ಚಂಡೀಗಢ: ಕಾಲೇಜಿನಿಂದ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ 17 ವರ್ಷದ ವಿದ್ಯಾರ್ಥಿನಿಯನ್ನು `ಹೇ ಸೆಕ್ಸಿ’ ಅಂತ ಕರೆದ ವ್ಯಕ್ತಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಪ್ರಕರಣ ಸಂಬಂಧಿಸಿದಂತೆ ಆರೋಪಿ 23 ವರ್ಷದ ಪಂಕಜ್ ಸಿಂಗ್ ಗೆ ಇದೀಗ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶೆ ಪೂನಮ್ ಆರ್ ಜೋಶಿ ಅವರು 21 ಸಾವಿರ ದಂಡ ಹಾಗೂ 2 ವರ್ಷ ಜೈಲು ವಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಏನಿದು ಘಟನೆ?: ಇಲ್ಲಿ ಡೇರಿಯಾ ಪ್ರದೇಶದ 23 ವರ್ಷದ ಪಂಕಜ್ ಸಿಂಗ್ ಎಂಬಾತ ಕಳೆದ 2017ರ ಸೆಪ್ಟೆಂಬರ್ ತಿಂಗಳಲ್ಲಿ ವಿದ್ಯಾರ್ಥಿನಿಯನ್ನು `ಹೇ ಸೆಕ್ಸಿ’ ಅಂತ ಕರೆಯುವ ಮೂಲಕ ಕಿರುಕುಳ ನೀಡಿದ್ದನು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ವಿದ್ಯಾರ್ಥಿನಿ ಕೆನ್ನೆಗೆ ಪಂಕಜ್ ಕಪಾಳಮೋಕ್ಷ ಮಾಡಿದ್ದನು. ಕೂಡಲೇ ವಿದ್ಯಾರ್ಥಿನಿ ಆಕೆಯ ಸಹೋದರನನ್ನು ಸ್ಥಳಕ್ಕೆ ಕರೆದಿದ್ದಾರೆ. ಈ ವೇಳೆ ಆಕೆಯ ಸಹೋದರನಿಗೂ ಪಂಕಜ್ ಹೊಡೆದಿದ್ದಾನೆ ಎಂದು ವರದಿಯಾಗಿದೆ.
ಈ ವೇಳೆ ಮೂವರ ಗಲಾಟೆ ತಾರಕಕ್ಕೇರಿದೆ. ಕೂಡಲೇ ಮಾಹಿತಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ, ಪಂಕಜ್ ವಿರುದ್ಧ ಐಪಿಸಿ ಸೆಕ್ಷನ್ 354(ಕ್ರಿಮಿನಲ್), 323(ಮಾನ ಹಾನಿ) 294(ಅಶ್ಲೀಲ ಪದ ಬಳಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅಲ್ಲದೇ ಆರೋಪಿ ವಿರುದ್ಧ ಪೋಸ್ಕೋ ಕಾಯ್ದೆಯಡಿ ಕೂಡ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು.