ಬೆಂಗಳೂರು: ಈದ್ಗಾ ಮೈದಾನ ವಿವಾದ ವಿಚಾರವಾಗಿ ಸಾಲು ಸಾಲು ಸಂಘಟನೆಗಳಿಂದ ಇಂದು ಅರ್ಜಿ ಹಾಕಲು ಸಿದ್ಧತೆ ಮಾಡಿಕೊಂಡಿದೆ. ಇದರಿಂದಾಗಿ ಚಾಮರಾಜಪೇಟೆ ಪೊಲೀಸರು ಇಕ್ಕಟ್ಟಿಗೆ ಸಿಲುಕಿದಂತೆ ಆಗಿದೆ.
ಈಗಾಗಲೇ ಈದ್ಗಾ ಮೈದಾನ ಬಿಬಿಎಂಪಿಯ ಆಟದ ಮೈದಾನವಾಗಿದೆ. ಆದರೆ ಇಲ್ಲಿ ಸಾರ್ವಜನಿಕ ಚಟುವಟಿಕೆಗೆ ನಿಷೇಧ ಹೇರಿ, ಒಂದು ಸಮೂದಾಯಕ್ಕೆ ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ ಎಂದು ಕೆಲ ಹಿಂದೂಪರ ಸಂಘಟನೆಗಳು ಧ್ವನಿ ಎತ್ತಿದ್ದವು.
ಈ ವಿಚಾರ ದೊಡ್ಡದಾಗುತ್ತಿದ್ದಂತೆ ಸೋಮವಾರ ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಕುಮಾರ್, ಚಾಮರಾಜಪೇಟೆ ಈದ್ಗಾ ಮೈದಾನವು ಆಟದ ಮೈದಾನವಾಗಿದ್ದು, ಬಿಬಿಎಂಪಿ ಆಸ್ತಿ ಆಗಿದೆ. ಕೋರ್ಟ್ ನಿರ್ದೇಶನದ ಪ್ರಕಾರ ವರ್ಷದಲ್ಲಿ 2 ಬಾರಿ ಪ್ರಾರ್ಥನೆಗೆ ಅವಕಾಶ ಕೊಡಲಾಗುತ್ತಿದೆ. ಕೋರ್ಟ್ ನೀಡಿರುವ 2 ಅವಧಿ ಬಿಟ್ಟು ಅವಕಾಶ ಕೇಳಿದ್ದರೆ ಬೇರೆ ಚಟುವಟಿಕೆಗೆ ಅವಕಾಶ ಕೊಡಲಾಗುತ್ತದೆ. ಆದರೆ ಕೋಮು ಸೌಹರ್ದತೆ ಹಾಳಾಗುವ ವಿಚಾರ ಹಾಗೂ ಕಾನೂನು ವಿಚಾರ ತೊಂದರೆ ಆದರೆ ಕೂಡಲೇ ಪೊಲೀಸ್ ಮೊರೆ ಹೋಗುತ್ತೇವೆ ಎಂದು ಸ್ಪಷ್ಟನೆ ನೀಡಿದ್ದರು.
ಬಿಬಿಎಂಪಿಯಿಂದ ಈ ಹೇಳಿಕೆ ಬರುತ್ತಿದ್ದಂತೆ ಧಾರ್ಮಿಕ, ರಾಷ್ಟ್ರೀಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಹಲವು ಹಿಂದೂ ಸಂಘಟನೆಗಳು ಹಾಗೂ ಕನ್ನಡ ಪರ ಸಂಘಟನೆಗಳು ಅರ್ಜಿ ಸಲ್ಲಿಸಲಿದೆ.
ಇಕ್ಕಟ್ಟಿನಲ್ಲಿ ಪೊಲೀಸರು: ಬಿಬಿಎಂಪಿಯಿಂದ ಅನುಮತಿ ಕೊಟ್ಟರೆ, ಪೊಲೀಸ್ ಠಾಣೆಯಿಂದ ಅನುಮತಿ ಕೊಡುವುದಾ ಬೇಡ್ವಾ ಎಂಬುದರ ಬಗ್ಗೆ ಗೊಂದಲ ಇದೀಗ ಉಂಟಾಗಿದ್ದು, ಇದರಿಂದಾಗಿ ಚಾಮರಾಜಪೇಟೆ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಬಗ್ಗೆ ಅಲ್ಲಿನ ಪೊಲೀಸರು ವಲಯದ ಡಿಸಿಪಿ ಹಾಗೂ ಪೊಲೀಸ್ ಕಮಿಷನರ್ ಜೊತೆ ಚರ್ಚೆ ಮಾಡಲಿದ್ದಾರೆ.
ವಿವಾದದ ಬೆನ್ನಲ್ಲೇ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯಾಗಿ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೈದಾನದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ಮೈದಾನದ ಸುತ್ತಮುತ್ತ ಪೊಲೀಸ್ ವಾಹನಗಳನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಈದ್ಗಾ ಮೈದಾನ ಆಟದ ಮೈದಾನ, ಬಿಬಿಎಂಪಿ ಆಸ್ತಿ: ಹರೀಶ್ ಕುಮಾರ್
ಈಗಾಗಲೇ ಈದ್ಗಾ ಮೈದಾನದಲ್ಲಿ ಹಿಂದೂ ಧಾರ್ಮಿಕ ಆಚರಣೆಗಳಿಗೆ ಅವಕಾಶ ಕೊಡದಿದ್ದರೆ, ಈದ್ಗಾ ಮೈದಾನವನ್ನು ನೆಲಸಮ ಮಾಡುತ್ತೇವೆ ಎಂದು ವಿಶ್ವ ಸನಾತನ ಪರಿಷತ್ ಸಂಘದ ಅಧ್ಯಕ್ಷ ಎಸ್. ಭಾಸ್ಕರನ್ ಎಚ್ಚರಿಸಿದ್ದರು. ಕೋರ್ಟ್ ಆದೇಶವಿದ್ದರೂ ಧಾರ್ಮಿಕ ಆಚರಣೆಗೆ ಪೊಲೀಸರು ಅವಕಾಶ ಕೊಡುತ್ತಿಲ್ಲ. ಮುಸ್ಲಿಂ ಸಮುದಾಯದವರು ಹಿಂದೂಗಳ ಧಾರ್ಮಿಕ ಆಚರಣೆಗೆ ವಿರೋಧಿಸುತ್ತಿಲ್ಲ. ಆದರೆ, ಕ್ಷೇತ್ರದ ಶಾಸಕರು ಪೊಲೀಸರ ಮೂಲಕ ಅಡ್ಡಿ ಪಡಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಜಮೀರ್ ವಿರುದ್ಧ ಕಿಡಿಕಾರಿದ್ದರು. ಇದನ್ನೂ ಓದಿ: ಮಸೀದಿ ಆಯ್ತು ಈಗ ಈದ್ಗಾ ಮೈದಾನ – ಏನಿದು ವಿವಾದ? ಹಿಂದೂಗಳ ವಾದವೇನು? ಬಿಬಿಎಂಪಿ ದಾಖಲೆಯಲ್ಲಿ ಏನಿದೆ?
ಜೊತೆಗೆ ಕೋರ್ಟ್‍ನಿಂದ ಆದೇಶ ಬಂದರೂ, ಈ ಜಾಗದಲ್ಲಿ ರಾಷ್ಟ್ರಧ್ವಜವನ್ನಾಗಲಿ, ನಾಡಧ್ವಜವನ್ನಾಗಿ ಹಾರಿಸಲು ಪೆÇಲೀಸರು ಬಿಟ್ಟಿಲ್ಲ. ಮುಸ್ಲಿಂ ಸಮುದಾಯಕ್ಕೆ ಹಾಗೂ ಈ ಮೈದಾನಕ್ಕೆ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಲಯ ಹೇಳಿದರೂ, ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಪಾಲಿಕೆಯ ಕಂದಾಯ ಅಧಿಕಾರಿಗಳನ್ನು ಹೆದರಿಸಿ, ಈದ್ಗಾ ಮೈದಾನವನ್ನು ಖಾತೆ ಮಾಡಿಸಿದ್ದಾರೆ ಅಂತ ಹಿಂದೂ ಸಂಘಟನೆಯ ಕೆಲವರು ಆರೋಪಿಸಿದ್ದರು.