ಲಾಹೋರ್: ಪಾಕಿಸ್ತಾನದ ಗಡಾಫಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ 4ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 5 ವಿಕೆಟ್‌ಗಳ ಭರ್ಜರಿ ಜಯಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 351 ರನ್ ಗಳಿಸಿತ್ತು. ಈ ಮೂಲಕ ಆಸ್ಟ್ರೇಲಿಯಾ ತಂಡದ ಗೆಲುವಿಗೆ 352 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 47.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 356 ರನ್‌ಗಳನ್ನು ಕಲೆ ಹಾಕಿ ಜಯಗಳಿಸಿತು. ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಗಳಿಸಿದ್ದ ಇಂಗ್ಲೆಂಡ್ ದಾಖಲೆಯನ್ನು ಆಸ್ಟ್ರೇಲಿಯಾ ಪುಡಿಗಟ್ಟಿತು.
Advertisement
Advertisement
ಆಸ್ಟ್ರೇಲಿಯಾ ಪರ ಜೋಶ್ ಇಂಗ್ಲಿಸ್ 86 ಎಸೆತಗಳಲ್ಲಿ 6 ಸಿಕ್ಸರ್ 8 ಬೌಂಡರಿಗಳ ನೆರವಿನಿಂದ 120 ರನ್ ಕಲೆ ಹಾಕಿ, ಅಜೇಯರಾಗಿ ಉಳಿದರು. ಉಳಿದಂತೆ ಅಲೆಕ್ಸ್ ಕ್ಯಾರಿ 63 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ 69 ರನ್, ಮ್ಯಾಥ್ಯೂ ಶಾರ್ಟ್ 66 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 63 ರನ್, ಮಾರ್ನಸ್ ಲಾಬುಶೇನ್ 45 ಎಸೆತಗಳಲ್ಲಿ 47 ರನ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ 15 ಎಸೆತಗಳಲ್ಲಿ 32 ರನ್ ಕಲೆಹಾಕಿ ತಂಡದ ಗೆಲುವಿಗೆ ಶ್ರಮಿಸಿದರು.
Advertisement
Advertisement
ಇಂಗ್ಲೆಂಡ್ ಪರ ಮಾರ್ಕ್ ವುಡ್, ಜೋಫ್ರಾ ಆರ್ಚರ್, ಬ್ರೈಡನ್ ಕಾರ್ಸೆ, ಆದಿಲ್ ರಶೀದ್, ಲಿಯಾಮ್ ಲಿವಿಂಗ್‌ಸ್ಟೋನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಇಂಗ್ಲೆಂಡ್ 5.2 ಓವರ್‌ಗಳಲ್ಲೇ 43 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್ವುಡ್ ಅವರಂತಹ ದೈತ್ಯ ಬೌಲರ್‌ಗಳಿಲ್ಲದೇ ಅನೇಕ ಹೊಸಬರೊಂದಿಗೆ ಕಣಕ್ಕಿಳಿದ ಆಸೀಸ್ ಸ್ಪರ್ಧಾತ್ಮಕ ಪೈಪೋಟಿ ನೀಡುವ ನಿರೀಕ್ಷೆ ಹೆಚ್ಚಿಸಿತ್ತು. ಆದ್ರೆ 3ನೇ ವಿಕೆಟ್‌ಗೆ ಜೊತೆಯಾದ ಬೆನ್ ಡಕೆಟ್ ಹಾಗೂ ಜೋ ರೂಟ್ ಶತಕದ ಜೊಯಾಟ ನೀಡುವ ಮೂಲಕ ಇಂಗ್ಲೆಂಡ್‌ಗೆ ಜೀವ ತುಂಬಿದರು.
ಡಕೆಟ್, ರೂಟ್ ಶತಕದ ಜೊತೆಯಾಟ:
ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ 155 ಎಸೆತಗಳಲ್ಲಿ 158 ರನ್‌ಗಳ ಜೊತೆಯಾಟ ನೀಡಿತು. ರೂಟ್ 78 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 68 ರನ್ ಗಳಿಸಿ ಔಟಾದರು. ಆ ಬಳಿಕವೂ ಘಾತುಕ ದಾಳಿ ನಡೆಸಿದ ಬೆನ್ ಡಕೆಟ್ ಆಸೀಸ್ ಬೌಲರ್‌ಗಳನ್ನು ಚೆನ್ನಾಗಿ ಬೆಂಡೆತ್ತಿದರು. ಕೊನೆಯವರೆಗೂ ಹೋರಾಡಿದ ಡಕೆಟ್ 143 ಎಸೆತಗಳಲ್ಲಿ 165 ರನ್ (17 ಬೌಂಡರಿ, 3 ಸಿಕ್ಸರ್) ಗಳಿಸಿ ಔಟಾದರು. ಇದರೊಂದಿಗೆ ನಾಯಕ ಜೋಸ್ ಬಟ್ಲರ್ 23 ರನ್, ಜೋಫ್ರಾ ಆರ್ಚರ್ 21 ರನ್, ಲಿಯಾಮ್ ಲಿವಿಂಗ್‌ಸ್ಟನ್14 ರನ್, ಜೇಮಿ ಸ್ಮಿತ್ 15 ರನ್, ಫಿಲ್ ಸಾಲ್ಟ್ 10 ರನ್‌ಗಳ ಕೊಡುಗೆ ನೀಡಿದರು.
ಇನ್ನೂ ಆಸ್ಟ್ರೇಲಿಯಾ ಪರ ಬೆನ್ ದ್ವಾರ್ಶುಯಿಸ್ 3 ವಿಕೆಟ್ ಕಿತ್ತರೆ, ಮಾರ್ನಸ್ ಲಾಬುಶೇನ್, ಆಡಂ ಝಂಪಾ ತಲಾ 2 ವಿಕೆಟ್, ಗ್ಲೆನ್ ಮ್ಯಾಕ್ಸ್‌ವೆಲ್ 1 ವಿಕೆಟ್ ಪಡೆದರು.