Connect with us

Chikkaballapur

ಮಂಗ್ಳೂರು ಕಿಚ್ಚಿಗೆ ‘ಕೈ’ ನಾಯಕರು ಎಲ್‍ಪಿಜಿ ಸುರಿದರು: ಸುಧಾಕರ್

Published

on

– ಗಲಭೆಗಳಿಗೆ ಕಾಂಗ್ರೆಸ್ ನೇರ ಕಾರಣ

ಚಿಕ್ಕಬಳ್ಳಾಪುರ: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ದೇಶದ ಅನೇಕ ರಾಜ್ಯಗಳಲ್ಲಿ ಆಗುತ್ತಿರುವ ಹಿಂಸಾಚಾರ ಗಲಭೆಗಳಿಗೆ ಕಾಂಗ್ರೆಸ್ ಕೈವಾಡವಿದೆ. ಹೀಗಾಗಿ ಇಷ್ಟು ಪ್ರಮಾಣದ ಗಲಭೆಗೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ ಎಂದು ಬಿಜೆಪಿ ಶಾಸಕ ಡಾ ಕೆ.ಸುಧಾಕರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕು ಚೀಡಚಿಕ್ಕನಹಳ್ಳಿ ಗ್ರಾಮದಲ್ಲಿ ಡಾಂಬರು ಕಾಮಗಾರಿ ಪರಿಶೀಲಿಸಿ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿರುವುದು ಕಾಂಗ್ರೆಸ್ ಎನ್ನುವುದು ಜಗಜ್ಜಾಹೀರು. ಅದು ಗುಟ್ಟಾಗಿ ಉಳದಿಲ್ಲ. ನನಗೆ ಬಂದ ಮಾಹಿತಿ ಪ್ರಕಾರ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷದವರು ಬೇರೆ ರಾಜ್ಯಗಳಿಂದಲೂ ಜನರನ್ನು ಮಂಗಳೂರಿಗೆ ಕರೆತಂದಿದ್ದಾರೆ. ಅದು ತನಿಖೆ ಬಳಿಕ ಜಗತ್ತಿಗೆ ಗೊತ್ತಾಗಲಿದೆ. ಕಾಂಗ್ರೆಸ್ಸಿಗರು ರಾಜಕೀಯವಾಗಿ ಹತಾಶರಾಗಿ ಇಷ್ಟು ಕೀಳುಮಟ್ಟದ ರಾಜಕಾರಣ ಮಾಡುತ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ 144 ಸೆಕ್ಷನ್ ಜಾರಿ ಇರುವಾಗ ಮಂಗಳೂರಿಗೆ ಕಾಂಗ್ರೆಸ್ ನಾಯಕರು ಯಾಕೆ ಹೋಗುತ್ತಾರೆ? ಅವರು ಹೋಗಿದ್ದು ಬೆಂಕಿ ನಂದಿಸುವುದಕ್ಕಲ್ಲ, ಬದಲಾಗಿ ಬೆಂಕಿಗೆ ತುಪ್ಪದ ಬದಲು ಎಲ್‍ಪಿಜಿ ಹಾಕಿ ಇನ್ನೂ ಹೆಚ್ಚಾಗಿ ಉರಿಸುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಈ ನಡೆ ಇದು ಖಂಡನೀಯ ಎಂದು ಗುಡುಗಿದರು.

ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಗೃಹಸಚಿವ ಬಸವರಾಜ ಬೊಮ್ಮಾಯಿ ಮಂಗಳೂರಿಗೆ ಭೇಟಿ ನೀಡಿದ್ದು, ಯಾವುದೇ ಕಾರಣಕ್ಕೂ ಲಾಠಿ ಚಾರ್ಜ್, ಗೋಲಿಬಾರ್ ಮಾಡಬೇಡಿ ಎಂದು ಪೊಲೀಸರಿಗೆ ಆದೇಶಿಸಿದ್ದಾರೆ. ಆದರೆ ಮುಗ್ದ ಜನರನ್ನು ಕೆಲ ರಾಜಕೀಯ ಪಕ್ಷಗಳು ದಿಕ್ಕು ತಪ್ಪಿಸಿದ ಪರಿಣಾಮ ಅವರು ಬೀದಿಗೆ ಬಂದಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಮನವರಿಕೆ ಮಾಡುವ ಕೆಲಸ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಕರ್ನಾಟಕದ ಜನರು ಮುಗ್ದರು, ಶಾಂತಿ ಪ್ರಿಯರು. ಈ ಕಾಯಿದೆಯಿಂದ ನಮಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರು.

ಸಿಎಎ ಹಾಗೂ ಎನ್‍ಆರ್‍ಸಿ ಎರಡು ಬೇರೆ ಬೇರೆ ಆಗಿವೆ. ಆದರೆ ಕಾಂಗ್ರೆಸ್ ನಾಯಕರು ತಪ್ಪು ಮಾಹಿತಿಯನ್ನು ಜನರಿಗೆ ನೀಡುವ ಮೂಲಕ ಭಯವನ್ನು ಉಂಟು ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲಿ ಮಾತ್ರ ಗಲಾಟೆ ಮಾಡಿಸಬೇಕು ಎನ್ನುವ ಷಡ್ಯಂತ್ರವನ್ನು ಕಾಂಗ್ರೆಸ್ ರೂಪಿಸಿದೆ. ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಯಾವುದೇ ಗಲಭೆಗಳು ಆಗಿಲ್ಲ. ಆದರೆ ಅಸ್ಸಾಂ, ಕರ್ನಾಟಕನಲ್ಲಿ ಗಲಭೆ ಉಂಟಾಗಿದೆ ಎಂದು ತಿಳಿಸಿದರು.

Click to comment

Leave a Reply

Your email address will not be published. Required fields are marked *