– ಕಚೇರಿ ಸಮಯದಲ್ಲಿ ಪಾರ್ಟಿ
– ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕರ ಪರದಾಟ
ಚಿಕ್ಕಬಳ್ಳಾಪುರ: ಸರ್ಕಾರದ ಸಂಬಳ ಪಡೆದು ಸಾರ್ವಜನಿಕರ ಕೆಲಸ ಮಾಡಬೇಕಾದ ಅಧಿಕಾರಿ, ಸಿಬ್ಬಂದಿ ಕಚೇರಿ ಸಮಯದಲ್ಲಿ ಪಾರ್ಟಿ ಮಾಡಿ ಮೋಜು ಮಸ್ತಿ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ.
ಚಿಂತಾಮಣಿ ತಹಶೀಲ್ದಾರ್ ವಿಶ್ವನಾಥ್ ಅವರು ಡಿ.6 ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅಂದು ಸಿಬ್ಬಂದಿಗೆ ಊಟೋಪಚಾರ ಪಾರ್ಟಿ ವ್ಯವಸ್ಥೆ ಮಾಡದ್ದಕ್ಕೆ ಇಂದು ತಮ್ಮ ಹುಟ್ಟು ಹಬ್ಬದ ಸವಿನೆನಪಿಗಾಗಿ ತಹಶೀಲ್ದಾರ್ ಕಚೇರಿಯ ಅಧಿಕಾರಿ ಸಿಬ್ಬಂದಿ ಸ್ಥಳೀಯ ವಿಲೇಜ್ ಅಕೌಂಟೆಂಟ್, ಪಿಡಿಓಗಳು ಸೇರಿದಂತೆ ಗ್ರಾಮಪಂಚಾಯತಿಗಳ ನೌಕರರಿಗೆ ಊಟೋಪಚಾರ ವ್ಯವಸ್ಥೆ ಮಾಡಿದ್ದಾರೆ.
ಚಿಂತಾಮಣಿ ನಗರ ಹೊರವಲಯದ ಪೆರಮಾಚನಹಳ್ಳಿ ಬಳಿಯ ನೇಚರ್ ಆರೋಮ ರೆಸ್ಟೋರೆಂಟ್ ನಲ್ಲಿ ಎಲ್ಲರಿಗೂ ತಹಶೀಲ್ದಾರ್ ಊಟೋಪಚಾರದ ವ್ಯವಸ್ಥೆ ಮಾಡಿದ್ದು ಮಧ್ಯಾಹ್ನ ಊಟದ ಸಮಯದ ನಂತರ ಎಲ್ಲಾ ಸಿಬ್ಬಂದಿಗಳು ತಮ್ಮ ಕಚೇರಿಗಳಿಗೆ ಬೀಗ ಜಡಿದು ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಸಹಜವಾಗಿ ತಹಶೀಲ್ದಾರ್ ಕಚೇರಿಗೆ ಬಂದ ಸಾರ್ವಜನಿಕರಿಗೆ ತಮ್ಮ ಕೆಲಸ ಕಾರ್ಯಗಳು ಆಗದೆ ಪರದಾಡಿದ್ದಾರೆ.
ಈ ವಿಚಾರವನ್ನು ಸಾರ್ವಜನಿಕರು ಪಬ್ಲಿಕ್ ಟಿವಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ಬಗ್ಗೆ ಪರೀಶೀಲನೆ ನಡೆಸಿದಾಗ ತಾಲೂಕು ಕಚೇರಿಯ ಅಧಿಕಾರಿ ಸಿಬ್ಬಂದಿ ಊಟೋಪಚಾರದಲ್ಲಿ ಭಾಗಿಯಾಗಿರೋದು ಖಾತ್ರಿಯಾಗಿದೆ. ಈ ಬಗ್ಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ತಹಶೀಲ್ದಾರ್ ವಿಶ್ವನಾಥ್, ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಿದ್ದ ಸಿಬ್ಬಂದಿಗೆ ಊಟೋಪಚಾರ ವ್ಯವಸ್ಥೆ ಮಾಡಿದ್ದೆವು. ಆದರೆ ಮಧ್ಯಾಹ್ನ ಊಟದ ಸಮಯದಲ್ಲಿ ಹೋಗಿ ಪುನಃ ಕಚೇರಿಗೆ ಹಾಜರಾಗಿದ್ದು, ಕಚೇರಿ ಎಂದಿನಂತೆ ಕಾರ್ಯನಿರ್ವಹಿಸಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಕಚೇರಿಯ ಬಹುತೇಕ ಸಿಬ್ಬಂದಿ ಹಾಗೂ ಅಧಿಕಾರಿಗಳು ತಹಶೀಲ್ದಾರ್ ವಿಶ್ವನಾಥ್ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದಕ್ಕೆ ದೂರದ ಊರಿನಿಂದ ಬಂದಿದ್ದ ಸಾರ್ವಜನಿಕರು ಪರದಾಡಿ ಹಿಡಿಶಾಪ ಹಾಕಿ ತೆರಳಿದ್ದಾರೆ.