– ನನ್ನ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ರಾಜಿನಾಮೆ ನೀಡಬಹುದೇನೋ ಎಂದ ಸಿಎಂ
ಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
* ನರಸಿಂಹರಾಜಪುರದಲ್ಲಿ ಸೇತುವೆ ನಿರ್ಮಾಣ ಬಹುದಿನದ ಬೇಡಿಕೆಯಾಗಿತ್ತು. ಈಗ ನನ್ನ ಅಧಿಕಾರಾವಧಿಯಲ್ಲಿಯೇ ಶಂಕುಸ್ಥಾಪನೆ ಮತ್ತು ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ. ಬಿಜೆಪಿಯವರ ಅವಧಿಯಲ್ಲಿ ಸೇತುವೆ ನಿರ್ಮಾಣಕ್ಕೆ ಯಾವುದೇ ಕ್ರಮವಾಗಿರಲಿಲ್ಲ.
* ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ.…
— Siddaramaiah (@siddaramaiah) April 12, 2026
ಪವರ್ ಫೈಟ್, ದಾವಣಗೆರೆ ಬೈ ಎಲೆಕ್ಷನ್ ಜಟಾಪಟಿ ನಡುವೆ ಹಿರಿಯ ಶಾಸಕರು ಮಿನಿಸ್ಟರ್ ಗಾದಿಗಾಗಿ ಡೆಲ್ಲಿ ಪರೇಡ್ ಮಾಡ್ತಿದ್ದಾರೆ. ಎರಡಕ್ಕಿಂತ ಹೆಚ್ಚು ಬಾರಿ ಗೆದ್ದಿರುವ ಸುಮಾರು 30 ಶಾಸಕರು ಮಂತ್ರಿಗಿರಿಗೆ ಹಕ್ಕೊತ್ತಾಯ ಮಾಡಲು ಬೆಂಗಳೂರಿನಿಂದ ದೆಹಲಿಗೆ ತೆರಳಿದ್ರು. ಸುಮಾರು 30 ಜನ ಕಾಂಗ್ರೆಸ್ ಹಿರಿಯ ಶಾಸಕರು ದೆಹಲಿ ವಿಮಾನ ಹತ್ತಿದ್ದಾರೆ. ಈ ಬಗ್ಗೆ ಎಕ್ಸ್ ಪೋಸ್ಟ್ ಮೂಲಕ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಸಚಿವ ಸಂಪುಟ ಪುನಾರಚನೆಗೆ ತೀವ್ರಗೊಂಡ ಕೂಗು – ದೆಹಲಿಗೆ ಹೊರಟ ಹಿರಿಯ ಶಾಸಕರ ತಂಡ
ಎಕ್ಸ್ ಪೋಸ್ಟ್‌ನಲ್ಲಿ ಏನಿದೆ?
ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಸಂಪುಟ ಪುನರ್ರಚನೆ ಕಾರ್ಯ ಬಾಕಿಯಿದೆ. ಐದು ರಾಜ್ಯಗಳ ಚುನಾವಣೆ, ಬಜೆಟ್ ಅಧಿವೇಶನವು ಸಂಪುಟ ಪುನರ್ರಚನೆ ವಿಳಂಬಕ್ಕೆ ಕಾರಣವಿರಬಹುದು.

ನನ್ನ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರು ಇದುವರೆಗೆ ರಾಜಿನಾಮೆ ನೀಡಿಲ್ಲ. ಮುಂದೆ ನೀಡಬಹುದೇನೋ. ಕಾಂಗ್ರೆಸ್ ಪಕ್ಷ ಸೋಲನ್ನು ಒಪ್ಪಿಕೊಂಡಿಲ್ಲ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವುದು ಖಂಡಿತ. ತಲೆದಂಡಕ್ಕೆ ಚುನಾವಣೆಯ ಸೋಲು ಗೆಲುವು ಕಾರಣವಲ್ಲ. ನಸೀರ್ ಅಹ್ಮದ್ ಅವರು ಪಕ್ಷದ ಮುಖಂಡರು. ಅವರು ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಕೆಲವರ ಪಕ್ಷ ವಿರೋಧಿ ಕಾರ್ಯಗಳ ಬಗ್ಗೆ ಹೇಳಿಕೆ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆಯೇ ಹೊರತು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರಾಜಿತವಾಗಲಿದೆ ಎಂದು ಅವರು ಹೇಳಿರುವುದಿಲ್ಲ. ಪಕ್ಷವಿರೋಧಿ ಚಟುವಟಿಕೆಗಳ ನಡುವೆಯೂ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಬ್ದುಲ್ ಜಬ್ಬಾರ್ ರಾಜೀನಾಮೆ ಅಂಗೀಕರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್
ಇನ್ನೂ ಚಿಕ್ಕಮಗಳೂರಿನ ನರಸಿಂಹರಾಜಪುರದಲ್ಲಿ ಸೇತುವೆ ಉದ್ಘಾಟಿಸಿ ಮಾತನಾಡಿದ ಸಿಎಂ, ಸೇತುವೆ ನಿರ್ಮಾಣ ಬಹುದಿನದ ಬೇಡಿಕೆಯಾಗಿತ್ತು. ಈಗ ನನ್ನ ಅಧಿಕಾರಾವಧಿಯಲ್ಲಿಯೇ ಶಂಕುಸ್ಥಾಪನೆ ಮತ್ತು ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ. ಬಿಜೆಪಿಯವರ ಅವಧಿಯಲ್ಲಿ ಸೇತುವೆ ನಿರ್ಮಾಣಕ್ಕೆ ಯಾವುದೇ ಕ್ರಮವಾಗಿರಲಿಲ್ಲ. ಮಲೆನಾಡು ಭಾಗದಲ್ಲಿ ಅರಣ್ಯ ಇಲಾಖೆಯಿಂದ ಹಕ್ಕು ಪತ್ರ ನೀಡುವುದೂ ಸೇರಿದಂತೆ ಹಲವು ವಿಷಯದ ಬಗ್ಗೆ ಸದ್ಯದಲ್ಲಿಯೇ ಸಭೆ ನಡೆಸಿ, ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕೇರಳ ರಾಜ್ಯದ ಬಾಲಕಿ ಚಿಕ್ಕಮಗಳೂರಿಗೆ ಬಂದು ಮೃತಪಟ್ಟಿರುವ ಘಟನೆ ಬಗ್ಗೆ ಉತ್ತರಿಸಿ, ಸೂಕ್ತ ತನಿಖೆಯಾಗಲಿದೆ. ಆದರೆ ಕರ್ನಾಟಕ ರಾಜ್ಯ ಪ್ರವಾಸಿಗರಿಗೆ ಸುರಕ್ಷಿತವಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದ್ದಾರೆ.

