ಅಸಲಿ ಐಎಎಸ್ ಅಧಿಕಾರಿಯನ್ನೇ ಮೀರಿಸಿದ ನಕಲಿ ಐಎಎಸ್ ಅಧಿಕಾರಿ

Public TV
2 Min Read
CKB Nakalai IAS Officer

ಚಿಕ್ಕಬಳ್ಳಾಪುರ: ಅಬ್ಬಬ್ಬಾ ಅದೇನು ಸೂಟುಬೂಟು, ಕಾರಿನ ಖದರ್, ಕಾರು ಚಾಲಕನಿಗೆ ಸೇಮ್ ಟು ಸೇಮ್ ಪೈಲೆಟ್ ರೀತಿ ಡ್ರೆಸ್ ಕೋಡ್. ಸೂಟು ಬೂಟು ಹಾಕ್ಕೊಂಡು ಕೈಯಲ್ಲೊಂದು ಬುಕ್ ಹಿಡ್ಕೊಂಡು. ಜೇಬಿನಲ್ಲಿ ಕೂಲಿಂಗ್ ಗ್ಲಾಸ್ ವಿತ್ ಪೆನ್ ಇಟ್ಕೊಂಡು ಐಎಎಸ್ ಅಧಿಕಾರಿಯಂತೆ ಬಂದ ವ್ಯಕ್ತಿಯ ಅಸಲಿ ಸತ್ಯ ಬಯಲಾಗಿದೆ.

ಹೌದು ಇಂತಹ ವಿಲಕ್ಷಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿಭಾಗದ ಬಾಗೇಪಲ್ಲಿ ತಾಲೂಕಿನ ಚೇಳೂರು ಹಾಗೂ ಚಾಕ್ ವೇಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಅಂದಹಾಗೆ ಮಂಗಳವಾರ ಮಧ್ಯಾಹ್ನ ಹೈಟೆಕ್ ಸ್ಕಾರ್ಪಿಯೋ ಕಾರಿನಲ್ಲಿ ಎಂಟ್ರಿ ಕೊಟ್ಟ ನಾರೇಮದ್ದೇಪಲ್ಲಿ ಗ್ರಾಮದ ನಾಗೇಶ್ ಎಂಬಾತ ಸಿನಿಮಾ ಸ್ಟೈಲ್‍ನಲ್ಲಿ ತಾನು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಸಿಇಒ ಅಂತ ಹೇಳಿಕೊಂಡಿದ್ದ.

CKB Hospital

ನಕಲಿ ಐಎಎಸ್ ಅಧಿಕಾರಿ ನಾಗೇಶ್ ಆಸ್ಪತ್ರೆಗೆ ಎಂಟ್ರಿಕೊಟ್ಟಿದ್ದೇ ತಡ ಆಸ್ಪತ್ರೆಯಲ್ಲಿದ್ದ ಸಿಬ್ಬಂದಿ ಭಯ ಭೀತರಾಗಿ ಸರ್ ನಮಸ್ಕಾರ, ನಮಸ್ಕಾರ ಅಂತ ಸೆಲ್ಯೂಟ್ ಹೊಡೆದಿದ್ದರು. ಸರ್ ಆಸ್ಪತ್ರೆಯಲ್ಲಿ ಆ ಸಮಸ್ಯೆ ಇದೆ, ಈ ಸಮಸ್ಯೆ ವೇತನವೇ ಆಗುತ್ತಿಲ್ಲ ಅಂತ ಸಿಬ್ಬಂದಿ ಅಳಲು ತೋಡಿಕೊಂಡಿದ್ದರು. ಇದನ್ನು ಆಲಿಸಿದ ನಕಲಿ ಅಧಿಕಾರಿ ನಾಗೇಶ್ ಆಸ್ಪತ್ರೆಯ ರೆಕಾರ್ಡ್ ಬುಕ್‍ನಲ್ಲಿ ಇಂಗ್ಲೀಷ್‍ನಲ್ಲೇ ಬರೆದು ಹೋಗಿದ್ದ. ಆದರೆ ಈ ವಿಚಾರ ಅಂದು ಆಸ್ಪತ್ರೆಯಲ್ಲಿರದೆ ಚಿಕ್ಕಬಳ್ಳಾಪುರ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಸಭೆಗೆ ಹಾಜರಾಗಿದ್ದ ವೈದ್ಯರಿಗೂ ತಲುಪಿತ್ತು. ಆಗ ವೈದ್ಯರು ವಿಚಾರಿಸಿದಾಗ ಆಸಲಿ ವಿಷಯ ಗೊತ್ತಾಗಿದೆ.

CKB NAKALI IAS OFFICER B

ಐಎಎಸ್ ಕನಸು ಕಂಡಿದ್ದ ನಾಗೇಶ್:
ನಾನು ಎಂಎ ಪದವೀಧರನಾಗಿದ್ದು, ಐಎಎಸ್ ಆಫೀಸರ್ ಆಗಬೇಕು ಅಂತ ಕೋಚಿಂಗ್ ಕ್ಲಾಸ್‍ಗೆ ಹೋಗುತ್ತಿದ್ದೇನೆ. ಜೊತೆಗೆ ಮಾನವ ಹಕ್ಕು ಸಂಘಟನೆಯಲ್ಲಿ ಸಿಇಒ ಆಗಿದ್ದು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಹೋಗಿರುವುದು ನಿಜ. ಆದರೆ ತಾಲೂಕು ಆರೋಗ್ಯಾಧಿಕಾರಿ ಸತ್ಯನಾರಾಯಣ ಅವರು ಕರೆ ಮಾಡಿ ಆ ರೀತಿ ಹೋಗಬಾರದು ಅಂತ ತಿಳಿಸಿದ್ದಾರೆ. ಇನ್ನೂ ಮುಂದೆ ಹಾಗೆ ಹೋಗುವುದಿಲ್ಲ ಅಂತ ಹೇಳಿದ್ದೇನೆ ಎಂದು ನಾಗೇಶ್ ಹೇಳಿಕೊಂಡಿದ್ದಾನೆ.

ನನಗೆ ಮೂರು ಬಾರಿ ಹಾವು ಕಚ್ಚಿದ್ದು ಆಸ್ಪತ್ರೆಗಳಿಗೆ ಹೋದಾಗ ಸರಿಯಾದ ಚಿಕಿತ್ಸೆ ಸಿಕ್ಕಿರಲಿಲ್ಲ. ಹೀಗಾಗಿ ಈಗ ಅಧಿಕಾರಿಯಂತೆ ಹೋಗಿ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಿದ್ದೇನೆ ಎಂದು ನಾಗೇಶ್ ತಿಳಿಸಿದ್ದಾನೆ.

CKB NAKALI IAS OFFICER A

ಆತ್ಮಹತ್ಯೆ ಬೆದರಿಕೆ:
ನಕಲಿ ಐಎಎಸ್ ಅಫೀಸರ್ ನಾಗೇಶ್ ವಿರುದ್ಧ ಕೇವಲ ಮೌಖಿಕವಾಗಿ ಬಾಗೇಪಲ್ಲಿ ವೃತ್ತನೀರೀಕ್ಷಕರಿಗೆ ದೂರು ನೀಡಿ ಸುಮ್ಮನಾಗಿದ್ದಾರೆ. ನಾಗೇಶ್‍ಗೆ ಬುದ್ಧಿವಾದ ಹೇಳಿ ಟಿಎಚ್‍ಒ ಸತ್ಯನಾರಾಯಣ ಸುಮ್ಮನಾಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಡಿಎಚ್‍ಒ ಯೋಗೇಶ್ ಗೌಡ, ಆತನ ಹೆಸರು ನಾಗೇಶ್ ಅಂತ ನಾರೇಮದ್ದೇಪಲ್ಲಿ ನಿವಾಸಿ. ಜೀವನದಲ್ಲಿ ಐಎಎಸ್ ಆಗಬೇಕೇಂಬ ಆಸೆ ಹೊಂದಿದ್ದ. ಆದರೆ 33 ವರ್ಷದ ನಾಗೇಶ್ ವಿಫಲನಾಗಿ ಈ ರೀತಿ ವರ್ತನೆ ಮಾಡುತ್ತಿದ್ದಾನೆ ಎನ್ನುವುದು ಗೊತ್ತಾಗಿದೆ. ಆತನನ್ನು ಕರೆಸಿ ವಿಚಾರಣೆ ಮಾಡಲಾಗಿದ್ದು, ಹಿಡಿದುಕೊಳ್ಳಲು ಹೋದರೆ ಬಾವಿಗೆ ಬೀಳುತ್ತೇನೆ ಅಂತ ಬೆದರಿಸುತ್ತಿದ್ದಾನೆ. ಹೀಗಾಗಿ ಬಲವಂತವಾಗಿ ಕ್ರಮ ಕೈಗೊಂಡರೆ ಅಚಾತುರ್ಯ ಆಗಬಹುದಾದ ಸಂಭವವಿದೆ. ಮುಂದಿನ ದಿನಗಳಲ್ಲಿ ಈ ರೀತಿ ಮಾಡಬಾರದು ಅಂತ ಎಚ್ಚರಿಕೆ ನೀಡಿದ್ದೇವೆ. ಜೊತೆಗೆ ನಾಗೇಶ್ ಮಾನಸಿಕ ಅಸ್ವಸ್ಥತೆಯಿಂದ ಗುಣಮುಖನಾಗಲು ಸಹಾಯ ಮಾಡುತ್ತೇವೆ ಎಂದು ತಿಳಿಸಿದರು.

CKB Dr

Share This Article
Leave a Comment

Leave a Reply

Your email address will not be published. Required fields are marked *