ಚಿಕ್ಕಬಳ್ಳಾಪುರ ರೈತರಿಗೆ ವರದಾನವಾದ ಕೊರೊನಾ

Public TV
2 Min Read
CKB Silk 5

ಚಿಕ್ಕಬಳ್ಳಾಪುರ: ಚೀನಾದಲ್ಲಿ ಹುಟ್ಟಿ ಇಡೀ ವಿಶ್ವದಾದ್ಯಂತ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ಆತಂಕ ಎಲ್ಲಡೆ ಮನೆ ಮಾಡಿದೆ. ಕೊರೊನಾ ಎಫೆಕ್ಟ್ ನಿಂದ ದೇಶದ ಶೇರುಪೇಟೆಯೇ ತಲ್ಲಣಗೊಂಡಿದ್ದು, ದೊಡ್ಡ ದೊಡ್ಡ ಶ್ರೀಮಂತ ಉದ್ಯಮಿಗಳೇ ಗಢ ಗಢ ಎಂದು ನಡುಗುತ್ತಿದ್ದರೇ, ಇತ್ತ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಮಾತ್ರ ಕೊರೊನಾ ಕಾಟ ವರದಾನವಾಗಿದೆ.

ಕೊರೊನಾ ಭೀತಿಯಿಂದ ಜಾಗತಿಕ ಮಟ್ಟದಲ್ಲಿ ಆಮದು ಹಾಗೂ ರಫ್ತಿನ ಮೇಲೆ ಉಂಟಾಗಿರುವ ಬಹುದೊಡ್ಡ ವ್ಯತ್ಯಾಸಗಳಿಂದ ದೊಡ್ಡ ದೊಡ್ಡ ಕುಬೇರ ಮಹಾಶಯರ ಉದ್ಯಮಗಳಿಗೆ ಹೊಡೆತ ಬಿದ್ದಿದೆ. ಆದರೆ ದೇಶದ ಬೆನ್ನುಲುಬು ಅನ್ನ ನೀಡೋ ಅನ್ನದಾತ ರೈತನಿಗೆ ಮಾತ್ರ ಈ ಕೊರೊನಾ ಎಫೆಕ್ಟ್ ಲಾಭ ತಂದಿದೆ. ಕೊರೊನಾ ಎಫೆಕ್ಟ್ ನಿಂದ ರೇಷ್ಮೆಯ ತವರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ರೇಷ್ಮೆ ಗೂಡಿನ ಬೆಲೆ ಗಗನಕ್ಕೇರುತ್ತಿದೆ. ಇದು ರೇಷ್ಮೆ ಗೂಡು ಬೆಳೆದ ರೈತರಿಗೆ ವರದಾನವಾಗುತ್ತಿದೆ ಎಂದು ರೇಷ್ಮೆ ಗೂಡು ಮಾರುಕಟ್ಟೆಯ ವ್ಯವಸ್ಥಾಪಕ ಉಪ ನಿರ್ದೇಶಕರಾದ ಸುಭಾಷ್ ಹೇಳಿದ್ದಾರೆ.

CKB Silk 4

ರೇಷ್ಮೆ ಗೂಡಿನ ಬೆಲೆ ಡಬಲ್ ಆಗಲು ಕಾರಣವೇನು?
ಏಷ್ಯಾ ಖಂಡದಲ್ಲೇ ರೇಷ್ಮೆ ಉತ್ಪಾದನೆಯಲ್ಲಿ ಚೀನಾ ದೇಶದ್ದೇ ಪಾರುಪತ್ಯ. ಆದರೆ ಕೊರೊನಾ ಕಾಟ ಆ ದೇಶದ ರೇಷ್ಮೆ ಉತ್ಪಾದನೆಯೂ ಮೇಲೂ ಭಾರೀ ಪರಿಣಾಮ ಬೀರಿದೆ. ಹೀಗಾಗಿ ಸಹಜವಾಗಿ ಚೀನಾ ರೇಷ್ಮೆಯ ಆಮದು ಇಳಿಮುಖವಾಗಿರುವುದಿರಿಂದ ಭಾರತದ ರೇಷ್ಮೆಗೆ ಭಾರೀ ಬೇಡಿಕೆ ಬಂದಿದೆ. ಇದರಿಂದ ಸಹಜವಾಗಿ ರಾಜ್ಯದ ರೈತರು ಉತ್ಪಾದನೆ ಮಾಡುತ್ತಿರುವ ರೇಷ್ಮೆ ಗೂಡಿಗೆ ಭಾರೀ ಡಿಮ್ಯಾಂಡ್ ಬಂದಿದೆ.

CKB Silk 2

ಪ್ರತಿ ವರ್ಷ 200 ರಿಂದ 400 ರೂಪಾಯಿಯೊಳಗೆ ಇರುತ್ತಿದ್ದ ಒಂದು ಕೆಜಿ ರೇಷ್ಮೆ ಗೂಡಿನ ಬೆಲೆ ಈಗ 500 ರೂಪಾಯಿಂದ 600 ರೂಪಾಯಿಯವರೆಗೆ ಏರಿಕೆ ಆಗಿದೆ. ಹೀಗಾಗಿ ಸಹಜವಾಗಿ ರೇಷ್ಮೆ ಗೂಡು ಬೆಳೆಯುತ್ತಿರುವ ರೈತರಿಗೆ ಉತ್ತಮ ಬೆಲೆ ಸಿಗುತ್ತಿದ್ದು ರೈತರ ಸಂತಸಕ್ಕೆ ಕಾರಣವಾಗಿದೆ ಎಂದು ರೇಷ್ಮೆ ಬೆಳೆಗಾರ ಹಾಗೂ ರೈತ ಮುಖಂಡ ತಾದೂರು ಮಂಜುನಾಥ್ ಸಂತಸ ವ್ಯಕ್ತಪಡಿಸಿದ್ದಾರೆ.

ಸಂಪೂರ್ಣವಾಗಿ ಚೀನಾ ರೇಷ್ಮೆ ಆಮದು ನಿಲ್ಲಿಸುವಂತೆ ರೈತರ ಮನವಿ:
ಭಾರತಕ್ಕೆ ತನ್ನ ರೇಷ್ಮೆಯನ್ನು ರಫ್ತು ಮಾಡಿ ದೇಶದ ರೈತರಿಗೆ ಹೊಡೆತ ನೀಡುತ್ತಿದ್ದ ಚೀನಾ ದೇಶದಿಂದ ರೇಷ್ಮೆಯ ಆಮದುನ್ನು ಸ್ಥಗಿತಗೊಳಿಸಬೇಕು ಎಂದು ರೇಷ್ಮೆ ಬೆಳೆಗಾರರು ಹೋರಾಟ ಮಾಡಿ ಪ್ರಧಾನಿ ಮೋದಿಯವರಗೂ ಮನವಿ ಮಾಡಿಕೊಂಡಿದ್ದರು. ಆದರೆ ಈಗ ಕೊರೊನಾ ವೈರಸ್ ಚೀನಾದ ರೇಷ್ಮೆ ರಫ್ತಿಗೆ ತಾನಾಗೇ ತಾನೇ ಬ್ರೇಕ್ ಹಾಕಿದ್ದು, ಇದು ನಮ್ಮ ದೇಶದ ರೇಷ್ಮೆ ಬೆಳೆದ ಬೆಳಗಾರರಿಗೆ ವರದಾನವಾಗುತ್ತಿದೆ. ಆದರೆ ಇದೇ ರೀತಿ ಸಂಪೂರ್ಣವಾಗಿ ಚೀನಾದ ದೇಶದ ರೇಷ್ಮೆ ಆಮದು ಸ್ಥಗಿತ ಮಾಡಿದರೇ ರೈತರಿಗೆ ಸದಾ ಸಂತೋಷದಾಯಕ ಬೆಲೆ ಸಿಗಲಿದೆ ಎಂದು ರೈತ ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.

CKB Silk

Share This Article
Leave a Comment

Leave a Reply

Your email address will not be published. Required fields are marked *