Latest

ರಾಜ್ಯದ ಜನರನ್ನ ಕಡೆಗಣಿಸಿ ಮಗನ ಅಭಿವೃದ್ಧಿ ಮಾಡ್ತಿದ್ದಾರೆ ನಾಯ್ಡು: ಪ್ರಧಾನಿ ಮೋದಿ ಕಿಡಿ

Published

on

Share this

– ಕಾಂಗ್ರೆಸ್ ಮುಕ್ತ ಎಂದಿದ್ದ ಎನ್‌ಟಿಆರ್‌ಗೆ ಚಂದ್ರಬಾಬು ನಾಯ್ಡು ಅವಮಾನ
– ಪ್ರಜೆಗಳಿಗೆ ಕಣ್ಣೀರು ತರಿಸುವುದರಲ್ಲಿಯೂ ಆಂಧ್ರ ಸಿಎಂ ಸಿನಿಯರ್

ಅಮರಾವತಿ: ಆಂಧ್ರಪ್ರದೇಶದ ಗುಂಟೂರುನಲ್ಲಿ ನಡೆದ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚಂದ್ರಬಾಬು ನಾಯ್ಡು ಹಾಗೂ ಅವರ ಕುಟುಂಬಸ್ಥರು ಆಂಧ್ರಪ್ರದೇಶದ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಸೂರ್ಯ ಉದಯಿಸುವ ಚಿಹ್ನೆಯನ್ನು ತೆಲಗು ದೇಶಂ ಪಾರ್ಟಿ (ಟಿಡಿಪಿ) ಹೊಂದಿದೆ. ಆದರೆ ಚಂದ್ರಬಾಬು ನಾಯ್ಡು ಅವರು ರಾಜ್ಯದಲ್ಲಿ ಅಭಿವೃದ್ಧಿಯ ಸೂರ್ಯನ ಉದಯವನ್ನು ಕಡೆಗಣಿಸಿ ತಮ್ಮ ಮಗನ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಕುಟುಕಿದರು.

ಆಂಧ್ರಪ್ರದೇಶಕ್ಕೆ ವಿಶೇಷ ಮೀಸಲಾತಿ ಬೇಡಿಕೆಯ ನೆಪ ಒಡ್ಡಿ ಎನ್‍ಡಿಎಗೆ ನೀಡಿದ್ದ ಬೆಂಬಲವನ್ನು ಚಂದ್ರಬಾಬು ನಾಯ್ಡು ಕಳೆದ ವರ್ಷ ಹಿಂಪಡೆದರು. ಆದರೆ ಈಗ ಕಾಂಗ್ರೆಸ್ ಜೊತೆಗೆ ಸೇರಿ ಮಹಾಘಟಬಂಧನ್‍ಗೆ ಸಿದ್ಧತೆ ನಡೆಸಿದ್ದಾರೆ. ರಾಜ್ಯದ ಜನರಿಗೆ ಮೂಲಸೌಕರ್ಯ ಒದಗಿಸಿಲ್ಲ. ಅಭಿವೃದ್ಧಿ ಮರೆತಿದ್ದಾರೆ. ಸುಳ್ಳ ಹೇಳುತ್ತಾ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ನಾನು ಸೀನಿಯರ್. ಪ್ರಧಾನಿ ಸ್ಥಾನದಲ್ಲಿ ಇರುವುದರಿಂದ ಅವರಿಗೆ ‘ಸರ್’ ಅಂತ ಕರೆಯುತ್ತೇನೆ ಎಂದು ಇತ್ತೀಚೆಗೆ ಚಂದ್ರಬಾಬು ನಾಯ್ಡು ವ್ಯಂಗ್ಯವಾಡಿದ್ದರು. ಇದಕ್ಕೆ ತಿರುಗೇಟು ನೀಡಿದ ಪ್ರಧಾನಿ ಮೋದಿ ಅವರು, ಅನೇಕ ವಿಚಾರದಲ್ಲಿ ಚಂದ್ರಬಾಬು ನಾಯ್ಡು ಸೀನಿಯರ್. ಕೆಲವು ಸಮಯದಲ್ಲಿ ಒಬ್ಬರನ್ನು ಹೊಗಳಿ ಮುಂದಿನ ಕ್ಷಣದಲ್ಲಿ ತಿರಸ್ಕಾರ ಮಾಡುವುದರಲ್ಲಿ ಸೀನಿಯರ್. ಪ್ರಜೆಗಳಿಗೆ ಕಣ್ಣೀರು ತರಿಸುವುದರಲ್ಲಿಯೂ ಅವರು ಸೀನಿಯರ್ ಎಂದು ವ್ಯಂಗ್ಯವಾಡಿದರು.

ಟಿಡಿಪಿ ಸಂಸ್ಥಾಪಕ ಎನ್.ಟಿ.ರಾಮರಾವ್ ಅವರು ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡಬೇಕು ಅಂತ ನಿರ್ಧರಿಸಿದ್ದರು. ಆದರೆ ಅಳಿಯ ಚಂದ್ರಬಾಬು ನಾಯ್ಡು ಈಗ ಕಾಂಗ್ರೆಸ್ ಜೊತೆಗೆ ಮಹಾಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಇದು ಎನ್.ಟಿ.ರಾಮರಾವ್ ಅವರಿಗೆ ಮಾಡಿದ ಅವಮಾನವಾಗಿ ಎಂದು ಪ್ರಧಾನಿ ಮೋದಿ ಕಿಡಿಕಾರಿದರು.

ಗುಂಟೂರು ಅನೇಕ ಸ್ವಾತಂತ್ರ್ಯ ಹೋರಾಟಗಾರರ್ನು ದೇಶಕ್ಕೆ ಕೊಡುಗೆ ನೀಡಿದೆ. ಇಷ್ಟು ಜನರು ಇಲ್ಲಿ ಸೇರಿದ್ದಿರಿ. ನಿಮ್ಮ ಬಲ ಕೆಲಸ ಮಾಡಲು ಪ್ರೋತ್ಸಾಹ ನೀಡುತ್ತದೆ. ಈ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವ ಜನತೆಗೆ ಧನ್ಯವಾದಗಳು. ವಿಶಾಖಪಟ್ಟಣದಲ್ಲಿ ಇಂದು ಬೃಹತ್ ಪ್ರಮಾಣದ ಇಂಧನ ಶುದ್ಧಿಕರಣ ಘಟಕ ಉದ್ಘಾಟನೆಯಾಗಿದೆ. ಇದರಂತೆ ಅನೇಕ ಯೋಜನೆಗಳು ಆಂಧ್ರಪ್ರದೇಶಕ್ಕೆ ಸಿಗಲಿದ್ದು, ಉದ್ಯೋಗ ಸಂಖ್ಯೆ ಹೆಚ್ಚಲಿದೆ. ದೇಶದಲ್ಲಿ ಅಭಿವೃದ್ಧಿ ಪಥದಲ್ಲಿ ನಡೆಯುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶಕ್ಕೆ ಬರುವುದನ್ನು ವಿರೋಧಿಸಿ ಬ್ಲ್ಯಾಕ್ ಬಲೂನ್‍ಗಳನ್ನು ಹಾರಿ ಬಿಡುವ ಮೂಲಕ ಟಿಡಿಪಿ ಕಾರ್ಯಕರ್ತರು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದವು. ಜೊತೆಗೆ ರಾಜ್ಯಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸದೇ ಚಂದ್ರಬಾಬು ನಾಯ್ಡು ಅಸಮಾಧಾನ ಹೊರಹಾಕಿದರು. ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ರಾಜ್ಯಪಾಲ ಇಎಸ್‍ಎಲ್ ನರಸಿಂಹನ್ ವಿಜಯವಾಡ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಅವರನ್ನು ಸ್ವಾಗತಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *

Advertisement
Advertisement