ಚಿಕ್ಕಬಳ್ಳಾಪುರ: ಜಮೀನು ಹಾಗೂ ರಾಗಿ ಫಸಲಿಗಾಗಿ ನಡೆದ ಕಾದಾಟದಲ್ಲಿ ಗ್ರಾಮಪಂಚಾಯ್ತಿ ಸದಸ್ಯೆಯ ಪತಿಗೆ ಗ್ರಾಮಸ್ಥನೊರ್ವ ಚಾಕುವಿನಿಂದ ಇರಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಜರಬಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವೆಂಕಟರೋಣ, ಕೃಷ್ಣ ಎಂಬಾತನಿಗೆ ಚಾಕುವಿನಿಂದ ಇರಿದಿದ್ದಾನೆ. ಆರೋಪಿ ವೆಂಕಟರೋಣನನ್ನ ಮಂಚೇನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಕು ಇರಿತಕ್ಕೊಳಗಾದ ಕೃಷ್ಣ ಮಂಚೇನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.
ಸರ್ಕಾರಿ ಕರಾಬು ಜಾಗದಲ್ಲಿ ವೆಂಕಟರೋಣ ಹಾಗೂ ಗ್ರಾಮದ ಮತ್ತೋರ್ವ ಮಹಿಳೆ ಭದ್ರಮ್ಮ ಎಂಬವರು ಅಕ್ಕಪಕ್ಕದಲ್ಲೇ ಉಳುಮೆ ಮಾಡಿ ರಾಗಿ ಬೆಳೆ ಬೆಳೆದಿದ್ದರು. ಆದರೆ ವೆಂಕಟರೋಣ ತಾನು ಬೆಳೆದ ರಾಗಿ ಫಸಲಿನ ಜೊತೆ ಭದ್ರಮ್ಮ ಬೆಳೆದ ರಾಗಿ ಬೆಳೆಯನ್ನೂ ಕಟಾವು ಮಾಡಿಕೊಂಡಿದ್ದಾನಂತೆ. ಹೀಗಾಗಿ ಗ್ರಾಮಪಂಚಾಯ್ತಿ ಸದಸ್ಯೆ ಪತಿ ಕೃಷ್ಣ ಬಳಿ ಭದ್ರಮ್ಮ ಆಳಲು ತೋಡಿಕೊಂಡಿದ್ದಾರೆ. ಈ ವೇಳೆ ಗುಂಪು ಕಟ್ಟಿಕೊಂಡ ಹೋದ ಕೃಷ್ಣ ತನ್ನದೇ ಟ್ರ್ಯಾಕ್ಟರ್ ಮೂಲಕ ವೆಂಕಟರೋಣ ಕಟಾವು ಮಾಡಿದ್ದ ರಾಗಿತೆನೆ ತುಂಬಿಕೊಂಡು ಬಂದಿದ್ದಾನೆ.
ಇದರಿಂದ ಕುಪಿತಗೊಂಡ ವೆಂಕಟರೋಣ ಟ್ರ್ಯಾಕ್ಟರ್ ಅಡ್ಡಗಟ್ಡಿ ಕೃಷ್ಣನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದವೇ ನಡೆದು ಹೋಗಿ ಏಕಾಏಕಿ ಕೃಷ್ಣ ಹಿಂಬದಿಗೆ ವೆಂಕಟರೋಣ ಚಾಕುವಿನಿಂದ ಇರಿದೇ ಬಿಟ್ಟಿದ್ದಾನೆ.