ಪರೀಕ್ಷೆಯಲ್ಲಿ ನಕಲು| ಪೋಷಕರ ಸಮ್ಮುಖದಲ್ಲಿ ಸಿಸಿಟಿವಿ ಪರೀಕ್ಷಿಸಿದ್ದಕ್ಕೆ ಮನನೊಂದು ಕೆರೆಗೆ ಹಾರಿದ ವಿದ್ಯಾರ್ಥಿನಿ

Public TV
1 Min Read
Cheating in exam Science Student jumps into lake Mudhol Belagavi

ಬಾಗಲಕೋಟೆ: ವಿಜ್ಞಾನ ಪರೀಕ್ಷೆಯಲ್ಲಿ (Science Exam) ವಿದ್ಯಾರ್ಥಿನಿ ನಕಲು ಮಾಡಿ ಸಿಕ್ಕು ಬಿದ್ದು, ಪೋಷಕರ‌ ಸಮ್ಮುಖದಲ್ಲಿ ಬುದ್ದಿವಾದ ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ (Student) ಕೆರೆ ನೀರಿಗೆ ಬಿದ್ದು ಜೀವ ಬಿಟ್ಟಿರುವ ಘಟನೆ ಮುಧೋಳ (Mudhol) ನಗರದಲ್ಲಿ ನಡೆದಿದೆ.

ಶಾರದಾ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪ್ರಥಮ ವರ್ಷ ಓದುತ್ತಿದ್ದ ತೇಜಸ್ವಿನಿ ದೊಡಮನಿ ನೀರಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದನ್ನೂ ಓದಿ: ಜಾತ್ರೆಯಲ್ಲಿ ಕೇಂದ್ರ ಸಚಿವರ ಮಗಳಿಗೆ ಕಿರುಕುಳ – ಓರ್ವ ಆರೋಪಿ ಬಂಧನ

 

ಫೆ.27 ರಂದು ಕಾಲೇಜಿನಲ್ಲಿ ಪರೀಕ್ಷೆ ನಡೆದಿತ್ತು. ಈ ವೇಳೆ ನಕಲು (Copy) ಮಾಡುವ ತೇಜಸ್ವಿನಿ ಸಿಕ್ಕಿ ಬಿದ್ದಿದ್ದಳು. ಕೂಡಲೇ ಸಿಬ್ಬಂದಿ ತೇಜಸ್ವಿನಿಯನ್ನು ಪ್ರಶ್ನೆ ಮಾಡಿ ಬುದ್ಧಿವಾದ ಹೇಳಿದ್ದರು.

ಬುದ್ಧಿವಾದ ಹೇಳಿದ ವಿಚಾರವನ್ನು ತೇಜಸ್ವಿನಿ ಮನೆಗೆ ಬಂದು ತಿಳಿಸಿದ್ದಾಳೆ. ವಿಚಾರ ತಿಳಿದ ಪೋಷಕರು ಮರುದಿನ ಶಾಲೆಗೆ ಬಂದು ಮಗಳನ್ನು ಪ್ರಶ್ನಿಸಿದ್ದು ಯಾಕೆ ಎಂದು ಕೇಳಿದ್ದಾರೆ. ಇದಕ್ಕೆ ಸಿಬ್ಬಂದಿ ಪರೀಕ್ಷೆಯಲ್ಲಿ ಆಕೆ ನಕಲು ಮಾಡುತ್ತಿದ್ದಳು ಎಂಬ ವಿಚಾರವನ್ನು ತಿಳಿಸುತ್ತಾರೆ.

 

ಸಿಬ್ಬಂದಿ ಹೇಳಿದರೂ ತೇಜಸ್ವಿನಿ ನಾನು ನಕಲು ಮಾಡಿಲ್ಲ ಎಂದು ವಾದಿಸಿದ್ದಾಳೆ. ಈ ಸಂದರ್ಭದಲ್ಲಿ ಕಾಲೇಜು ಸಿಬ್ಬಂದಿ ಸಿಸಿ ಕ್ಯಾಮೆರಾ ಪರೀಕ್ಷಿಸಲು ಮುಂದಾದಾಗ ಕಾಲೇಜಿನಿಂದಲೇ ತೇಜಸ್ವಿನಿ ಓಡಿ ಹೋಗಿದ್ದಳು. ಈ ಬಗ್ಗೆ ತೇಜಸ್ವಿನಿ ಪೋಷಕರು ಮುಧೋಳ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಇಂದು ತೇಜಸ್ವಿನಿ ನಗರದ ಮಹಾರಾಣಿ ಕರೆಯಲ್ಲಿ ಶವವಾಗಿ‌ ಪತ್ತೆಯಾಗಿದ್ದಾಳೆ. ತನಿಖೆ ನಡೆಸಿದ ಪೊಲೀಸರು ಕಾಲೇಜಿನಿಂದ ಹೊರಹೋದ ರಸ್ತೆಯಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ತೇಜಸ್ವಿನಿ ವೇಗವಾಗಿ ಕೆರೆ ಕಡೆ ಹೆಜ್ಜೆ ಹಾಕುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈಗ ತೇಜಸ್ವಿನಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 

Share This Article