ಬೆಂಗಳೂರು: ಕನಕಪುರ ರಸ್ತೆಯ ನೈಸ್ (NICE Road) ಟೋಲ್ ಬಳಿ ರಾಸಾಯನಿಕ ತುಂಬಿದ್ದ ಟ್ಯಾಂಕರ್ (Chemical Tanker) ಒಂದು ಹೊತ್ತಿ ಉರಿದಿದೆ. ಪರಿಣಾಮ ಅಂಜನಾಪುರ ಭಾಗದಿಂದ ಸಿಟಿ ಕಡೆ ಬರುವ ರಸ್ತೆಯಲ್ಲಿ ಸುಮಾರು 5 ಕಿಮೀ ಹಾಗೂ ಸಿಟಿಯಿಂದ ಹೊರ ಹೋಗುವ ರಸ್ತೆಯಲ್ಲಿ ಸುಮಾರು 3 ಕಿಮೀ ಟ್ರಾಫಿಕ್ ಜಾಮ್ (Traffic jam) ಉಂಟಾಗಿದೆ.
ಟ್ಯಾಂಕರ್ ಚೆನ್ನೈನಿಂದ ಮುಂಬೈ ಕಡೆಗೆ ತೆರಳುತ್ತಿತ್ತು. ಈ ವೇಳೆ ಟೋಲ್ ಬಳಿ ಟೈರ್ ಬ್ಲಾಸ್ಟ್ ಆಗಿ ಕಾರಿಗೆ ಟ್ಯಾಂಕರ್ ಡಿಕ್ಕಿ ಹೊಡೆದು ಪಲ್ಟಿಯಾಗಿ ಹೊತ್ತಿ ಉರಿದಿದೆ. ಬೆಂಕಿಯ ಜ್ವಾಲೆ ಬಾನೆತ್ತರಕ್ಕೆ ಎದ್ದಿದೆ. ಕಳೆದ ಒಂದೂವರೆಯಿಂದ ಬೆಂಕಿ ಹೊತ್ತಿ ಉರಿಯುತ್ತಿದೆ. ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಟ್ಯಾಂಕರ್ ಒಳಗೆ ನಾಲ್ಕಾರು ಟ್ಯಾಂಕ್ ಇವೆ. ಇನ್ನೂ ಎರಡು ಟ್ಯಾಂಕ್ನಲ್ಲಿ ಕೆಮಿಕಲ್ ಇದೆ. ಅದು ಬ್ಲಾಸ್ಟ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅದು ಬ್ಲಾಸ್ಟ್ ಆಗುವ ತನಕ ಬೆಂಕಿ ಹತೋಟಿಗೆ ಬರುವುದಿಲ್ಲ. ಹೀಗಾಗಿ ಕಂಟ್ರೋಲ್ಡ್ ಪರಿಸರದಲ್ಲಿ ಬ್ಲಾಸ್ಟ್ ಮಾಡಿಸಲು ಅಗ್ನಿಶಾಮಕ ಸಿಬ್ಬಂದಿ ಕ್ರಮಕೈಗೊಂಡಿದ್ದಾರೆ. ಸ್ಥಳಕ್ಕೆ ತಲಘಟ್ಟಪುರ ಪೊಲೀಸರು ಹಾಗೂ ಅಗ್ನಿಶಾಮಕದ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
