ಬಾಲ್ ಟ್ಯಾಂಪರಿಂಗ್ – ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಿದ ಐಸಿಸಿ

Public TV
2 Min Read
icc

ದುಬೈ: ಸಂಭಾವಿತರ ಕ್ರೀಡೆ ಎಂದು ಹೆಸರು ಪಡೆದಿರುವ ಕ್ರಿಕೆಟ್ ನ ಕೆಲ ನಿಯಮಗಳಿಗೆ ಐಸಿಸಿ (ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಹೊಸ ತಿದ್ದುಪಡಿ ತರುವ ಮೂಲಕ ಕಳ್ಳಾಟಕ್ಕೆ ಮತ್ತಷ್ಟು ಕಠಿಣ ಶಿಕ್ಷೆ ನೀಡಲು ಮುಂದಾಗಿದೆ.

ಮಾರ್ಚ್ ನಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಟೂರ್ನಿ ವೇಳೆ ಬಾಲ್ ಟ್ಯಾಂಪರಿಂಗ್ ನಡೆಸಿ ಆಸೀಸ್ ಆಟಗಾರರು ಸಿಕ್ಕಿಬಿದ್ದ ಬಳಿಕ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ ಎದುರಾಗಿತ್ತು. ಅಲ್ಲದೇ ಆಟಗಾರರ ವೃತ್ತಿ ಬದುಕಿನ ಮೇಲೆಯೂ ವ್ಯತಿರಿಕ್ತ ಪರಿಣಾಮ ಉಂಟು ಮಾಡಿತ್ತು. ಇದರಿಂದ ಎಚ್ಚೆತ್ತಿರುವ ಐಸಿಸಿ ಐರ್ಲೆಂಡ್‍ನ ಡಬ್ಲಿನ್‍ನಲ್ಲಿ ನಡೆದ ವಾರ್ಷಿಕ ಸಭೆಯ ಬಳಿಕ ಕಠಿಣ ನಿಯಮಗಳ ತಿದ್ದುಪಡಿ ಕುರಿತು ತೀರ್ಮಾನಿಸಿದೆ. ಇದರಿಂದ ಕ್ರೀಡಾಸ್ಫೂರ್ತಿ ಹೆಚ್ಚಿಸುವ ಕುರಿತು ಗಮನಹರಿಸಿದೆ.

cricket

ಈ ಕುರಿತಂತೆ ಹೊಸ ತಿದ್ದುಪಡಿಗಳ ಅನ್ವಯ ಮೋಸದಾಟ, ಬಾಲ್ ಟ್ಯಾಂಪರಿಂಗ್, ವೈಯಕ್ತಿಕ ನಿಂದನೆ ಕೃತ್ಯಗಳನ್ನು ಲೆವೆಲ್ 2 ಮತ್ತು 3 ಅಪರಾಧಗಳ ಅಡಿ ಶಿಕ್ಷೆ ನೀಡಲು ನಿರ್ಧರಿಸಿದೆ. ಅಶ್ಲೀಲ ಪದ ಬಳಕೆ, ಅಂಪೈರ್ ತೀರ್ಮಾನಕ್ಕೆ ವಿರೋಧ ಕೃತ್ಯಗಳನ್ನು ಲೆವೆಲ್ 1 ಅಪರಾಧ ಅಡಿ ಹಾಗೂ ವಿಶೇಷವಾಗಿ ಬಾಲ್ ಟ್ಯಾಂಪರಿಂಗ್ ಮಾಡಿದರೆ ಲೆವೆಲ್ 3 ಅಡಿ ಶಿಕ್ಷೆ ವಿಧಿಸಬಹುದಾಗಿದೆ.

ಸಮಿತಿಯ ತೆಗೆದುಕೊಂಡಿರುವ ನೂತನ ತಿದ್ದುಪಡಿ ಅನ್ವಯ ಲೆವೆಲ್ 3ರ ಕೃತ್ಯಗಳಿಗೆ 8 ಋಣಾತ್ಮಕ ಅಂಕಗಳಿಂದ 12 ಅಂಕಗಳಿಗೆ ಹೆಚ್ಚಿಸಿದೆ. ಇದು 6 ಟೆಸ್ಟ್ ಅಥವಾ 12 ಏಕದಿನ ಪಂದ್ಯಗಳ ನಿಷೇಧಕ್ಕೆ ಸಮಾನಾಗಿರುತ್ತದೆ. ಅಲ್ಲದೇ ಸ್ಟಂಪ್ ನಲ್ಲಿ ಅಳವಡಿಸುವ ಮೈಕ್ರೊಫೋನನ್ನು ಸಹ ನವೀಕರಿಸುವ ಕುರಿತು ತೀರ್ಮಾನ ಕೈಗೊಂಡಿದ್ದು, ಇದರಲ್ಲಿ ದಾಖಲಾದ ಅಂಶಗಳನ್ನು ಯಾವುದೇ ಸಮಯದಲ್ಲಿ ಬಹಿರಂಗ ಪಡಿಸುವ ಕುರಿತು ಮಾಹಿತಿ ನೀಡಿದೆ.

ವಿಶೇಷವಾಗಿ ಸದ್ಯ ಕೈಗೊಡಿರುವ ತಿದ್ದುಪಡಿಗಳು ಕ್ರಿಕೆಟ್ ಬೋರ್ಡ್ ಗಳಿಗೂ ಅನ್ವಯ ಆಗಲಿದ್ದು, ಒಂದೊಮ್ಮೆ ನಿರ್ದಿಷ್ಟ ಸಮಿತಿ ಆಟಗಾರರ ನಿಯಮಗಳ ಮಿತಿ ಮೀರಿದರೆ ಕ್ರಿಕೆಟ್ ಮಂಡಳಿ ಸಹ ನಿರ್ಬಂಧಗಳನ್ನು ಎದುರಿಸಬಹುದು ಎಂದು ತಿಳಿಸಿದೆ. ಸದ್ಯ ಮಂಡಳಿ ತೆಗೆದುಕೊಂಡಿರುವ ನಿರ್ಧಾರಗಳು 21ನೇ ಶತಮಾನದಲ್ಲಿ ಕ್ರಿಕೆಟ್ ಆಟದಲ್ಲಿ ಹೊಸ ಚೈತನ್ಯವನ್ನು ತುಂಬಲು ಸಾಧ್ಯವಿದೆ. ಅಲ್ಲದೇ ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ಐಸಿಸಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಿಚರ್ಡ್ ಸನ್ ತಿಳಿಸಿದ್ದಾರೆ.

batsman

Share This Article
Leave a Comment

Leave a Reply

Your email address will not be published. Required fields are marked *