– ಚಿಕಿತ್ಸೆ ನೀಡಿದ ವೈದ್ಯರು ಹೋಂ ಐಸೋಲೇಷನ್‍ಗೆ
ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ನಗರದ ಹಿರೇಬಿದನೂರು ನಿವಾಸಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಮುಂಜಾಗ್ರತಾ ಕ್ರಮವಾಗಿ ಗೌರಿಬಿದನೂರು ತಾಲೂಕಿನಾದ್ಯಾಂತ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಮಾರ್ಚ್ 31ರವರೆಗೂ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ತಹಶೀಲ್ದಾರ್ ರಾಜಣ್ಣ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಮೆಕ್ಕಾಗೆ ತಾಯಿ ಹಾಗೂ ಅಕ್ಕನೊಂದಿಗೆ ಪ್ರವಾಸಕ್ಕೆ ತೆರಳಿ ವಾಪಸ್ ಆಗಿದ್ದ 31 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಟ್ರಾವೆಲ್ ಏಜೆನ್ಸಿಯವರ ಬಸ್ ಮೂಲಕ ಹಿಂದೂಪುರಕ್ಕೆ ಬಂದಿದ್ದು, ಅಲ್ಲಿಂದ ಅವರ ಭಾವನ ಕಾರಿನ ಮೂಲಕ ಹಿಂದೂಪುರದಿಂದ ಗೌರಿಬಿದನೂರಿಗೆ ಆಗಮಿಸಿದ್ದರು.
Advertisement
Advertisement
ಮಾರ್ಚ್ 16ರ ಬೆಳಗ್ಗೆ ಮನೆಗೆ ಬಂದಿದ್ದ ವ್ಯಕ್ತಿಗೆ ಒಂದು ದಿನದ ತರುವಾಯ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಸ್ಥಳೀಯ ಖಾಸಗಿ ಕ್ಲಿನಿಕ್ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರು. ತದನಂತರ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ತಾಯಿ ಜೊತೆ ರಾಜೀವ್ ಗಾಂಧಿ ಆಸ್ಪತ್ರೆಗೆ ಹೋಗಿ ಪರಿಶೀಲನೆಗೆ ಒಳಗಾಗಿ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.
Advertisement
Advertisement
ಸದ್ಯ ವ್ಯಕ್ತಿಗೆ ಸೋಂಕು ತಗುಲಿರುವುದನ್ನು ಸ್ವತಃ ಸಚಿವ ಶ್ರೀರಾಮುಲು ಟ್ವೀಟ್ ಮೂಲಕ ಧೃಢೀಕರಿಸಿದ್ದಾರೆ. ಆದರೆ ಜಿಲ್ಲಾಡಳಿತ ಸಂಜೆಯವರೆಗೂ ಕಾದು ನೋಡೋಣ ಮತ್ತೊಂದು ವರದಿ ಬರಬೇಕಿದೆ ಎಂದು ಡಿಸಿ ಆರ್.ಲತಾ ತಿಳಿಸುತ್ತಿದ್ದಾರೆ. ಆದರೂ ಸದ್ಯ ಮುಂಜಾಗ್ರತಾ ಕ್ರಮವಾಗಿ ಸೋಂಕಿತ ವ್ಯಕ್ತಿಯ 24 ಮಂದಿಯನ್ನು ಗೌರಿಬಿದನೂರು ತಾಲೂಕು ಆಸ್ಪತ್ರೆಯಲ್ಲಿ ಐಸೋಲೇಷನ್‍ಗೆ ಒಳಪಡಿಸಿಲಾಗಿದೆ. ಇದರಲ್ಲಿ ಮೆಕ್ಕಾದಿಂದ ಇವರ ಜೊತೆ ವಾಪಸ್ ಬಂದಿದ್ದ ಇವರ ಅಕ್ಕ ಸಹ ಇದ್ದಾರೆ.
ಮತ್ತೊಂದೆಡೆ ಈ ವ್ಯಕ್ತಿಗೆ ಚಿಕಿತ್ಸೆ ನೀಡಿದ ಖಾಸಗಿ ಕ್ಲಿನಿಕ್ ವೈದ್ಯರೂ ಹೋಂ ಐಸೋಲೇಷನ್‍ಗೆ ಒಳಪಟ್ಟಿದ್ದಾರೆ. ಮನೆಗೆ ಬಂದ ಒಂದೂವರೆ ದಿನದಲ್ಲಿ ಈತ ಯಾರ್ಯಾರನ್ನು ಭೇಟಿ ಮಾಡಿದ್ದ ಎಂಬ ಟ್ರಾವೆಲ್ ಹಿಸ್ಟರಿಯನ್ನು ಜಿಲ್ಲಾಡಳಿತ ಕಲೆ ಹಾಕುತ್ತಿದೆ. ಈಗಾಗಲೇ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದು, ಇಡೀ ಜಿಲ್ಲೆಗೆ 144 ಸೆಕ್ಷೆನ್ ಜಾರಿ ಮಾಡಲು ಚಿಂತನೆ ನಡೆಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.