ಚಿಕ್ಕಬಳ್ಳಾಪುರ: ನಾನು ಕೂಡ ನೆರೆ ಪರಿಹಾರ ಕೇಳಿದ್ದೇನೆ. ಆದರೆ ನನಗೆ ಯಾಕೆ ಶೋಕಾಸ್ ನೋಟಿಸ್ ನೀಡಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಪ್ರಶ್ನಿಸಿದ್ದಾರೆ.
ನಗರದ ಜಿಲ್ಲಾಡಳಿತ ಭವನದ ಬಳಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಯಾರೇ ಆಗಲಿ ನೆರೆ ಪರಿಹಾರ ಕೇಳುವುದು ಖಂಡಿತಾ ತಪ್ಪಲ್ಲ. ನಾನು ಸಹ ನೆರೆ ಪರಿಹಾರ ಕೇಳಿದ್ದೇನೆ. ನನಗೆ ಶೋಕಾಸ್ ನೋಟಿಸ್ ಕೊಟ್ಟಿಲ್ಲ. ಆದರೆ ಪಕ್ಷದ ವಿಚಾರವನ್ನ ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪ ಮಾಡಬೇಕು. ಸಾರ್ವಜನಿಕ ವಿಷಯವನ್ನ ಸಾರ್ವಜನಿಕ ವೇದಿಕೆಯಲ್ಲಿ ಪ್ರಸ್ತಾಪ ಮಾಡಬೇಕು. ಇದು ಬಿಟ್ಟು ಪಕ್ಷದ ಆಂತರಿಕ ವಿಚಾರವನ್ನ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡೋದು ಸರಿಯಲ್ಲ ಎಂದು ಹೇಳಿದರು.
Advertisement
Advertisement
ಪಕ್ಷದಲ್ಲಿ ಆಂತರಿಕ ಶಿಸ್ತು ಅನ್ನೋದಿದೆ. ಯಾವುದೇ ವಿಚಾರದಲ್ಲಿ ನನ್ನಷ್ಟು ಕಠೋರವಾಗಿ ಮಾತನಾಡವವರಿಲ್ಲ. ನಾನು ಯಾವ ವಿಷಯವನ್ನ ಎಲ್ಲಿ ಮಾತನಾಡಬೇಕೋ ಅಲ್ಲೇ ಮಾತನಾಡ್ತೇನೆ. ಒಂದು ವೇಳೆ ಕೇಂದ್ರ ಒಂದು ರಾಜ್ಯಕ್ಕೆ ಪರಿಹಾರ ಕೊಟ್ಟು ನಮಗೆ ನೆರೆ ಪರಿಹಾರ ಕೊಡಲಿಲ್ಲ ಅಂದರೆ ಮೊದಲು ಧ್ವನಿ ಎತ್ತುವವನೇ ನಾನು ಅಂತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ ಶೋಕಾಸ್ ನೀಡಿರುವ ಬಿಜೆಪಿ ಶಿಸ್ತು ಸಮಿತಿಯ ಕ್ರಮವನ್ನ ಸಮರ್ಥಿಸಿಕೊಂಡರು.
Advertisement
ಕೇಂದ್ರ ಸರ್ಕಾರ ರಾಜ್ಯದ ವರದಿಯನ್ನ ತಿರಸ್ಕರಿಸಿದೆ ಎಂಬುದರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನೆರೆ ಪರಿಹಾರದ ಅಂಕಿ ಅಂಶಗಳ ವರದಿಯನ್ನ ಕೇಂದ್ರ ಸರ್ಕಾರ ತಿರಸ್ಕಾರ ಮಾಡಿಲ್ಲ. ಕೆಲವೊಂದು ಸ್ಪಷ್ಟನೆಗಳನ್ನ ಕೇಳಿದೆ ಅಷ್ಟೇ. ಅಂದಾಜು ಪಟ್ಟಿಗೂ ವಾಸ್ತವಿಕವಾಗಿಯೂ ಸಾಕಷ್ಟು ವ್ಯತ್ಯಾಸವಾಯಿತು. ಹೀಗಾಗಿ ಹೊಸದಾಗಿ ಸ್ಪಷ್ಟಪಡಿಸಿದ ವರದಿ ನೀಡಲಿದ್ದೇವೆ ಎಂದರು.
Advertisement
ರಾಜ್ಯ ಸರ್ಕಾರದಿಂದ ನೆರೆ ಸಂತ್ರಸ್ತರಿಗೆ ತಾತ್ಕಾಲಿಕ 10000 ರೂ. ಪರಿಹಾರ ನೀಡಲಾಗಿದ್ದು, ಮನೆ ಕಳೆದುಕೊಂಡವರಿಗೆ 5 ಲಕ್ಷ ಕೊಡುವ ತೀರ್ಮಾನ ಮಾಡಿದ್ದೇವೆ. ಮೊದಲ ಕಂತಿನಲ್ಲಿ ಕ್ಯಾಬಿನೆಟ್ ನಲ್ಲಿ ಅನುಮತಿ ಪಡೆದು 1 ಲಕ್ಷ ನೀಡಲು ಡಿಸಿಗಳಿಗೆ ಹಣ ಕೂಡ ಕಳುಹಿಸಲಾಗಿದೆ. ಯಾವುದೇ ಜಿಲ್ಲಾಧಿಕಾರಿ ತಾತ್ಕಾಲಿಕ ಪರಿಹಾರಕ್ಕೆ ಹಣ ಇಲ್ಲ ಅಂತ ಹೇಳಿಲ್ಲ. ಆದರೆ ಶಾಶ್ವತ ಪರಿಹಾರಕ್ಕಾಗಿ ಅಂಕಿ ಅಂಶಗಳ ಸಮೇತ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದೇವೆ. ಅವರ ರಾಜ್ಯದ ಅಂಕಿ ಅಂಶಗಳ ವರದಿಗೆ ಸ್ಪಷ್ಟನೆ ಕೇಳಿದ್ದಾರೆ. ಆದರೆ ತಿರಸ್ಕಾರ ಮಾಡಿಲ್ಲ. ಎನ್‍ಡಿಆರ್ ಎಫ್ ನಿಯಮಾವಳಿಗಳ ಪ್ರಕಾರ ಎಷ್ಟು ಪರಿಹಾರ ಕೊಡಬೇಕೋ ಅಷ್ಟು ಕೊಡುತ್ತಾರೆ ಎಂದು ತಿಳಿಸಿದರು.
ಮೋದಿ ಬಳಿ ಪರಿಹಾರ ಕೇಳಲು ಸಂಸದರಿಗೆ ಧೈರ್ಯವಿಲ್ಲ ಎಂಬ ಎಚ್‍ಡಿಡಿ ಹೇಳಿಕೆ ವಿಚಾರ ಸಂಬಂಧ ಮಾತನಾಡಿದ ಸಚಿವರು, ಎಚ್‍ಡಿಡಿ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ. ಎಚ್‍ಡಿ ಕುಮಾರಸ್ವಾಮಿ ಸಹ ಪ್ರಧಾನಿಗಳನ್ನ ಎಷ್ಟು ಬಾರಿ ಭೇಟಿ ಮಾಡಿದ್ದರು. ಅವರು ಭಯದಿಂದ ಪ್ರಧಾನಿಗಳನ್ನ ಭೇಟಿ ಮಾಡಿದ್ರಾ..? ಅವರಿಗೆ ಇಲ್ಲದ ನಮಗೆ ಇರುತ್ತಾ ಎಂದು ಪ್ರಶ್ನಿಸಿದರು. ಅಲ್ಲದೆ ಎಚ್‍ಡಿಡಿ ಕಾರ್ಯಕರ್ತರಾಗಿ ಪ್ರಧಾನ ಮಂತ್ರಿ ಆದವರು. ಕಾರ್ಯಕರ್ತರಾಗಿ ಪ್ರಧಾನಮಂತ್ರಿ ಆದವರು ಭಯ ಹುಟ್ಟಿಸುವ ಕೆಲಸ ಮಾಡಲ್ಲ. ವಾಮಮಾರ್ಗದಲ್ಲಿ ಬರುವವರು ಭಯ ಹುಟ್ಟಿಸುವ ಕೆಲಸ ಮಾಡುತ್ತಾರೆ. ಪರಿಹಾರ ಕೇಳಲು ನಮಗೆ ಯಾವುದೇ ಭಯ ಇಲ್ಲ ಎಂದರು.
ಇದೇ ವೇಳೆ ಪರಿಹಾರ ವಿಳಂಬಕ್ಕೆ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಬೇಸರ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ಯಾನಿಕ್ ನಿಂದ ಸಂಸದರು ಹೇಳಿಕೆ ನೀಡಿರಬಹುದು ಅಂತ ತೇಪೆ ಹಚ್ಚಿದರು. ಕಳೆದ 10 ವರ್ಷಗಳ ಹಿಂದಿನ ಅಂಕಿ ಅಂಶಗಳ ಪ್ರಕಾರ ತಕ್ಷಣಕ್ಕೆ ಪರಿಹಾರ ಬಂದಿಲ್ಲ. 3-4 ತಿಂಗಳ ನಂತರವೇ ಪರಿಹಾರ ಬಂದಿರುವುದು ಅಂತ ನೆರೆ ಪರಿಹಾರ ವಿಳಂಬ ಧೋರಣೆಯನ್ನ ಸಮರ್ಥನೆ ಮಾಡಿಕೊಂಡರು.