– ಪಿಸಿಬಿ ಅಧ್ಯಕ್ಷ ಸ್ಥಾನ ನೀಡದಿದ್ರೆ ಸಾಮೂಹಿಕ ರಾಜೀನಾಮೆ: ಬೆಂಬಲಿಗರಿಂದ ಬೆದರಿಕೆ
ಬೆಂಗಳೂರು/ ಚಿಕ್ಕಬಳ್ಳಾಪುರ: ವಿಪ್ ಜಾರಿಯಾಗಿದ್ದರೂ ಅಧಿವೇಶಕ್ಕೆ ಗೈರು ಆಗುವ ಮೂಲಕ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಡಾ.ಸುಧಾಕರ್ ಮೈತ್ರಿ ಸರ್ಕಾರದ ವಿರುದ್ಧ ಮತ್ತೆ ಅಸಮಾಧಾನವನ್ನು ಹೊರಹಾಕಿದ್ದಾರೆ.
ಪಬ್ಲಿಕ್ ಟಿವಿ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕರು, ಟಿವಿಯವರೊಂದಿಗೆ ಮಾತನಾಡುವುದಿಲ್ಲ. ಸದನಕ್ಕೆ ಹಾಜರಾಗದ ಕುರಿತು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ನಾನು ಸದ್ಯಕ್ಕೆ ಏನು ಹೇಳುವುದಿಲ್ಲ ಎಂದು ಕುತೂಹಲದ ಹೇಳಿಕೆ ನೀಡಿದ್ದಾರೆ.
Advertisement
ಸಚಿವ ಸ್ಥಾನ ಮತ್ತು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡದ್ದಕ್ಕೆ ಮೈತ್ರಿ ಸರ್ಕಾರದ ವಿರುದ್ಧ ಪರೋಕ್ಷವಾಗಿ ಅಸಮಾಧಾನವನ್ನು ಹೊರಹಾಕಿ ಸಿದ್ದರಾಮಯ್ಯ ಅವರೇ ನಮ್ಮ ನಾಯಕರು ಎಂದು ಸುಧಾಕರ್ ಈ ಹಿಂದೆ ಹೇಳಿಕೆ ನೀಡಿದ್ದರು.
Advertisement
Advertisement
ಇತ್ತ ಚಿಕ್ಕಬಳ್ಳಾಪುರಲ್ಲಿ ಸುಧಾಕರ್ ಅವರ ಬೆಂಬಲಿಗರು ಸುದ್ದಿಗೋಷ್ಠಿ ನಡೆಸಿ, ಸಿಎಂ ಕುಮಾರಸ್ವಾಮಿ ಉದ್ದೇಶ ಪೂರ್ವಕವಾಗಿ ನಮ್ಮ ಸಚಿವರ ಹೆಸರನ್ನು ಪರಿಸರ ನಿಯಂತ್ರಣ ಮಂಡಳಿ (ಪಿಸಿಬಿ) ಅಧ್ಯಕ್ಷ ಸ್ಥಾನದಿಂದ ಕೈಬಿಟ್ಟಿದ್ದಾರೆ. ಸುಧಾಕರ್ ಅವರಿಗೆ ಪಿಸಿಬಿ ಅಧ್ಯಕ್ಷ ಸ್ಥಾನ ನೀಡಲೇ ಬೇಕು. ಇಲ್ಲವಾದಲ್ಲಿ ನಗರಸಭೆ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ಎಪಿಎಂಸಿ, ಪಿಎಲ್‍ಡಿ ಬ್ಯಾಂಕ್‍ನ ಎಲ್ಲಾ ಚುನಾಯಿತ ಸ್ಥಾನಗಳಿಗೂ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
Advertisement
ಸುಧಾಕರ್ ಅವರು ಬೆಂಬಲಿಗರ ಮೂಲಕ ರಾಜೀನಾಮೆ ದಾಳ ಉರುಳಿಸಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಪಡೆಯುವುದಕ್ಕೆ ರಣತಂತ್ರ ರೂಪಿಸಿದ್ದಾರೆ. ಹೀಗಾಗಿ ಅಧಿವೇಶನಕ್ಕೂ ಗೈರಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿದ್ದಾರೆ ಎನ್ನುವ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv