ರೋಡ್ ಶೋ ವೇಳೆ ಮತ್ತೆ ಕೇಜ್ರಿವಾಲ್‍ಗೆ ಕಪಾಳಮೋಕ್ಷ

Public TV
2 Min Read
Arvind Kejriwal

ನವದೆಹಲಿ: ದೆಹಲಿಯ ಮೋತಿ ನಗರದಲ್ಲಿ ರೋಡ್ ಶೋ ನಡೆಸುತ್ತಿದ್ದ ಎಎಪಿ ಪಕ್ಷದ ಮುಖ್ಯಸ್ಥ, ಸಿಎಂ ಅರವಿಂದ ಕೇಜ್ರಿವಾಲ್ ಅವರಿಗೆ ವ್ಯಕ್ತಿಯೊರ್ವ ಕಪಾಳಮೋಕ್ಷ ಮಾಡಿದ್ದಾನೆ.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿ ಕೇಜ್ರಿವಾಲ್ ರೋಡ್ ಶೋ ನಡೆಸಿದ್ದರು. ಈ ಸಂದರ್ಭದಲ್ಲಿ ತೆರೆದ ಕಾರಿನಲ್ಲಿ ತೆರಳುತ್ತಿದ್ದ ಕೇಜ್ರಿವಾಲ್ ಜನರತ್ತ ಕೈ ಬೀಸುತ್ತಾ ಸಾಗಿದ್ದರು. ಇತ್ತ ಏಕಾಏಕಿ ಕೇಜ್ರಿವಾಲ್ ಅವರತ್ತ ನುಗ್ಗಿದ ವ್ಯಕ್ತಿ ಕಾರು ಹತ್ತಿ ಕೇಜ್ರಿವಾಲ್ ಮುಖಕ್ಕೆ ಬಾರಿಸಿದ್ದು, ಈ ಘಟನೆಯಿಂದ ಕೇಜ್ರಿವಾಲ್ ಶಾಕ್‍ಗೆ ಒಳಗಾಗಿದ್ದರು.

ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ನಿಯೋಜಿಸಿದ್ದ ಸಂದರ್ಭದಲ್ಲೂ ಘಟನೆ ನಡೆದಿದೆ. ಕೇಜ್ರಿವಾಲ್ ಮುಖಕ್ಕೆ ಬಾರಿಸಿದ ವ್ಯಕ್ತಿ ತಕ್ಷಣ ಕಾರು ಇಳಿದು ಪರಾರಿಯಾಗಲು ಯತ್ನಿಸಿದ್ದ, ಈ ಹಂತದಲ್ಲಿ ಎಚ್ಚೆತ್ತ ಕಾರ್ಯಕರ್ತರು ಹಾಗೂ ವ್ಯಕ್ತಿಯನ್ನು ಹಿಡಿದುಕೊಂಡಿದ್ದಾರೆ. ಕೃತ್ಯ ಎಸಗಿದ ವ್ಯಕ್ತಿಯನ್ನು ಸುರೇಶ್ ಎಂದು ಗುರುತಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಬಗ್ಗೆ ಎಎಪಿ ಮುಖಂಡರು ಬಿಜೆಪಿ ಪಕ್ಷದ ವಿರುದ್ಧ ಆರೋಪ ಮಾಡಿದ್ದಾರೆ. ಈ ದಾಳಿ ವಿರೋಧಿಗಳ ಪ್ರಾಯೋಜಿತದಿಂದ ನಡೆದ ಘಟನೆ ಎಂದು ಎಎಪಿ ಪಕ್ಷದ ವಕ್ತಾರ ಸೌರಭ್ ಭರದ್ವಾಜ್ ದೂರಿದ್ದಾರೆ. ಅಲ್ಲದೇ ತೃಣಮೂಲ ಕಾಂಗ್ರೆಸ್ ಪಕ್ಷ ಕೂಡ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದೆ.

ಇದೇ ಮೊದಲಲ್ಲ: 2014ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆಯೂ ಕೂಡ ಕೇಜ್ರಿವಾಲ್ ರನ್ನು ದೆಹಲಿಯ ದಕ್ಷಿಣಪೂರಿ ಪ್ರದೇಶದಲ್ಲಿ ವ್ಯಕ್ತಿಯೊರ್ವ ಕಪಾಳ ಮೋಕ್ಷ ಮಾಡಿದ್ದ. ಈ ಘಟನೆ ನಡೆದ ನಾಲ್ಕು ದಿನಗಳ ಬಳಿಕ ಇಂತಹದ್ದೇ ಘಟನೆ ನಡೆದಿತ್ತು. ಈ ವೇಳೆ ಅವರ ಮುಖಕ್ಕೆ ಗಾಯವಾಗಿತ್ತು. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ನಡೆಯುತ್ತಿದೆ ಎಂದು ಎಎಪಿ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಕಳೆದ ವರ್ಷ ಕೇಜ್ರಿವಾಲ್ ಕಚೇರಿ ಬಳಿ ಆಗಮಿಸಿದ್ದ ವ್ಯಕ್ತಿಯೊಬ್ಬರು ಮನವಿ ಪತ್ರ ಸಲ್ಲಿಸಿ ಕಾಲಿಗೆ ನಮಸ್ಕಾರ ಮುಂದಾಗಿದ್ದರು. ಆ ಬಳಿಕ ಏಕಾಏಕಿ ಕೈಯಿಂದ ಖಾರದ ಪುಡಿ ತೆಗೆದು ಅವರ ಮುಖಕ್ಕೆ ಎರಚಲು ಯತ್ನಿಸಿದ್ದರು. ಈ ಘಟನೆ ದೆಹಲಿಯ ಸಚಿವಾಲಯದಲ್ಲೇ ನಡೆದಿತ್ತು. ಉಳಿದಂತೆ ಲೋಕಸಭಾ ಚುನಾವಣೆ ಮತದಾನ ದೆಹಲಿಯಲ್ಲಿ ಮೇ 12 ರಂದು ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *