆಂಗಳೂರಿನ ನ್ಯಾಷನಲ್ ವೈರಾಲಜಿ ಸಂಸ್ಥೆಗೆ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. 56 ಮಂದಿಯ ವರದಿಯೂ ಈಗ ಆರೋಗ್ಯ ಇಲಾಖೆಗೆ ಲಭ್ಯವಾಗಿದ್ದು, ವರದಿ ನೆಗೆಟಿವ್ ಬಂದಿದೆ. ಇದರಿಂದ ಆರೋಗ್ಯ ಇಲಾಖೆಗೆ ಇದ್ದ ಆತಂಕ ದೂರವಾಗಿದೆ. ಇದನ್ನೂ ಓದಿ: ನನ್ನ ಪಕ್ಷಾಂತರದ ಎಫೆಕ್ಟ್ ಪಂಚ ರಾಜ್ಯಗಳ ಚುನಾವಣೆಯ ಮೇಲೂ ಬೀರಿದೆ – BJP ವ್ಯವಸ್ಥೆ ಹದಗೆಟ್ಟಿದೆ: ಜಗದೀಶ್ ಶೆಟ್ಟರ್
ಇನ್ನೂ 10 ಮಂದಿ ಜ್ವರಪೀಡಿತರ ರಕ್ತ ಮಾದರಿಯನ್ನ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬರಬೇಕಿದೆ. ಈ ಬಗ್ಗೆ ಮಾತನಾಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ್ ಕುಮಾರ್, ಜನ ವೈರಸ್ ಇಲ್ಲ ಅಂತ ಉದಾಸೀನ ಮಾಡೋದು ಬೇಡ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ತಲಕಾಯಲಬೆಟ್ಟ ಗ್ರಾಮದಲ್ಲಿ ಸೊಳ್ಳೆಗಳನ್ನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿಯೂ ವೈರಸ್ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಕುಟುಂಬದ ಆಸ್ತಿ ತನಿಖೆ ಮಾಡಿಸಲಿ: ಚೆಲುವರಾಯಸ್ವಾಮಿಗೆ ಕುಮಾರಸ್ವಾಮಿ ಸವಾಲ್