ಬೆಂಗಳೂರು: ಇನ್ನೊಂದು ವಾರದಲ್ಲಿ ಚನ್ನಪಟ್ಟಣ (Channapatna) ಅಭ್ಯರ್ಥಿಯನ್ನು ಫೈನಲ್ ಮಾಡುತ್ತೇವೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಸ್ಪಷ್ಟಪಡಿಸಿದ್ದಾರೆ.
ಬಿಡದಿ ತೋಟದ ಮನೆಯಲ್ಲಿ ಚನ್ನಪಟ್ಟಣ ಭಾಗದ ಮುಖಂಡರು, ಕಾರ್ಯಕರ್ತರ ಸಭೆ ಬಳಿಕ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಎರಡು ಬಾರಿ ಜೆಡಿಎಸ್ (JDS) ಗೆದ್ದಿದೆ. ಈ ಹಿನ್ನಲೆಯಲ್ಲಿ ದೆಹಲಿ ಮತ್ತು ರಾಜ್ಯ ಬಿಜೆಪಿ ನಾಯಕರ ಜೊತೆ ಮಾತನಾಡಿ ಜೆಡಿಎಸ್‌ಗೆ ಟಿಕೆಟ್ ಬಿಟ್ಟು ಕೊಡಲು ಮನವಿ ಮಾಡಿದ್ದಾರೆ. ಬಿಜೆಪಿ ನಾಯಕರ ಸಹಮತದೊಂದಿಗೆ ಅವರ ಅಭಿಪ್ರಾಯ ಪಡೆದು ತೀರ್ಮಾನ ಮಾಡೋಣ ಎಂದು ಹೇಳಿದ್ದೇನೆ. ಎಲ್ಲರು ಒಟ್ಟಾಗಿ ಕೆಲಸ ಮಾಡಿ ಎಂದು ಸೂಚನೆ ನೀಡಿದ್ದೇನೆ ಎಂದರು. ಇದನ್ನೂ ಓದಿ: ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅಭ್ಯರ್ಥಿ ಆಗಬೇಕು ಎಂಬ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿಖಿಲ್ ಕುಮಾರಸ್ವಾಮಿ ನಿಲ್ಲಬೇಕು ಎಂದು 95% ನಾಯಕರು, ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ನಾವು ಈಗ ಇರುವ ಸನ್ನಿವೇಶ ನೋಡಬೇಕು. ಏನೇನು ಬೆಳವಣಿಗೆಗಳು ಇವೆ ಎಂದು ನೋಡಬೇಕು. ನಿಖಿಲ್ ಮಂಡ್ಯದಲ್ಲಿ ನಿಲ್ಲಿಸಿದಾಗ ಎಲ್ಲಾ ಪಕ್ಷಗಳು ಒಂದಾಗಿ ಸೋಲಿಸಿದರು. ಬಿಜೆಪಿ, ಕಾಂಗ್ರೆಸ್, ರೈತ ಸಂಘ ಎಲ್ಲಾ ಒಂದಾಗಿದ್ದರು. ಅವೆಲ್ಲಾ ನೋಡಿದ್ದೇವೆ. ಚನ್ನಪಟ್ಟಣದಲ್ಲಿ ನನಗೆ ಎನ್‌ಡಿಎ ಅಭ್ಯರ್ಥಿ ಗೆಲ್ಲಲೇಬೇಕು. ನಿಖಿಲ್ ಅಥವಾ ಬೇರೆ ಅವರು ಅಭ್ಯರ್ಥಿ ಅನ್ನೋದಕ್ಕಿಂತ ಹೆಚ್ಚಾಗಿ ಎನ್‌ಡಿಎ ಅಭ್ಯರ್ಥಿ ಗೆಲುವು ಕಾಣಬೇಕು. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್, ರಾಜ್ಯ ನಾಯಕರು, ಕಾರ್ಯಕರ್ತರು ಎಲ್ಲರು ಸೇರಿ ಎರಡು ಪಕ್ಷದ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿ ಅಂತಿಮ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕಾರವಾರ| ಸಮುದ್ರದಲ್ಲಿ ಮುಳುಗುತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಪದೇ ಪದೇ ಚನ್ನಪಟ್ಟಣಕ್ಕೆ ಡಿಕೆ ಶಿವಕುಮಾರ್ (DK Shivakumar) ಪ್ರವಾಸ ಮಾಡುತ್ತಿದ್ದರೂ ಏನು ಆಗಲ್ಲ. ಡಿಕೆ ಶಿವಕುಮಾರ್ ಎಷ್ಟು ಬಾರಿ ಚನ್ನಪಟ್ಟಣಕ್ಕೆ ಭೇಟಿ ಮಾಡಿದರೂ ಅವರಿಗೇನು ಇಲ್ಲಿ ಫಲ ಸಿಗಲ್ಲ. ಇನ್ನೊಂದು ವಾರದಲ್ಲಿ ಚನ್ನಪಟ್ಟಣ ಟಿಕೆಟ್ ಫೈನಲ್ ಆಗುತ್ತದೆ. ಚುನಾವಣೆ ದಿನಾಂಕ 4-5 ದಿನಗಳಲ್ಲಿ ಯಾವಾಗ ಬೇಕಾದರೂ ಘೋಷಣೆ ಆಗಬಹುದು. ಕೂಡಲೇ ಬಿಜೆಪಿ ಹೈಕಮಾಂಡ್, ರಾಜ್ಯ ನಾಯಕರ ಜೊತೆ ಚರ್ಚೆ ಮಾಡಿ ಅಭ್ಯರ್ಥಿ ಫೈನಲ್ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಸಹರಾ ಮರುಭೂಮಿಯಲ್ಲಿ ಭಾರೀ ಮಳೆ – 50 ವರ್ಷದ ನಂತರ ಕೆರೆಗಳು ಭರ್ತಿ