ಮಂಗಳೂರು: ಚಾರ್ಮಾಡಿ ಘಾಟಿಯಲ್ಲೀಗ ನೀರವ ಮೌನ ಆವರಿಸಿದ್ದು, ಹೆದ್ದಾರಿ ಬಂದ್ ಆದ ಬಳಿಕ ಮನುಷ್ಯ, ವಾಹನಗಳ ಪ್ರವೇಶ ಇಲ್ಲದೆ ಅಲ್ಲಿನ ಬೆಟ್ಟಗಳು ಮಂಜು ಹೊದ್ದುಕೊಂಡು ಮಲಗಿಬಿಟ್ಟಿದೆ. ಆದರೆ ಅಲ್ಲಿನ ಮೂಕ ಪ್ರಾಣಿಗಳ ರೋದನೆ ಮಾತ್ರ ಹೇಳತೀರದ್ದಾಗಿದೆ.
ಚಾರ್ಮಾಡಿ ವೀವ್ ಪಾಯಿಂಟ್ ಬಳಿಯಿರುವ ಅಣ್ಣಪ್ಪ ಸ್ವಾಮಿ ಗುಡಿಗೆ ಬಾಗಿಲು ಮುಚ್ಚಿ ತಿಂಗಳಾಗುತ್ತಾ ಬಂದಿದೆ. ಹೀಗಾಗಿ ಅಲ್ಲಿರುವ ಮಂಗಗಳು ಆಹಾರ ಇಲ್ಲದೆ ಪರದಾಡುತ್ತಿವೆ. ಯಾರಾದರೂ ಅಲ್ಲಿಗೆ ಹೋದಲ್ಲಿ ಹಿಂದಿನಿಂದ ಓಡುತ್ತಾ ಬಂದು ಕೈಚಾಚುತ್ತವೆ. ಮಂಗಗಳು ಹಸಿವಿನಿಂದ ರೋದಿಸುತ್ತಾ ತನ್ನ ಮರಿಗಳೊಂದಿಗೆ ಓಡಿಬರುವುದು ಮನ ಕಲಕುತ್ತದೆ.
ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರು ಕೊಡುವ ಬಾಳೆಹಣ್ಣು, ಬಿಸ್ಕಟ್‍ಗಳೇ ಈ ಮಂಗಗಳಿಗೆ ಆಹಾರವಾಗಿತ್ತು. ಆದರೆ ಈಗ ಒಂದು ತಿಂಗಳಲ್ಲಿ ಎಲ್ಲಿ ನೋಡಿದರೂ ನೀರವ ಮೌನ ಆವರಿಸಿದ್ದು, ಬೀದಿನಾಯಿಗಳು ಹಾಗೂ ಮಂಗಗಳು ಹಸಿವಿನಿಂದ ರೋದಿಸುವಂತೆ ಮಾಡಿದೆ.
ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸುರಿದ ಮಹಾಮಳೆಗೆ ಮಂಗಳೂರು ಮತ್ತು ಚಿಕ್ಕಮಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿನಲ್ಲಿ ಭೂ ಕುಸಿತ ಉಂಟಾಗಿ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ ಮಣ್ಣು ತೆರವು ಕಾರ್ಯಾಚರಣೆ ಮುಗಿದು ಪೂರ್ಣಗೊಳ್ಳುವವರೆಗೂ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.