ಚೆನ್ನೈ: ಹೆಬ್ಬುಲಿ ಬೆಡಗಿ ನಟಿ ಅಮಲಾ ಪೌಲ್ ‘ಅದಾಯಿ’ ಚಿತ್ರದಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಅವರು ಬೆತ್ತಲಾಗಿ ನಟಿಸಿದ್ದಕ್ಕೆ ಅವರ ವಿರುದ್ಧ ದೂರು ದಾಖಲಾಗಿದೆ.
ಅದಾಯಿ ಚಿತ್ರದಲ್ಲಿ ಅಮಲಾ ಪೌಲ್ ನಗ್ನತೆಯನ್ನು ಪ್ರಚಾರ ಮಾಡುತ್ತಿದ್ದಾರೆ ಹಾಗೂ ತಮಿಳಿನ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಅನೈತು ಮಕ್ಕಲ್ ಕಚ್ಚಿ ಸ್ಥಾಪಕಿ ರಾಜೇಶ್ವರಿ ಪ್ರಿಯಾ ಅವರು ದೂರು ದಾಖಲಿಸಿದ್ದಾರೆ. ಚಿತ್ರದ ಪೋಸ್ಟರ್ ನಲ್ಲಿ ನಗ್ನ ಫೋಟೋ ಹಾಕುವ ಮೂಲಕ ಚಿತ್ರವನ್ನು ಪ್ರಮೋಟ್ ಮಾಡಲಾಗುತ್ತಿದೆ ಎಂದು ವಿರೋಧಿಸಿದ್ದಾರೆ.
ದೂರು ದಾಖಲಿಸಿ ಮಾಧ್ಯಮಗಳ ಜೊತೆ ಮಾತನಾಡಿದ ರಾಜೇಶ್ವರಿ ಪ್ರಿಯಾ ಅವರು, ನಾನು ಡಿಜಿಪಿ ಅವರನ್ನು ಭೇಟಿ ಮಾಡಿ ಚಿತ್ರದ ನಿರ್ಮಾಪಕರ ವಿರುದ್ಧ ಕ್ರಮಕೈಗೊಳ್ಳಿ ಎಂದು ಬೇಡಿಕೆ ಇಟ್ಟಿದ್ದೇನೆ. ಚಿತ್ರದ ಪ್ರಮೋಶನ್‍ಗಾಗಿ ನಗ್ನ ಪೋಸ್ಟರ್ ಗಳನ್ನು ಬಳಸಲಾಗುತ್ತಿದೆ. ಇದರಿಂದ ಮಕ್ಕಳು ಪ್ರಭಾವಿತರಾಗುತ್ತಾರೆ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ನಾನು ಈ ಸಿನಿಮಾ ರಿಲೀಸ್ ಆಗಲು ತಡೆಯುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಈ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ‘ಎ’ ಸರ್ಟಿಫಿಕೇಟ್ ನೀಡಿದೆ. ಆದರೆ ನಾನು ಈ ಚಿತ್ರದ ಪ್ರಚಾರದ ವಿರುದ್ಧ ಇದ್ದೇನೆ. ಈ ಚಿತ್ರದ ಟ್ರೈಲರ್ ನೋಡಿ ಯುವಕರ ಮನಸ್ಸಿನಲ್ಲಿ ನೆಗೆಟಿವ್ ಆಗಿ ಪ್ರಭಾವ ಬೀರುತ್ತದೆ ಎಂದರು.
ಅಮಲಾ ತಮಿಳು ಸಂಸ್ಕೃತಿ ಬಗ್ಗೆ ಹೆದರುವುದಿಲ್ಲ. ಏಕೆಂದರೆ ಅವರು ಈ ರಾಜ್ಯದವರು ಅಲ್ಲ. ಅಮಲಾ ಹಣ ಹಾಗೂ ಪ್ರಸಿದ್ಧಿಗಾಗಿ ಏನೂ ಬೇಕಾದರೂ ಮಾಡುತ್ತಾರೆ ಎಂದು ರಾಜೇಶ್ವರಿ ಪ್ರಿಯಾ ನಟಿ ಅಮಲಾ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ.