ಚಿಕ್ಕಬಳ್ಳಾಪುರ: ಮಾಜಿ ಸ್ಪೀಕರ್ ಹಾಗೂ ಹಾಲಿ ಶ್ರೀನಿವಾಪುರ ಶಾಸಕ ರಮೇಶ್ ಕುಮಾರ್ ಚಿಕ್ಕಬಳ್ಳಾಪುರ ತಾಲ್ಲೂಕಿನ ರಂಗಸ್ಥಳ ಗ್ರಾಮದ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಅಂದಹಾಗೆ 1977 ರ ಮೇ 22 ರಂದು ರಮೇಶ್ ಕುಮಾರ್ ಇದೇ ದೇವಾಲಯದಲ್ಲಿ ವಿವಾಹವಾಗಿದ್ದರು. ದೇವರ ದರ್ಶನ ಪಡೆದು ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಕುಮಾರ್, ಇತ್ತೀಚಿನ ರಾಜ್ಯದ ರಾಜಕೀಯ ಘಟನಾವಳಿಗಳಿಂದ ಮಾನಸಿಕವಾಗಿ ಸಾಕಷ್ಟು ನೊಂದಿದ್ದೆ. ಹೀಗಾಗಿ ದೇವರ ದರ್ಶನ ಪಡೆದು ಮನಸ್ಸು ನಿರಾಳ ಮಾಡಿಕೊಳ್ಳಲು ದೇವಾಲಯಕ್ಕೆ ಆಗಮಿಸಿದ್ದೇನೆ. ಇದು ಖಾಸಗಿ ಭೇಟಿ ಆಗಿದ್ದು ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಹೇಳಿದರು.
ಇದೇ ವೇಳೆ ಅನರ್ಹ ಶಾಸಕರ ವಿಚಾರಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಗೆ ಹೋಗುವುದಾಗಿ ಹೇಳುತ್ತಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ಏನು ತೀರ್ಮಾನ ಆಗುತ್ತೋ ನೋಡಬೇಕು. ಅಮೇಲೆ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಬೇಕು ಎಂದು ಹೇಳಿದರು.
ಉಪಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರಿಕೆ ವಿಚಾರ ಸಂಬಂಧ ಮಾತನಾಡಿ, ಉಪಚುನಾವಣೆಯೇ ಬಂದಿಲ್ಲ ಮಗು ಹುಟ್ಟಿದರೆ ತಾನೇ ಮಗುವಿಗೆ ಸೋಮಲಿಂಗನೋ ಭೀಮಲಿಂಗನೋ ಎಂದು ಹೆಸರಿಡೋದು. ಮದುವೆಯೇ ಆಗಿಲ್ಲ ಮಗುನೇ ಹುಟ್ಟಿಲ್ಲ ಮಗು ಗಂಡಾ ಹೆಣ್ಣಾ ಎಂದು ಕೇಳಿದರೆ ಹೇಗೆ ಎಂದು ಹಾಸ್ಯ ಮಾಡಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಬಹಳ ಪ್ರಭಾವಯುತ ನಾಯಕರಾಗಿದ್ದು, ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷ ಕಟ್ಟುವ ಕೆಲಸ ನಾವು ಮಾಡುತ್ತೇವೆ. ಶಾಸಕರ ಅನರ್ಹತೆಯನ್ನು ಸ್ಪೀಕರ್ ಸ್ಥಾನದಿಂದ ನಾನು ಮಾಡಿದ್ದೇನೆ. ಆದರೆ ಈಗ ಅದರ ಬಗ್ಗೆ ವ್ಯಾಖ್ಯಾನ ಮಾಡೋದು ಗೌರವ ಅಲ್ಲ. ಈಗ ಪಕ್ಷದ ಕಾರ್ಯಕರ್ತನಾಗಿ ಸವಾಲು ಇದೆ. ಪಕ್ಷವನ್ನು ಪ್ರಾಮಾಣಿಕವಾಗಿ ಕಟ್ಟುವ ಕೆಲಸ ನಾವೆಲ್ಲರೂ ಮಾಡುತ್ತೇವೆ. ಉಪಚುನಾವಣೆಯ ಅಭ್ಯರ್ಥಿಗಳ ಆಯ್ಕೆಯ ಹಂತಕ್ಕೆ ನಾವು ಹೋಗಿಯೇ ಇಲ್ಲ ಎಂದು ತಿಳಿಸಿದರು.