ಬೆಂಗಳೂರು: ಚನ್ನಪಟ್ಟಣದಲ್ಲಿ (Channapatna) ಜೆಡಿಎಸ್ (JDS) ಪಕ್ಷದಿಂದಲೇ ಎನ್‌ಡಿಎ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ. ಈ ವಿಚಾರ ಭಾನುವಾರ ಫೈನಲ್ ಆಗಬಹುದು ಎಂದು ಜೆಡಿಎಸ್ ನಾಯಕ ಸುರೇಶ್ ಬಾಬು ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೆಲ್‌ನಲ್ಲಿ ನಡೆದ ಸಭೆ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ, ಮೂರು ಕ್ಷೇತ್ರಗಳಲ್ಲಿ ಒಮ್ಮತದ ಅಭ್ಯರ್ಥಿ ಹಾಕಿ ಗೆಲ್ಲಬೇಕು ಎಂದು ಚರ್ಚೆ ಮಾಡಿದ್ದೇವೆ. ಎರಡು ಕ್ಷೇತ್ರದ ಟಿಕೆಟ್ ಈಗ ಘೋಷಣೆ ಆಗಿದೆ. ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ ಎಂದಿದ್ದಾರೆ.
ಕುಮಾರಸ್ವಾಮಿಯವರು (H.D Kumaraswamy) ಯಾರನ್ನಾದರೂ ನಿಲ್ಲಿಸಲಿ ಎಂದು ಹೈಕಮಾಂಡ್ ಹೇಳಿದ್ದಾರೆ. ಅವರು ಎಲ್ಲಾ ಸಾಧಕ ಭಾದಕಗಳನ್ನು ನೋಡಿಕೊಂಡು, ಮೈತ್ರಿ ಭದ್ರವಾಗಬೇಕು ಎಂದು ತೀರ್ಮಾನಕ್ಕೆ ಬರುತ್ತಾರೆ. ಈ ಮೂಲಕ ಜೆಡಿಎಸ್‌ನಿಂದಲೇ ಎನ್‌ಡಿಎ ಅಭ್ಯರ್ಥಿ ಸ್ಪರ್ಧಿಸುತ್ತಾರೆ. ಎರಡು ಪಕ್ಷದವರು ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ ಎಂದಿದ್ದಾರೆ.
ವಿಜಯೆಂದ್ರ ಅವರು ಈ ಸ್ಥಾನ ನಿಮ್ಮ ಜನತಾದಳದ್ದು, ಕುಳಿತುಕೊಂಡು ತೀರ್ಮಾನ ಕೊಡಿ ಎಂಬ ಅಭಿಪ್ರಾಯವನ್ನು ಸಭೆಯಲ್ಲಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಮ್ಮ ಪಕ್ಷದ ಅಭ್ಯರ್ಥಿ ನಿಲ್ಲಿಸುತ್ತೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಸೃಷ್ಟಿಯಾಗದ ಹಾಗೆ ಕಾಂಗ್ರೆಸ್ ಸರ್ಕಾರವನ್ನು ಹೊಗಲಾಡಿಸಲಾಗುತ್ತದೆ ಎಂದಿದ್ದಾರೆ.
ಮೂರು ಉಪಚುನಾವಣೆಗೆ ಮೈತ್ರಿ ಧರ್ಮದಂತೆ 2+1 ಸೂತ್ರಕ್ಕೆ ಜೆಡಿಎಸ್ ಬೇಡಿಕೆ ಇಟ್ಟಿತ್ತು. ಜೆಡಿಎಸ್ ಅಭ್ಯರ್ಥಿ ಪರ ಯೋಗೀಶ್ವರ್ ಚುನಾವಣೆಯಲ್ಲಿ ಕೆಲಸ ಮಾಡುವಂತೆ ಸೂಚಿಸಬೇಕು ಎಂದು ದಳ ನಾಯಕರು ತಿಳಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.