ಚಂದ್ರನ ಅಂಗಳದಲ್ಲಿ ಮೂರನೇ ಹೆಜ್ಜೆ ಇಡಲು ಭಾರತ ಸಜ್ಜಾಗಿದೆ. ವಿಜ್ಞಾನ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆಯ ನಿರೀಕ್ಷೆಯಲ್ಲಿರುವ ಇಸ್ರೋಗೆ ಶುಕ್ರವಾರ ಮುಹೂರ್ತ ಕೂಡಿಬಂದಿದೆ. ಭಾರತದ ಚಂದ್ರಯಾನ-3 (Chandrayaan-3) ಗಗನನೌಕೆಯು ಜುಲೈ 14 ರಂದು ಮಧ್ಯಾಹ್ನ 2:35ಕ್ಕೆ ಉಡಾವಣೆಗೊಳ್ಳಲಿದೆ. ಈ ಐತಿಹಾಸಿಕ ಕ್ಷಣವನ್ನು ಆನಂದಿಸಲು ಭಾರತೀಯರು ಕಾತರರಾಗಿದ್ದಾರೆ.
ಚಂದ್ರಯಾನ-3 ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-111 ಮೂಲಕ ಉಡಾವಣೆ ಮಾಡಲಾಗುವುದು. ಅತ್ಯಂತ ಸೂಕ್ಷ್ಮ ತಂತ್ರಜ್ಞಾನ ಬಳಸಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಗಗನನೌಕೆಯನ್ನು ಇಳಿಸಲಾಗುವುದು. ಇದನ್ನೂ ಓದಿ: ಚಂದ್ರಯಾನ-3 ಯಶಸ್ವಿ ಆಗಲೆಂದು ತಿರುಪತಿಯಲ್ಲಿ ಪೂಜೆ ಸಲ್ಲಿಸಿದ ಇಸ್ರೋ ವಿಜ್ಞಾನಿಗಳು
Advertisement
Advertisement
ಭಾರತದ ಹಿಂದಿನ ಚಂದ್ರಯಾನಗಳ ಉಡಾವಣೆಯೊಂದಿಗೆ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ತನ್ನ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗದ ಚಂದ್ರಯಾನ-2 ಕ್ಕಿಂತ ಇದು ಹೇಗೆ ಭಿನ್ನವಾಗಿದೆ? ಚಂದ್ರಯಾನ -3 ಹೇಗೆ ಕಾರ್ಯನಿರ್ವಹಿಸುತ್ತದೆ? ಚಂದ್ರಯಾನ-1 ಮತ್ತು ಚಂದ್ರಯಾನ-2 ಕ್ಕೆ ಹೋಲಿಸಿದರೆ ಚಂದ್ರಯಾನ-3 ವಿಶೇಷತೆ ಏನು ಎಂಬುದನ್ನು ತಿಳಿಯಲು ಜನರು ಆಸಕ್ತಿ ಹೊಂದಿದ್ದಾರೆ. ಅದನ್ನು ಕೆಳಗೆ ಅರ್ಥಮಾಡಿಕೊಳ್ಳೋಣ. ಅದಕ್ಕೂ ಮೊದಲು ಭೂಮಿಯ ಏಕೈಕ ಉಪಗ್ರಹ ಚಂದ್ರ, ಅದರ ಅನ್ವೇಷಣೆಯ ಇತಿಹಾಸ ಮತ್ತು ಮೈಲುಗಲ್ಲುಗಳ ಬಗ್ಗೆ ತಿಳಿಯೋಣ.
Advertisement
ಚಂದ್ರನ ಗಾತ್ರ ಭೂಮಿಗಿಂತ 4 ಪಟ್ಟು ಚಿಕ್ಕದು
ಭೂಮಿಯನ್ನುಳಿದು ಮಾನವರು ನಡೆದಾಡಿದ ಏಕೈಕ ಆಕಾಶಕಾಯವೆಂದರೆ ಅದು ಚಂದ್ರ. ಭೂಮಿ ಮತ್ತು ಚಂದ್ರನ ನಡುವಿನ ದೂರವು 3,84,399 ಕಿಮೀ ಇದೆ. ಚಂದ್ರನ ವ್ಯಾಸವು 2,159 ಮೈಲಿಗಳಷ್ಟಿದೆ ಅಂದರೆ ಭೂಮಿಗಿಂತ ನಾಲ್ಕು ಪಟ್ಟು ಚಿಕ್ಕದಾಗಿದೆ. ಚಂದ್ರನ ತೂಕ ಭೂಮಿಗಿಂತ 80 ಪಟ್ಟು ಕಡಿಮೆ. ಇದು ಸೌರಮಂಡಲದಲ್ಲಿ 5ನೇ ಅತಿ ದೊಡ್ಡ ಮತ್ತು ಭಾರವಾದ ಉಪಗ್ರಹವಾಗಿದೆ. ಇದು ಭೂಮಿಯನ್ನು ಒಂದು ಸುತ್ತು ಹಾಕಲು 27.3 ದಿನಗಳನ್ನು ತೆಗೆದುಕೊಳ್ಳುತ್ತದೆ. ದೂರದರ್ಶಕದ ಆವಿಷ್ಕಾರದ ನಂತರ ಚಂದ್ರನ ವೀಕ್ಷಣೆಯಲ್ಲಿ ಸಾಕಷ್ಟು ಪ್ರಗತಿಯಾಯಿತು. ಈ ಹೊಸ ಉಪಕರಣವನ್ನು ಗೆಲಿಲಿಯೊ ಗೆಲಿಲಿ ಚೆನ್ನಾಗಿ ಉಪಯೋಗಿಸಿಕೊಂಡು, ಚಂದ್ರನ ಮೇಲ್ಮೈನ ಪರ್ವತಗಳು ಮತ್ತು ಕುಳಿಗಳನ್ನು ಅವಲೋಕಿಸಿದನು. ಜಗತ್ತಿನ ಅತ್ಯಂತ ಬಲಿಷ್ಠ ರಾಷ್ಟ್ರಗಳಾದ ರಷ್ಯಾ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನ ನಡುವೆ ಬಾಹ್ಯಾಕಾಶದ ಬಗ್ಗೆ ಆಸಕ್ತಿ ಹೆಚ್ಚಾಯಿತು. ಅದರ ಪ್ರತಿಫಲದಿಂದಲೇ ಅನೇಕ ದೇಶಗಳು ಚಂದ್ರನೂರಿಗೆ ಪ್ರಯಾಣ ಬೆಳೆಸಲು ಸಾಧ್ಯವಾಯಿತು.
Advertisement
ಚಂದ್ರನ ಮೇಲೆ ರಷ್ಯಾ ಮೊದಲ ಹೆಜ್ಜೆ
ಅದು ಶೀತಲ ಸಮರದ ಸಂದರ್ಭ. ಬಾಹ್ಯಾಕಾಶ ಕ್ಷೇತ್ರದಲ್ಲಿ ಮೈಲುಗಲ್ಲು ಸಾಧಿಸಬೇಕು ಎಂದು ರಷ್ಯಾ ಮತ್ತು ಅಮೆರಿಕ ರಾಷ್ಟ್ರಗಳು ಪೈಪೋಟಿ ನಡೆಸಿದ್ದವು. ಈ ಪೈಪೋಟಿಯಲ್ಲಿ ಮೊದಲು ಯಶಸ್ವಿಯಾಗಿದ್ದು ರಷ್ಯಾ. ಆಗ ರಷ್ಯಾವನ್ನು ಸೋವಿಯತ್ ಒಕ್ಕೂಟ ಎಂದೇ ಕರೆಯಲಾಗುತ್ತಿತ್ತು (ನಂತರ ಕೆಲವು ದೇಶಗಳು ರಷ್ಯಾದಿಂದ ಸ್ವತಂತ್ರಗೊಂಡವು). ಸೋವಿಯತ್ ಒಕ್ಕೂಟದ ಕಾಲದಲ್ಲೇ (1930) ಆ ದೇಶದ ಬಾಹ್ಯಾಕಾಶ ಸಂಶೋಧನೆ ಆರಂಭವಾಗಿತ್ತು. ಮೊತ್ತ ಮೊದಲ ಮಾನವನನ್ನು ಬಾಹ್ಯಾಕಾಶಕ್ಕೆ ಕಳಿಸಿದ್ದು ರಷ್ಯನ್ನರು (ಯೂರಿ ಗಗಾರಿನ್- 1961). ಮೊತ್ತ ಮೊದಲ ಪ್ರಾಣಿಯನ್ನು ವ್ಯೋಮಕ್ಕೆ ಕಳಿಸಿದ್ದೂ ಅವರೇ (ಲೈಕಾ ನಾಯಿ- 1957). ಜಗತ್ತಿನ ಮೊತ್ತ ಮೊದಲ ಸ್ಯಾಟ್‌ಲೈಟ್ ಸಿದ್ಧಪಡಿಸಿ ಭೂಮಿ ಸುತ್ತುವಂತೆ ಮಾಡಿದವರೂ ಅವರೇ (ಸ್ಪುಟ್ನಿಕ್ 1- 1957). ಇದರ ಹೊರತಾಗಿ ಮೊದಲ ಬಾರಿಗೆ ಚಂದ್ರನ ಮೇಲೆ ಗಗನನೌಕೆಯನ್ನು ಕಳುಹಿಸುವಲ್ಲಿ ಸೋವಿಯತ್ ಒಕ್ಕೂಟ ಯಶಸ್ವಿಯಾಯಿತು.
ಚಂದ್ರನ ಮೇಲ್ಮೈ ತಲುಪಿದ ಮೊಟ್ಟ ಮೊದಲ ಮಾನವ ನಿರ್ಮಿತ ಗಗನನೌಕೆ ಸೋವಿಯತ್ ಒಕ್ಕೂಟದ ಲೂನಾ-2 (1959 ರ ಸೆಪ್ಟೆಂಬರ್ 13). ಮತ್ತೊಂದು ಕಾರ್ಯಾಚರಣೆಯಲ್ಲಿ ಲೂನಾ-9 ಚಂದ್ರನ ಮೇಲೆ ನಿಧಾನವಾಗಿ ಇಳಿಯಿತು. ಲೂನಾ-10 ಚಂದ್ರನನ್ನು ಪರಿಭ್ರಮಿಸಿದ ಪ್ರಪ್ರಥಮ ಮಾನವರಹಿತ ಗಗನನೌಕೆ. ಈ ಸಾಧನೆಗಳ ಮೂಲಕ ರಷ್ಯಾ ಅಂತರಿಕ್ಷ ಯಾನದಲ್ಲಿ ದಾಖಲೆ ಬರೆಯಿತು.
ಚಂದ್ರನ ಮೇಲೆ 2 ಗಂಟೆ ನಡೆದಾಡಿದ ಮಾನವರು
1969 ರಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕ ಮಾನವ ಇತಿಹಾಸದಲ್ಲಿ ರೋಮಾಂಚಕ ಅಧ್ಯಾಯವೊಂದನ್ನು ಬರೆಯಿತು. ಮಾನವಸಹಿತವಾಗಿ ಆಕಾಶಕ್ಕೆ ಹಾರಿದ್ದ ಅಮೆರಿಕದ ಅಪೊಲೊ-11 ಗಗನನೌಕೆ 1969ರ ಜುಲೈ 20 ರಂದು ಚಂದ್ರನ ಮೇಲೆ ಇಳಿಯಿತು. ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ ಎಂಬ ಹೆಗ್ಗಳಿಕೆಗೆ ನೀಲ್ ಆರ್ಮ್ ಸ್ಟ್ರಾಂಗ್ ಪಾತ್ರರಾದರು. ಇವರ ಜೊತೆ ಮೈಕೆಲ್ ಕಾಲಿನ್ಸ್, ಎಡ್ವಿನ್ ಬಜ್ ಆಲ್ಡ್ರಿನ್ ಸಹ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಈ ಮೂವರು ಗಗನಯಾತ್ರಿಗಳು ಚಂದ್ರನ ಮೇಲೆ 2 ಗಂಟೆಗಳ ಕಾಲ ಓಡಾಡಿದರು. ಚಂದ್ರನಲ್ಲಿ ಸಿಕ್ಕ ಕಲ್ಲು, ಖನಿಜಗಳನ್ನು ತಂದು ನಾಸಾದ ಪ್ರಯೋಗಾಲಯದಲ್ಲಿ ಇಟ್ಟರು. ಸೋವಿಯತ್ ಒಕ್ಕೂಟ, ಯುನೈಟೆಡ್ ಸ್ಟೇಟ್ಸ್, ಚೀನಾ, ಜಪಾನ್, ಭಾರತ, ಯುರೋಪಿಯನ್ ಒಕ್ಕೂಟ, ಇಸ್ರೇಲ್, ಅರಬ್ ಸಂಯುಕ್ತ ಸಂಸ್ಥಾನ, ಲಕ್ಸೆಂಬರ್ಗ್, ದಕ್ಷಿಣ ಕೊರಿಯಾ, ಇಟಲಿ ಈವರೆಗೆ ಚಂದ್ರನ ಮೇಲೆ ಕಾರ್ಯಾಚರಣೆ ನಡೆಸಿದ ದೇಶಗಳಾಗಿವೆ. ಇದನ್ನೂ ಓದಿ: Chandrayaan-3: ಬಹುನಿರೀಕ್ಷಿತ ಚಂದ್ರಯಾನ-3 ಗಗನನೌಕೆ ಜು.14, ಮಧ್ಯಾಹ್ನ 2:35ಕ್ಕೆ ಉಡಾವಣೆ
ಭಾರತದ ಚಂದ್ರಯಾನ-1
ಇಸ್ರೋ (ISRO) ತನ್ನ ಮೊದಲ ಚಂದ್ರ ಕಾರ್ಯಾಚರಣೆಯ ಭಾಗವಾಗಿ 2008 ರ ಅಕ್ಟೋಬರ್ 22 ರಂದು ಚಂದ್ರಯಾನ -1 ಅನ್ನು ಪ್ರಾರಂಭಿಸಿತು. ಇದನ್ನು ಪಿಎಸ್‌ಎಲ್‌ವಿ ಎಕ್ಸ್‌ಎಲ್ ರಾಕೆಟ್ ಮೂಲಕ ಉಡಾಯಿಸಲಾಯಿತು. 2008 ರ ನವೆಂಬರ್ 8 ರಂದು ಚಂದ್ರಯಾನ-1 ಗಗನನೌಕೆ ಚಂದ್ರನ ಕಕ್ಷೆಯನ್ನು ತಲುಪಿತು. ಚಂದ್ರಯಾನ ಯೋಜನೆಯ ವೆಚ್ಚ 386 ಕೋಟಿ ರೂ. ಇಸ್ರೋ ಪ್ರಾರಂಭಿಸಿದ ಚಂದ್ರಯಾನ-1 ರ ಮಿಷನ್ ಜೀವಿತಾವಧಿ ಎರಡು ವರ್ಷಗಳು. ಆದರೆ ಸುಮಾರು ಒಂದು ವರ್ಷದ ನಂತರ ಆರ್ಬಿಟರ್‌ನಲ್ಲಿ ತಾಂತ್ರಿಕ ನ್ಯೂನತೆಗಳು ಬರಲಾರಂಭಿಸಿದವು. ಇದು ಕನಿಷ್ಠ 312 ದಿನಗಳವರೆಗೆ ಕಾರ್ಯನಿರ್ವಹಿಸಿತು. 3,400 ಕ್ಕೂ ಹೆಚ್ಚು ಬಾರಿ ಚಂದ್ರನ ಸುತ್ತ ಪ್ರದಕ್ಷಿಣೆ ಹಾಕಿತು. 2009ರ ಆಗಸ್ಟ್ 28 ರಂದು ಚಂದ್ರಯಾನ-1 ವಿಜ್ಞಾನಿಗಳಿಗೆ ಡೇಟಾ ಕಳುಹಿಸುವುದನ್ನು ನಿಲ್ಲಿಸಿತು. 2009 ರ ಆಗಸ್ಟ್ 29 ರಂದು ಚಂದ್ರಯಾನ-1 ಮಿಷನ್ ಮುಚ್ಚುವುದಾಗಿ ಇಸ್ರೋ ಘೋಷಿಸಿತು.
ಚಂದ್ರನಲ್ಲಿ ನೀರಿನ ಅಂಶ ಪತ್ತೆ ಮಾಡಿದ ಇಸ್ರೋ
ಚಂದ್ರನಲ್ಲಿ ನೀರಿನ ಅಂಶಗಳಿವೆ ಎಂಬುದನ್ನು ಮೊದಲು ಪತ್ತೆ ಮಾಡಿದ ಕೀರ್ತಿ ಭಾರತದ ಬಾಹ್ಯಾಕಾಶ ಸಂಸ್ಥೆಗೆ ಸಲ್ಲುತ್ತದೆ. 2008 ರಲ್ಲಿ ಇಸ್ರೋ ಚಂದ್ರಯಾನ-1 ಉಡಾಯಿಸಿತ್ತು. ಚಂದ್ರಯಾನ-1 ತನ್ನೊಂದಿಗೆ ನಾಸಾ ಒದಗಿಸಿದ ಮೂನ್ ಮಿನರಲಾಜಿಕಲ್ ಮ್ಯಾಪರ್-ಎಂ3 ಎಂಬ ವೈಜ್ಞಾನಿಕ ಉಪಕರಣವನ್ನು ಹೊತ್ತೊಯ್ದಿತು. ಈ ಉಪಕರಣದಿಂದ ಹೊಮ್ಮಿದ ಚಿತ್ರಣಗಳು ನಾಸಾಕ್ಕೆ ಲಭಿಸಿದ್ದವು. ಬ್ರೌನ್ ವಿವಿಯ ಕಾರ್ಲಿ ಪೀಟರ್ಸ್ ಮತ್ತು ಮೇರಿಲ್ಯಾಂಡ್ ವಿವಿಯ ಜೆಸ್ಸಿಕಾ ಸನ್‌ಶೈನ್ ಎಂಬಿಬ್ಬರು ಮಹಿಳಾ ವಿಜ್ಞಾನಿಗಳು ಚಂದ್ರನಲ್ಲಿನ ನೀರಿನ ಅಂಶಗಳನ್ನು ವಿಶ್ಲೇಷಿಸಿ ಟಿಪ್ಪಣಿ ಬರೆದರು. ಭಾರತದ ಚಂದ್ರಯಾನ-1 ರಿಂದ ಚಂದ್ರನಲ್ಲಿ ನೀರಿನ ಅಂಶ ಪತ್ತೆ ಹಚ್ಚಲು ಸಾಧ್ಯವಾಯಿತು.
ಚಂದ್ರಯಾನ-2 ಏನಾಯ್ತು?
ಯಾರೂ ಮಾಡಿರದ ಐತಿಹಾಸಿಕ ಸಾಧನೆ ಮಾಡಲು ಮುಂದಾದ ಭಾರತ ಬಾಹ್ಯಾಕಾಶ ಮಿಷನ್ ಚಂದ್ರಯಾನ-2 ಆರಂಭಿಸಿತು. ಮೊಟ್ಟ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವ ವಲಯದಲ್ಲಿ ಲ್ಯಾಂಡ್ ಆಗಿ ಅನ್ವೇಷಣೆ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ 2019ರ ಜುಲೈ 22 ರಂದು ಚಂದ್ರಯಾನ-2ರ ಲ್ಯಾಂಡರ್ ವಿಕ್ರಮ್ ನಭಕ್ಕೆ ಹಾರಿತು. ಆದರೆ ಚಂದ್ರನಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಪ್ರಯತ್ನ ವಿಫಲವಾಯಿತು. ಸೆಪ್ಟೆಂಬರ್ 6 ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಅಪ್ಪಳಿಸಿತು. ಚಂದ್ರಯಾನ-2 ರ ಯಶಸ್ಸಿನ ನಿರೀಕ್ಷೆಯಲ್ಲಿದ್ದ ಇಸ್ರೋ ವಿಜ್ಞಾನಿಗಳು, ದೇಶದ ಜನತೆಗೆ ಅಂದು ನಿರಾಸೆಯಾಯಿತು. ಸುಮಾರು ಮೂರು ತಿಂಗಳ ನಂತರ ಅಮೆರಿಕದ NASA ಅದರ ಅವಶೇಷಗಳನ್ನು ಕಂಡುಹಿಡಿದಿದೆ. ಇದನ್ನೂ ಓದಿ: ಜಗತ್ತನ್ನು ಅಚ್ಚರಿಗೊಳಿಸಿದ ISRO – ಚಂದ್ರನ ಮೇಲ್ಮೈಯಲ್ಲಿ ದೊಡ್ಡ ಪ್ರಮಾಣದ ಸೋಡಿಯಂ ಪತ್ತೆಹಚ್ಚಿದ ಚಂದ್ರಯಾನ-2
ಪ್ರಧಾನಿಯನ್ನು ತಬ್ಬಿ ಕಣ್ಣೀರಿಟ್ಟಿದ್ದ ಇಸ್ರೋ ಅಧ್ಯಕ್ಷ
ಚಂದ್ರಯಾನ-2 ರ ಲ್ಯಾಂಡರ್‌ನ್ನು ಚಂದ್ರನಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಪ್ರಯತ್ನ ವಿಫಲವಾದ್ದರಿಂದ, ಭೂಕೇಂದ್ರದೊಂದಿಗಿನ ಲ್ಯಾಂಡರ್ ಸಂವಹನ ಕಡಿತಗೊಂಡಿತು. 2019ರ ಸೆಪ್ಟೆಂಬರ್ 7 ರ ರಾತ್ರಿ 2.30ಕ್ಕೆ ಈ ವಿಚಾರವನ್ನು ಘೋಷಣೆ ಮಾಡುವಾಗ ಆಗಿನ ಇಸ್ರೋ ಅಧ್ಯಕ್ಷ ಕೆ.ಶಿವನ್ ಗದ್ಗದಿತರಾದರು. ಚಂದ್ರಯಾನ-2 ಯಶಸ್ಸಿನ ನಿರೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿದ್ದರು. ಈ ವೇಳೆ ಮೋದಿ ಅವರನ್ನು ತಬ್ಬಿಕೊಂಡು ಶಿವನ್ ಅವರು ಗಳಗಳನೆ ಅತ್ತರು. ಆಗ ಪ್ರಧಾನಿ ಮೋದಿ ಅವರು ಇಸ್ರೋ ಅಧ್ಯಕ್ಷರನ್ನು ಸಂತೈಸಿದ ಪ್ರಸಂಗ ನಡೆಯಿತು.
ಮತ್ತೊಂದು ಸಾಧನೆಯ ಹೊಸ್ತಿಲಲ್ಲಿ ಭಾರತ
ಚಂದ್ರಯಾನ-2 ವೈಫಲ್ಯವನ್ನು ಗಮನದಲ್ಲಿಟ್ಟುಕೊಂಡು ಚಂದ್ರಯಾನ-3 ಯಶಸ್ಸಿಗೆ ಇಸ್ರೋ ಅಡಿಯಿಟ್ಟಿದೆ. ಜು.14 ರ ಮಧ್ಯಾಹ್ನ 2:35ಕ್ಕೆ ಚಂದ್ರಯಾನ-3 ಅನ್ನು ಎಲ್‌ವಿಎಂ3 ಮೂಲಕ ಉಡಾವಣೆಗೆ ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದಾರೆ. ಚಂದ್ರಯಾನ-3 ಯೋಜನೆ ಚಂದ್ರಯಾನ-2ರ ಮುಂದುವರಿದ ಭಾಗವಾಗಿದ್ದು, ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ಗಗನನೌಕೆ ಇಳಿಸಲಾಗುವುದು. ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮತ್ತು ರೋವರ್ ಕಾನ್ಫಿಗರೇಶನ್ ಅನ್ನು ಚಂದ್ರನ ಕಕ್ಷೆಯಲ್ಲಿ 100 ಕಿಮೀವರೆಗೆ ಸಾಗಿಸುತ್ತದೆ.
4 ಕಿಮೀ ಉದ್ದ, 2 ಕಿಮೀ ಅಗಲದ ಪ್ರದೇಶದಲ್ಲಿ ಇಳಿಯುತ್ತೆ ನೌಕೆ
ಚಂದ್ರಯಾನ-3 ಗಗನನೌಕೆಯನ್ನು ಇಳಿಸಲು ಚಂದ್ರನ ಮೇಲ್ಮೈನಲ್ಲಿ ಜಾಗವನ್ನು ಗುರುತಿಸಲಾಗಿದೆ. ಚಂದ್ರನ ದಕ್ಷಿಣ ಧ್ರುವದ ಬಳಿಯ 4 ಕಿಮೀ ಉದ್ದ ಹಾಗೂ 2 ಕಿಮೀ ಅಗಲದ ಪ್ರದೇಶದಲ್ಲಿ ಗಗನನೌಕೆಯನ್ನು ಇಳಿಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.
ಚಂದ್ರಯಾನ-2ರಂತಹ ಯಶಸ್ಸು ಆಧಾರಿತ ಯೋಜನೆಗೆ ಬದಲಾಗಿ, ಚಂದ್ರಯಾನ-3 ರಲ್ಲಿ ವೈಫಲ್ಯ ಆಧಾರಿತ ವಿನ್ಯಾಸವನ್ನು ಆರಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ವೈಫಲ್ಯಕ್ಕೆ ಕಾರಣವಾಗುವ ಅಂಶಗಳು ಯಾವುವು? ಅವುಗಳಿಂದ ಹೇಗೆ ರಕ್ಷಣೆ ಪಡೆಯಬೇಕು ಎಂಬುದರ ಕುರಿತು ಸೂಕ್ಷ್ಮವಾಗಿ ಪರಿಶೀಲನೆ ಮಾಡಲಾಗಿದೆ. ಚಂದ್ರಯಾನ-1 ಮತ್ತು 2ರಲ್ಲಿ ಇದ್ದಂತೆ ಚಂದ್ರಯಾನ-3ರಲ್ಲಿ ಆರ್ಬಿಟರ್ ಇರುವುದಿಲ್ಲ. ಲ್ಯಾಂಡರ್ ಮತ್ತು ರೋವರ್ ಹೊತ್ತ ಗಗನನೌಕೆಯು ಆಗಸ್ಟ್ 23 ರ ಸುಮಾರಿಗೆ ಚಂದ್ರನ ಕಕ್ಷೆಗೆ ತಲುಪಲಿದೆ. ನಂತರ 15 ದಿನಗಳಲ್ಲಿ ನೌಕೆ ಚಂದ್ರನಲ್ಲಿ ಇಳಿಯಲಿದೆ. ಲ್ಯಾಂಡರ್ ಮತ್ತು ರೋವರ್ ಚಂದ್ರನ ಮೇಲ್ಮೈಯಲ್ಲಿ ಕಾರ್ಯನಿರ್ವಹಿಸಲು ಮತ್ತು ಡೇಟಾವನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆ. ನೌಕೆ ಚಂದ್ರನಲ್ಲಿ ಇಳಿದಾಗ ಲ್ಯಾಂಡರ್‌ನಿಂದ ರೋವರ್ ಬೇರ್ಪಟ್ಟು ಪ್ರಯೋಗ ನಡೆಸಿ, ಡೇಟಾವನ್ನು ಸಂಗ್ರಹಿಸಲು ಚಂದ್ರನ ಮೇಲ್ಮೈಯಲ್ಲಿ ಸಂಚರಿಸುತ್ತದೆ. ಚಂದ್ರನನ್ನು ಆವರಿಸಿರುವ ಶಿಲಾ ಪದರದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥ ಅಧ್ಯಯನ ನಡೆಸುವ ಲೂನಾರ್ ರಿಗೊಲಿತ್, ಅಲ್ಲಿ ಭೂಕಂಪನ ಅಧ್ಯಯನ ಮಾಡುವ ಲೂನಾರ್ ಸೆಸಿಮಿಸಿಟಿ, ಹೊರ ಆವರಣದಲ್ಲಿನ ಪ್ಲಾಸ್ಮಾ, ಬಾಹ್ಯಾಕಾಶ ನೌಕೆ ಇಳಿದ ಪ್ರದೇಶದಲ್ಲಿನ ಧಾತುರೂಪದ ಸಂಯೋಜನೆ ಮುಂತಾದವುಗಳ ಅಧ್ಯಯನ ನಡೆಸಲಾಗುವುದು. ಇದನ್ನೂ ಓದಿ: ಮುಂದಿನ ವರ್ಷ ಇಸ್ರೋದಿಂದ ಚಂದ್ರಯಾನ-3
ಚಂದ್ರಯಾನ-2 ವಿಶೇಷತೆ ಏನು?
2019ರ ಚಂದ್ರಯಾನ-2 ಯೋಜನೆಯ ಗಗನನೌಕೆಯು ಒಟ್ಟು 3,872 ಕೆಜಿ ತೂಕ ಇತ್ತು. ಆರ್ಬಿಟರ್, ಲ್ಯಾಂಡರ್, ರೋವರ್‌ನ್ನು ಹೊತ್ತು ಸಾಗಿತ್ತು. ಆರ್ಬಿಟರ್ ತೂಕ 2,369 ಕೆಜಿ, ಲ್ಯಾಂಡರ್ ತೂಕ 1,477 ಕೆಜಿ, ರೋವರ್ 26 ಕೆಜಿ ತೂಕವಿತ್ತು. ಆರ್ಬಿಟರ್ ಜೀವಿತಾವಧಿ 1 ವರ್ಷದ ಯೋಜನೆಯಾಗಿತ್ತು (ಗರಿಷ್ಠ 7 ವರ್ಷ). ಲ್ಯಾಂಡರ್, ರೋವರ್‌ನದ್ದು 1 ಚಂದ್ರನ ದಿನ. ಲ್ಯಾಂಡಿಂಗ್‌ಗಾಗಿ 70.9 ಡಿಗ್ರಿ ದಕ್ಷಿಣ, 22.7 ಡಿಗ್ರಿ ಪೂರ್ವ ಸ್ಥಳ ಗುರುತಿಸಲಾಗಿತ್ತು. ಚಂದ್ರನಲ್ಲಿ ತಲುಪಲು ಗಗನನೌಕೆ ಒಟ್ಟು 48 ದಿನಗಳನ್ನು ತೆಗೆದುಕೊಂಡಿತ್ತು. ಉಡಾವಣೆಗೊಂಡ ನಂತರ ಭೂಮಿಯ ಸುತ್ತ 23 ದಿನಗಳು, ಭೂಮಿಯ ಗುರುತ್ವಾಕರ್ಷಣಾ ಬಲ ಕಳೆದುಕೊಂಡು ಚಂದ್ರನತ್ತ ಹೋಗಲು 7 ದಿನಗಳು, ಚಂದ್ರನ ಸುತ್ತಲು 13 ದಿನಗಳನ್ನು ತೆಗೆದುಕೊಂಡಿತು. ನಂತರ ಚಂದ್ರನ ಮೇಲೆ ಲ್ಯಾಂಡ್ ಆಗಿ ಲ್ಯಾಂಡರ್‌ನಿಂದ ಪ್ರತ್ಯೇಕಗೊಂಡು ಮುಂದೆ ಸಾಗಲು 5 ದಿನ ತೆಗೆದುಕೊಂಡಿತು.
ಚಂದ್ರಯಾನ-3 ವಿಶೇಷತೆ ಏನು?
2023ರ ಚಂದ್ರಯಾನ-3 ಗಗನನೌಕೆಯು ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್, ರೋವರ್ ಹೊತ್ತೊಯ್ಯಲಿದೆ. ಇದರ ಒಟ್ಟು ತೂಕ 3,926 ಕೆಜಿ ಇದೆ. ಪ್ರೊಪಲ್ಷನ್ ಮಾಡ್ಯೂಲ್ ತೂಕವು 2,148 ಕೆಜಿ, ಲ್ಯಾಂಡರ್ (ರೋವರ್ ಸಹಿತ) 1,752 ಕೆಜಿ, ರೋವರ್ 26 ಕೆಜಿ ತೂಕವಿದೆ. ಪ್ರೊಪಲ್ಷನ್ ಮಾಡ್ಯೂಲ್ 3 ರಿಂದ 6 ತಿಂಗಳ ಜೀವಿತಾವಧಿ ಹೊಂದಿದೆ. ಲ್ಯಾಂಡರ್, ರೋವರ್ ಜೀವಿತಾವಧಿ 1 ಚಂದ್ರನ ದಿನ ಇರಲಿದೆ (ಚಂದ್ರನ ಹಗಲಿನಲ್ಲಿ ಚಾರ್ಜ್ ಆಗಲಿದೆ). ಈ ನೌಕೆ ಚಂದ್ರನಲ್ಲಿ ತಲುಪಲು 42 ದಿನಗಳನ್ನು ತೆಗೆದುಕೊಳ್ಳಲಿದೆ. ಲ್ಯಾಂಡಿಂಗ್‌ಗಾಗಿ 69.36 ಡಿಗ್ರಿ ದಕ್ಷಿಣ, 32.34 ಡಿಗ್ರಿ ಪೂರ್ವ ಸ್ಥಳವನ್ನು ಗುರುತಿಸಲಾಗಿದೆ. ಇದು ಚಂದ್ರಯಾನ-2 ಗೆ ಗುರುತಿಸಿದ ಸ್ಥಳಕ್ಕಿಂತ ಸ್ವಲ್ಪ ದೂರದಲ್ಲಿದೆ. ಇದನ್ನೂ ಓದಿ: ಮಂಗಳೂರಿಗೆ ಬಂದ ಚಂದ್ರಯಾನಿ- ವಿಡಿಯೋ ವೈರಲ್
Web Stories