ಚೆನ್ನೈ: ಕಂಪನಿಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಎಲ್ಲ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಿ (Work From Home)ಎಂದು ಸೂಚಿಸಿವೆ. ಚೆನ್ನೈನ ಓಲ್ಡ್ ಮಹಾಬಲಿಪುರಂ (ಓಎಂಆರ್) ಇಲಾಖೆಯ ಎಲ್ಲ ಐಟಿ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶಿಸಿವೆ.
ಕಚೇರಿಗಳಲ್ಲಿ ಸಮರ್ಪಕ ನೀರಿನ ಸೌಲಭ್ಯ ಒದಗಿಸಲಾಗದ ಹಿನ್ನೆಲೆಯಲ್ಲಿ ಓಎಂಆರ್ ವ್ಯಾಪ್ತಿಯ ಬಹುತೇಕ ಕಂಪನಿಗಳು ಈ ನಿರ್ಧಾರಕ್ಕೆ ಬಂದಿವೆ. ಕಳೆದ 200 ದಿನಗಳಿಂದ ತಮಿಳುನಾಡಿನಲ್ಲಿ ಮಳೆಯಾಗಿಲ್ಲ. ಹಾಗಾಗಿ ಮುಂದಿನ 100 ದಿನಗಳ ಕಾಲ ಮನೆಯಿಂದಲೇ ಎಲ್ಲ ಉದ್ಯೋಗಿಗಳು ಕಾರ್ಯ ನಿರ್ವಹಿಸಬೇಕು. ಮುಂದಿನ ಮೂರು ತಿಂಗಳು ಎದುರಾಗುವ ನೀರಿನ ಸಮಸ್ಯೆ ಎದುರಿಸಲು ಐಟಿ ಕಂಪನಿಗಳು ಮುಂದಾಗಿವೆ.
Advertisement
Advertisement
ಓಎಂಆರ್ ವ್ಯಾಪ್ತಿಯಲ್ಲಿ ಸುಮಾರು 600 ಐಟಿ ಮತ್ತು ಐಟಿಎಸ್ ಫಾರ್ಮ್ ಗಳಿವೆ. ಇಲ್ಲಿಯ ಬಹುತೇಕ ಎಲ್ಲ ಕಂಪನಿಗಳು ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ. ಶೊಲಿಂಗನಲ್ಲೂರು ವ್ಯಾಪ್ತಿಯ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ನೀರು ತರಲು ಸೂಚಿಸಿತ್ತು.
Advertisement
ನಾವು ಕಳೆದ ಕೆಲವು ದಿನಗಳಿಂದ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಬೇಸಿಗೆಯಲ್ಲಿ ಓಎಂಆರ್ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಮೂರು ಕೋಟಿ ಲೀಟರ್ ನೀರು ಬಳಕೆಯಾಗುತ್ತಿತ್ತು. ಶೇ.60ರಷ್ಟು ನೀರನ್ನು ಐಟಿ ಕಂಪನಿಗಳು ಪಾವತಿಸುತ್ತವೆ. ಸಮಸ್ಯೆ ಸಂಬಂಧ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಕೇವಲ ನೀರು ಒದಗಿಸುವ ಭರವಸೆಯ ಮಾತುಗಳನ್ನಾಡಿದರು. ಕೆಲಸ ಮಾತ್ರ ಕಾರ್ಯರೂಪಕ್ಕೆ ಬರಲೇ ಇಲ್ಲ ಎಂದು ಐಟಿ ಕಂಪನಿಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ.
Advertisement
ಐಟಿ ಕಂಪನಿಯೊಂದರ ಮ್ಯಾನೇಜರ್ ಮಾತನಾಡಿ, ಬಂಡವಾಳದ ಶೇ.30ರಷ್ಟು ಹಣವನ್ನು ನೀರಿಗಾಗಿ ವ್ಯಯಿಸಲಾಗುತ್ತಿದೆ. ಆದರೂ ಜಲಕ್ಷಾಮದಿಂದ ಹೊರ ಬರಲು ಸಾಧ್ಯವಾಗಿಲ್ಲ. ನೀರಿನ ಬಳಕೆಯ ಬಗ್ಗೆ ಮುಂಜಾಗ್ರತ ಕ್ರಮಕೈಗೊಂಡು ಸಿಬ್ಬಂದಿಗು ಅನಾವಶ್ಯಕವಾಗಿ ನೀರು ವ್ಯಯ ಮಾಡದಂತೆ ಸೂಚಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಈ ಬಾರಿಯ ಬರಗಾಲ ಐಟಿ ಪಾರ್ಕ್ ನಲ್ಲಿರುವ ಕಂಪನಿಗಳ ಮೇಲೆ ಪ್ರಭಾವ ಬೀರಿದೆ. ಐಟಿ ಪಾರ್ಕ್ ನಲ್ಲಿಯ 46 ಕಂಪನಿಗಳಿಗೆ ಪ್ರತಿದಿನ ಸುಮಾರು 20 ಲಕ್ಷ ಲೀ. ನೀರಿನ ಅವಶ್ಯಕತೆ ಇದೆ. ಪಾರ್ಕ್ ನಲ್ಲಿಯ 17 ಕೊಳವೆ ಬಾವಿಗಳಿಂದ ನೀರು ತೆಗೆಯಲಾಗುತ್ತಿತ್ತು. ಕಳೆದ 200 ದಿನಗಳಿಂದ ಮಳೆಯಾಗದ ಹಿನ್ನೆಲೆಯಲ್ಲಿ ಕೇವಲ 10 ಲಕ್ಷ ಲೀಟರ್ ನೀರು ಸಿಗುತ್ತಿದೆ. ಉಳಿದ ನೀರನ್ನು ಟ್ಯಾಂಕರ್ ಮೂಲಕ ಹಾಕಿಸಿಕೊಳ್ಳಲಾಗುತ್ತಿದೆ. ಕೆಲ ಕಂಪನಿಗಳು ಕಟ್ಟಡದ ಗೋಡೆಯ ಮೇಲೆ ನೀರು ಉಳಿಸಿ ಜಾಗೃತಿಯ ಅಭಿಯಾನವನ್ನು ಸಹ ಕೈಗೊಂಡಿವೆ.