ಶುಕ್ರವಾರ ಚಂದ್ರಗ್ರಹಣ : ಯಾವ ರಾಶಿಯವರಿಗೆ ಏನಾಗುತ್ತೆ? ಇಲ್ಲಿದೆ ವಿವರ

Public TV
4 Min Read
chanadra grahana 1 3

– ಗ್ರಹಣ ದಿನ ಏನ್ಮಾಡ್ಬೇಕು ಎಂದು ವಿವರಿಸಿದ್ದಾರೆ ಜ್ಯೋತಿಷಿಗಳು

– ನಂಬಿಕೆಯಿಲ್ಲದವರು ಆಕಾಶದ ವಿಸ್ಮಯ ನೋಡಿ ಎಂಜಾಯ್ ಮಾಡಿ

ಬೆಂಗಳೂರು: ಬಾನಂಗಳದ ಚಂದಿರ ಹುಣ್ಣಿಮೆಯ ದಿನವೂ ಮಂಕಾಗಲಿದ್ದಾನೆ. ಬಾಹ್ಯಕಾಶದಲ್ಲಿ ನಡೆಯುವ ವಿಸ್ಮಯ ಮನುಕುಲದ ಮೇಲೆ ಬೀರುವ ಪ್ರಭಾವ ಅಷ್ಟೇ ರೌದ್ರವಂತೆ. ಜುಲೈ 27 ರ ಹುಣ್ಣಿಮೆಯ ರಾತ್ರಿ 11.54 ರಿಂದ 3.40 ರವೆಗೆ ಸಂಭವಿಸುವ ಈ ಶತಮಾನದ ಸುದೀರ್ಘ ಚಂದ್ರಗ್ರಹಣ ಯಾವ ರಾಶಿಗಳಿಗೆ ಕೆಡುಕನ್ನುಂಟು ಮಾಡಲಿದೆ, ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ. ಗ್ರಹಣ ದೋಷದಿಂದ ತಪ್ಪಿಸಿಕೊಳ್ಳುವ ಮಾರ್ಗ ಹೇಗೆ..? ಜ್ಯೋತಿಷಿಗಳು ಏನ್ ಹೇಳ್ತಾರೆ ಹುಣ್ಣಿಮೆ ಚಂದಿರನ ರಾಶಿಗಳ ಜೊತೆಗಿನ ಆಟ ಹೇಗಿರುತ್ತದೆ ಎನ್ನುವುದನ್ನು ಖ್ಯಾತ ಜ್ಯೋತಿಷಿಗಳು ವಿವರಿಸಿದ್ದಾರೆ.

 

ಹುಣ್ಣಿಮೆ ಚಂದಿರನ ವಕ್ರದೃಷ್ಟಿ ಯಾವ ರಾಶಿಯ ಮೇಲೆ ಬೀರಲಿದೆ?: ವಿಳಂಬಿ ನಾಮ ಸಂವತ್ಸರದ ಆಷಾಢ ಶುಕ್ಲ ಹುಣ್ಣಿಮೆಯಂದು ಉತ್ತರಾಷಾಢ ಮತ್ತು ಶ್ರವಣ ನಕ್ಷತ್ರಗಳಲ್ಲಿ ಮಕರ ರಾಶಿ, ಮೇಷ, ವೃಷಭ ಮತ್ತು ಮಿಥುನ ಲಗ್ನದಲ್ಲಿ ಈ ಚಂದ್ರಗ್ರಹಣ ಸಂಭವಿಸಲಿದೆ. ಇದು ನಾಲ್ಕು ರಾಶಿಗಳ ಮೇಲೆ ತೀರಾ ಕೆಡುಕು, ನಾಲ್ಕು ರಾಶಿಗಳಿಗೆ ಮಿಶ್ರ ಫಲ ಹಾಗೂ ನಾಲ್ಕು ರಾಶಿಗಳಿಗೆ ಕೊಂಚ ಶುಭದಾಯಕವಾಗಿದೆ. ಆದ್ರೇ ಇದು ಭೂಮಂಡಲವನ್ನೇ ಅಲುಗಾಡಿಸುವಂತೆ ಮಾಡುವ ಚಂದಿರನ ಹೊಳಪನ್ನು ಮರೆಮಾಚುವ ಈ ಶತಮಾನದ ಸುದೀರ್ಘ ಚಂದ್ರಗ್ರಹಣವಾಗಿದ್ದು ಬಹುತೇಕ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

chanadra grahana 1 2

ಚಂದ್ರಗ್ರಹಣ ಯಾವ ರಾಶಿಗಳ ಮೇಲೆ ಏನು ಪ್ರಭಾವ?: ಈ ಚಂದ್ರಗ್ರಹಣ ನಕ್ಷತ್ರ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದು, ಯಾವ ರಾಶಿಯವರಿಗೆ ಚಂದ್ರನ ಪ್ರಭಾವ ಇರುತ್ತೋ ಅವ್ರಿಗೆ ಕೆಡುಕು, ಚಿಂತೆ, ಅನಾರೋಗ್ಯ, ಮಾನಹಾನಿ ಸೇರಿದಂತೆ ನಾನಾ ಕಂಟಕ ತಲೆದೋರಲಿದೆ ಅಂತಾ ಖ್ಯಾತ ಜ್ಯೋತಿಷಿಗಳಾದ ಸೋಮಸುಂದರ ದೀಕ್ಷಿತ್ ಹೇಳಿದ್ದಾರೆ. ಮುಖ್ಯವಾಗಿ ಉತ್ತರಾಷಾಢ, ಕೃತಿಕಾ, ಉತ್ತರ, ಶ್ರವಣ, ರೋಹಿಣಿ, ಹಸ್ತ ನಕ್ಷತ್ರದವರಿಗೆ ತೀವ್ರ ತೊಂದರೆ ಕಾಡಲಿದ್ದು, ರಾಶಿ ಪ್ರಕಾರ ಮಕರ, ಧನಸ್ಸು, ವೃಷಭ, ಸಿಂಹ ರಾಶಿಯವರಿಗೆ ದೋಷದ ಫಲ ಹೆಚ್ಚಾಗಿ ಆಗುತ್ತದೆ. ಕೆಲವು ರಾಶಿಗೆ ಕೆಡುಕು ಮಾಡುವ ಈ ಚಂದ್ರಗ್ರಹಣ ವೃಶ್ಚಿಕ, ಮೀನ, ತುಲಾ ರಾಶಿಯವರಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ ಎನ್ನುವುದು ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರವಾದ್ರೂ ದ್ವಾದಶ ರಾಶಿಗಳಿಗೂ ಕಂಟಕ ಎದುರಾಗೋದ್ರಿಂದ ಎಲ್ಲರಿಗೂ ಗ್ರಹಣ ದೋಷ ಎದುರಾಗಲಿದೆ ಎಂದು ಅವರು ಹೇಳಿದ್ದಾರೆ.

chanadra grahana 1 5

 

ಆನ್ ಲೈನ್ ಬುಕ್ಕಿಂಗ್ ಶುರು!: ಚಂದ್ರಗ್ರಹಣದ ನೆರಳು ಬೀಳುವ ಸೂಚನೆ ಸಿಕ್ಕಾಗ ಮನುಷ್ಯ ಜೀವ ತಲ್ಲಣಿಸುತ್ತೆ. ಈ ಗ್ರಹಣ ದೋಷದಿಂದ ಪಾರಾಗುವ ಬಗೆ ಹೇಗೆ? ಬದುಕಿನ ಗಂಡಾಂತರ ನಿವಾರಣೆಯಾಗಲು ಏನು ಮಾಡಬೇಕು ಅನ್ನೋದು ಪ್ರತಿಯೊಬ್ಬರ ಪ್ರಶ್ನೆ. ಖಂಡಿತಾ ಇದಕ್ಕೆಲ್ಲ ಮಾರ್ಗೋಪಾಯಗಳಿವೆ. ಗ್ರಹಣ ದೋಷ ನಿವಾರಣೆಗಾಗಿ ಆಯಾಯ ರಾಶಿ ನಕ್ಷತ್ರಗಳ ದೋಷ ನಿವಾರಣೆಗಾಗಿ ದೇಗುಲಗಳಲ್ಲಿ ಪೂಜೆ ಪುನಸ್ಕಾರಕ್ಕೆ ಸಿದ್ಧತೆಗಳು ಈಗಾಗಲೇ ನಡೆಯುತ್ತಿದೆ. ಈಗಾಗಲೇ ಬಹುತೇಕ ದೇಗುಲಗಳ ಮುಂದೆ ಗ್ರಹಣ ದೋಷ ನಿವಾರಣಾ ಪೂಜೆಯ ವಿವರದ ಬ್ಯಾನರ್ ಬಿದ್ದಾಗಿದೆ. ಅಷ್ಟೇ ಯಾಕೆ ಕೆಲ ದೇಗುಲದಲ್ಲಿ ಗ್ರಹಣ ದೋಷ ಪೂಜೆ ನಿವಾರಣೆಗಾಗಿ ಅನ್ ಲೈನ್ ಬುಕ್ಕಿಂಗ್ ಗೆ ಜನ ಮುಗಿಬೀಳುತ್ತಿದ್ದಾರೆ ಎಂದು ಉಮಾಮಹೇಶ್ವರಿ ದೇವಸ್ಥಾನದ ಸೂರ್ಯಪ್ರಕಾಶ ಗುರೂಜಿ ಹೇಳಿದ್ದಾರೆ.

ವಿಚಿತ್ರ ಅಂದ್ರೆ ಮನುಕುಲಕ್ಕೆ ಮಾತ್ರವಲ್ಲ, ದೇಗುಲದ ಗರ್ಭಗುಡಿಯೊಳಗೂ ದೇವರಿಗೆ ಗ್ರಹಣದ ಸಂದರ್ಭದಲ್ಲಿ ಬಂಧನ ಭೀತಿ. ದರ್ಭೆಯಲ್ಲಿ ದೇವರನ್ನು ಬಂಧಿಸಿಡಲಾಗುತ್ತೆ. ಆದರೆ ಜನರ ವಿಪರೀತ ಭಯದಿಂದಾಗಿ ಕೆಲ ದೇಗುಲದಲ್ಲಿ ಜುಲೈ 27ರಲ್ಲಿ ಮಿಡ್ ನೈಟ್ ಪೂಜೆ ಪ್ರಾರ್ಥನೆಗಳು ಯಾಗ ಹೋಮಗಳು ಕೂಡ ನಡೆಯಲಿದೆ.

chanadra grahana 1 4

ಗ್ರಹಣ ದೋಷ ನಿವಾರಣೆ ಹೇಗೆ?: ಗ್ರಹಣ ದೋಷ ನಿವಾರಣೆಗಾಗಿ ಜುಲೈ 28ರ ಬೆಳಗಿನ ಜಾವ ಎಲ್ಲಾ ದೇಗುಲದಲ್ಲೂ ಹೋಮ ಹವನ ನಡೆಯಲಿದೆ. ದೇವರ ಜಪ ಪೂಜೆಯ ಜೊತೆಗೆ ಚಂದ್ರಗ್ರಹ ಶಾಂತಿಗೆ, ಅಕ್ಕಿ, ಬಿಳಿವಸ್ತ್ರ, ಹಾಲು ದಾನ, ಉಪ್ಪು ಹಾಕದ ಮೊಸರನ್ನ ದಾನ, ಶ್ರೀ ದುರ್ಗಾಸ್ತುತಿ ಹಾಗೂ ಕೇತುಗ್ರಹ ಶಾಂತಿಗೆ ಹುರುಳಿಕಾಳು, ಚಿತ್ರವಸ್ತ್ರ, ಶ್ರೀ ಗಣೇಶನಿಗೆ ಕೆಂಪು ಕಣಿಗಲೆ ಹೂವು ಸಮರ್ಪಣೆ, ಮೃತ್ಯುಂಜಯ ಜಪ ಮಾಡಬೇಕು ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ.

ಗ್ರಹಣದ ದಿನ ಊಟ, ತಿಂಡಿ ಹೇಗೆ?: ಗ್ರಹಣದ ದಿನ ಮಧ್ಯಾಹ್ನ 2.30ರ ತನಕ ಭೋಜನ ಮಾಡಬಹುದು. ಅನಾರೋಗ್ಯ ಇರುವವರು ರಾತ್ರಿ 7.30ರೊಳಗೆ ಭೋಜನ ಮುಗಿಸುವುದು ಒಳ್ಳೆಯದು ಅನ್ನುವ ಸಲಹೆಯನ್ನು ನೀಡಿದ್ದಾರೆ. ಗ್ರಹಣದ ಸಂದರ್ಭದಲ್ಲಿ ಭೋಜನ ನಿಷಿದ್ಧ. ಗ್ರಹಣದ ಬಳಿಕ ತಣ್ಣೀರ ಸ್ನಾನವನ್ನು ಮಾಡಿ ಶಿವನ ದರ್ಶನ ಪಡೆದರೆ ಗ್ರಹಣ ದೋಷ ನಿವಾರಣೆಯಾಗಲಿದೆ ಎಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ. ಇನ್ನು ಮನುಷ್ಯರಿಗೆ ಮಾತ್ರವಲ್ಲ ದೇಗುಲದಲ್ಲೂ ಗ್ರಹಣ ದೋಷ ನಿವಾರಣೆಗಾಗಿ ದೇವರಿಗೆ ದರ್ಭೆಯ ಪೂಜೆಯ ಬಳಿಕ ಸಂಪ್ರೋಕ್ಷಣಾ ವಿಧಿ ವಿಧಾನ ನಡೆಯಲಿದ್ದು, ಕ್ಷುದ್ರಗೊಂಡ ದೇವರನ್ನು ತಣಿಸಲು ಎಳನೀರಿನ ಅಭಿಷೇಕ, ಕ್ಷೀರಾಭಿಷೇಕಗಳು ನಡೆಯಲಿದೆ. ಇಡೀ ದೇಗುಲದ ಪ್ರಾಂಗಣ, ಗರ್ಭಗುಡಿಯನ್ನು ಶುದ್ಧೀಕರಿಸಲಾಗುತ್ತೆ. ಹೀಗೆ ಗ್ರಹಣದ ದೋಷ ನಿವಾರಣೆಗೆ ನಾನಾ ಮಾರ್ಗಗಳು ಇವೆ.

ನಂಬಿಕೆಯಿಲ್ಲದವರು ಹೀಗೆ ಮಾಡಿ!: ನಮಗೆ ಗ್ರಹಣದ ಬಗ್ಗೆ ನಂಬಿಕೆಯಿಲ್ಲ. ಇವೆಲ್ಲವನ್ನೂ ನಂಬಲು ನಾವು ಸಿದ್ಧವಿಲ್ಲ ಎನ್ನುವವರೂ ಇದ್ದಾರೆ. ಅಂಥವರು ಆಕಾಶದಲ್ಲಿ ನಡೆಯುವ ವಿಸ್ಮಯಕ್ಕೆ ಸಾಕ್ಷಿಯಾಗಲು ವಿಪರೀತ ಭಯವೂ ಬೇಕಾಗಿಲ್ಲ. ಎಲ್ಲವೂ ಅವರವರ ನಂಬಿಕೆಗೆ ಬಿಟ್ಟ ವಿಚಾರ. ನಭದ ಕೌತುಕ ಕಣ್ತುಂಬಿಸಿಕೊಳ್ಳುವ ಉತ್ಸಾಹವಿದ್ದರೆ ದಿಗಂತದತ್ತ ದೃಷ್ಟಿ ಹಾಯಿಸಿ. ದೋಷ, ಸಮಸ್ಯೆ, ಕಂಟಕ ಎಲ್ಲವನ್ನೂ ಮರೆತು ಬಾನಂಗಳದ ಚಂದಮಾಮನ ಇನ್ನೊಂದು ಅವತಾರವನ್ನು ನೋಡಿ ಎಂಜಾಯ್ ಮಾಡಿ.

 

chanadra grahana 1 1

Share This Article
1 Comment

Leave a Reply

Your email address will not be published. Required fields are marked *