– ಚೆಕ್ ಡ್ಯಾಂ ದುರಸ್ತಿ, ಹೂಳೆತ್ತಲು ರೈತರ ಆಗ್ರಹ
ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಿಂದ ಚಿಕ್ಕಹಳ್ಳ ನೀರಿಗೆ ಅಡ್ಡಲಾಗಿ ಒಂದು ಡ್ಯಾಂ ಕಟ್ಟಲಾಗಿತ್ತು. ಚುಂಗನಹಳ್ಳಿ ಗ್ರಾಮದ ಸಮೀಪ ನೂರಾರು ವರ್ಷಗಳ ಹಿಂದೆ ನಿರ್ಮಿಸಲಾದ ಚೆಕ್ಡ್ಯಾಂ (Check Dam) ಇದೀಗ ಶಿಥಿಲಾವ್ಯಸ್ಥೆ ತಲುಪಿದೆ. ಕಳೆದ 4-5 ವರ್ಷಗಳ ಹಿಂದೆ ಚೆಕ್ಡ್ಯಾಂನ ಒಂದು ಭಾಗ ಒಡೆದು ಹೋಗಿದ್ದು ದುರಸ್ತಿಯಾಗದ ಪರಿಣಾಮ, ಈ ಭಾಗದ ರೈತರ ನೂರಾರು ಎಕರೆ ಭತ್ತದ ಗದ್ದೆಗಳು ಪಾಳು ಬಿದ್ದಿವೆ. ಹೂಳೆತ್ತಲು ಜನ ಮನವಿ ಮಾಡಿಕೊಂಡ್ರೂ ಯಾರೂ ತಲೆಕೆಡಿಸಿಕೊಂಡಿಲ್ಲ.
ಹಾಸನ (Hassan) ಜಿಲ್ಲೆ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಿಂದ ಚಿಕ್ಕಹಳ್ಳ ನೀರಿಗೆ ಅಡ್ಡಲಾಗಿ ಒಂದು ಡ್ಯಾಂ ಕಟ್ಟಲಾಗಿತ್ತು. ಚುಂಗನಹಳ್ಳಿ ಗ್ರಾಮದ ಸಮೀಪ ನೂರಾರು ವರ್ಷಗಳ ಹಿಂದೆ ನಿರ್ಮಿಸಲಾದ ಚೆಕ್ಡ್ಯಾಂ ಇದೀಗ ಶಿಥಿಲಾವಸ್ಥೆ ತಲುಪಿದೆ. ಕಳೆದ ನಾಲ್ಕೈದು ವರ್ಷಗಳ ಹಿಂದೆ ಚೆಕ್ಡ್ಯಾಂನ ಒಂದು ಭಾಗ ಒಡೆದು ಹೋಗಿದ್ದು ದುರಸ್ತಿಯಾಗದ ಪರಿಣಾಮ, ಈ ಭಾಗದ ರೈತರ ನೂರಾರು ಎಕರೆ ಭತ್ತದ (Paddy) ಗದ್ದೆಗಳು ಪಾಳು ಬಿದ್ದಿವೆ. ಹೂಳೆತ್ತಲು ಜನ ಮನವಿ ಮಾಡಿಕೊಂಡ್ರೂ ಯಾರೂ ತಲೆಕೆಡಿಸಿಕೊಂಡಿಲ್ಲ.

ಚುಂಗನಹಳ್ಳಿ ಬಳಿ ನಿರ್ಮಿಸಿರುವ ಚೆಕ್ಡ್ಯಾಂನಿಂದ ಹರಿಯುವ ನೀರು ಸುತ್ತಮುತ್ತಲಿನ ರೈತರ ಜೀವನಾಧಾರವಾಗಿತ್ತು. ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನ ಬೆಳೆದು ರೈತರು ಆರ್ಥಿಕವಾಗಿ ಲಾಭಗಳಿಸಿ ಜೀವನ ನಡೆಸುತ್ತಿದ್ದರು. ಇದಲ್ಲದೇ ನೀರಾವರಿ ಸೌಲಭ್ಯದಿಂದ ಗ್ರಾಮದಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದವು. ಆದರೆ ಚೆಕ್ ಡ್ಯಾಂ ಒಡೆದು ಹೋದ ನಂತರ ನಾಲೆಗೆ ಹರಿಯುತ್ತಿದ್ದ ನೀರು ಸಂಪೂರ್ಣವಾಗಿ ನಿಂತು ಹೋಗಿ, ಕೃಷಿ ಚಟುವಟಿಕೆಗಳಿಗೆ ಭಾರಿ ಹೊಡೆತ ಬಿದ್ದಿದೆ. ನೀರಿನ ಕೊರತೆಯಿಂದ ಅನೇಕ ರೈತರು ಭತ್ತ ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ಕೆಲವರು ಅಡಿಕೆ, ಕಾಫಿ ಮುಂತಾದ ಪರ್ಯಾಯ ಬೆಳೆ ಬೆಳೆಯುವ ಪ್ರಯತ್ನ ಮಾಡ್ತಿದ್ದಾರೆ. ಆದ್ರೆ ಈ ಪರ್ಯಾಯ ಬೆಳೆಗಳಿಗೂ ನೀರು ಅಗತ್ಯ ಇರುವುದರಿಂದ ರೈತರಿಗೆ ತೀವ್ರ ಸಂಕಷ್ಟ ಎದುರಾಗಿದೆ.
ಈ ಹಿಂದೆ ಚೆಕ್ಡ್ಯಾಂ ನೀರು ಬಳಸಿಕೊಂಡು ರೈತರು ಭತ್ತ ಬೆಳೆಯುತ್ತಿದ್ದ ಕಾರಣ ವರ್ಷವಿಡೀ ಊಟಕ್ಕೆ ಭತ್ತ ಲಭ್ಯವಾಗುತ್ತಿತ್ತು. ಆದರೆ ಚೆಕ್ಡ್ಯಾಂ ಒಡೆದ ಬಳಿಕ ನೀರಿನ ಕೊರತೆಯಿಂದ ರೈತರು ಭತ್ತ ಬೆಳೆಯುವುದನ್ನೇ ನಿಲ್ಲಿಸುವುದರಿಂದ ಸದ್ಯ ದುಡ್ಡು ಕೊಟ್ಟು ಅಕ್ಕಿ ಖರೀದಿಸುವ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಗ್ರಾಮಸ್ಥರು ಹಾಗೂ ರೈತರು ಹಲವು ಬಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಕ್ಷೇತ್ರದ ಶಾಸಕ ಎಚ್.ಕೆ.ಸುರೇಶ್ಗೆ ಮನವಿ ಸಲ್ಲಿಸಿದ್ದಾರೆ. ಆದರೆ ಆಶ್ವಾಸನೆ ನೀಡಿದ್ದಾರೆ ಹೊರತು ಯಾವುದೇ ಕ್ರಮ ಕೈಗೊಂಡಿಲ್ಲ. ದುರಸ್ತಿ ಕಾರ್ಯ ವಿಳಂಬವಾಗುತ್ತಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರೈತರ ಜೀವನಕ್ಕೆ ಭತ್ತದ ಗದ್ದೆಗಳೇ ಜೀವನಾಧಾರವಾಗಿದ್ದವು. ಆದರೆ ಚೆಕ್ಡ್ಯಾಂ ದುರಸ್ತಿಯಿಂದ ಭತ್ತ ಬೆಳೆಯುವುದನ್ನೇ ನಿಲ್ಲಿಸಿ ಗದ್ದೆಗಳನ್ನು ಪಾಳು ಬಿಟ್ಟಿದ್ದು, ಗದ್ದೆ ಬಿಟ್ಟರೆ ಬೇರೆ ಭೂಮಿಯಿಲ್ಲ. ಕೂಡಲೇ ಚೆಕ್ ಡ್ಯಾಂ ದುರಸ್ತಿಪಡಿಸಿ ಅನುಕೂಲ ಮಾಡಿಕೊಡಬೇಕು ಹಾಗೂ ಕಿರುನಾಲೆಯಲ್ಲಿ ಹೂಳು ತೆಗೆದು ಸ್ವಚ್ಛ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

