Bengaluru CityDistrictsKarnatakaLatestLeading NewsMain Post

ಮಸೀದಿ ಆಯ್ತು ಈಗ ಈದ್ಗಾ ಮೈದಾನ – ಏನಿದು ವಿವಾದ? ಹಿಂದೂಗಳ ವಾದವೇನು? ಬಿಬಿಎಂಪಿ ದಾಖಲೆಯಲ್ಲಿ ಏನಿದೆ?

ಬೆಂಗಳೂರು: ರಾಜ್ಯದಲ್ಲಿ ಮಸೀದಿ, ದರ್ಗಾ-ದೇಗುಲ ದಂಗಲ್ ಬಳಿಕ ಮೈದಾನದ ಸರದಿ ಪ್ರಾರಂಭವಾಗಿದೆ. ಇದೀಗ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನ ಮತ್ತೆ ವಿವಾದದ ಕೇಂದ್ರ ಬಿಂದುವಾಗಿದೆ.

ಚಾಮರಾಜಪೇಟೆಯ ಆಟದ ಮೈದಾನವನ್ನೇ ಆಗಿನಿಂದ ಈದ್ಗಾ ಮೈದಾನ ಎಂದು ಕರೆಯುತ್ತಾರೆ. 1952ರಿಂದ ಈ ಮೈದಾನದ ವಿಚಾರವಾಗಿ ವಿವಾದ ಪ್ರಾರಂಭವಾಗಿದ್ದು, ಇದೀಗ ಮತ್ತೇ ಮುನ್ನೆಲೆಗೆ ಬಂದಿದೆ. ಹಿಂದೂ ಧಾರ್ಮಿಕ ಆಚರಣೆಗಳಿಗೆ ಅವಕಾಶ ಕೊಡದಿದ್ದರೆ, ಈದ್ಗಾ ಮೈದಾನವನ್ನು ನೆಲಸಮ ಮಾಡುತ್ತೇವೆ ಎಂದು ವಿಶ್ವ ಸನಾತನ ಪರಿಷತ್ ಸಂಘದ ಅಧ್ಯಕ್ಷ ಎಸ್. ಭಾಸ್ಕರನ್ ಎಚ್ಚರಿಸಿದ್ದಾರೆ. ಕೋರ್ಟ್ ಆದೇಶವಿದ್ದರೂ ಧಾರ್ಮಿಕ ಆಚರಣೆಗೆ ಪೊಲೀಸರು ಅವಕಾಶ ಕೊಡುತ್ತಿಲ್ಲ. ಮುಸ್ಲಿಂ ಸಮುದಾಯದವರು ಹಿಂದೂಗಳ ಧಾರ್ಮಿಕ ಆಚರಣೆಗೆ ವಿರೋಧಿಸುತ್ತಿಲ್ಲ. ಆದರೆ, ಕ್ಷೇತ್ರದ ಶಾಸಕರು ಪೊಲೀಸರ ಮೂಲಕ ಅಡ್ಡಿ ಪಡಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಜಮೀರ್ ವಿರುದ್ಧ ಕಿಡಿಕಾರಿದ್ದಾರೆ.

ಕೋರ್ಟ್‍ನಿಂದ ಆದೇಶ ಬಂದರೂ, ಈ ಜಾಗದಲ್ಲಿ ರಾಷ್ಟ್ರಧ್ವಜವನ್ನಾಗಲಿ, ನಾಡಧ್ವಜವನ್ನಾಗಿ ಹಾರಿಸಲು ಪೊಲೀಸರು ಬಿಟ್ಟಿಲ್ಲ. ಮುಸ್ಲಿಂ ಸಮುದಾಯಕ್ಕೆ ಹಾಗೂ ಈ ಮೈದಾನಕ್ಕೆ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಲಯ ಹೇಳಿದರೂ, ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಪಾಲಿಕೆಯ ಕಂದಾಯ ಅಧಿಕಾರಿಗಳನ್ನು ಹೆದರಿಸಿ, ಈದ್ಗಾ ಮೈದಾನವನ್ನು ಖಾತೆ ಮಾಡಿಸಿದ್ದಾರೆ ಅಂತ ಹಿಂದೂ ಸಂಘಟನೆಯ ಕೆಲವರು ಆರೋಪಿಸಿದ್ದಾರೆ.

ಈದ್ಗಾ ಮೈದಾನದ ವಿವಾದ ಯಾಕೆ?:
ರಾಜರ ಆಳ್ವಿಕೆಯಲ್ಲಿ ಈದ್ಗಾವನ್ನು ಮುಸ್ಲಿಮರು ಕಟ್ಟಿಕೊಂಡಿದ್ದರು. 1950ರ ನಂತರ ಈದ್ಗಾ ಮೈದಾನಕ್ಕೆ ಬದಲಿ ಜಾಗ ವ್ಯವಸ್ಥೆ ಮಾಡಲಾಯಿತು. ಬದಲಿ ಜಾಗವನ್ನು ಗೋರಿಪಾಳ್ಯದ ಬಡ ಈದ್ಗಾದಲ್ಲಿ ಕೊಡುತ್ತಾರೆ. ಮುಸ್ಲಿಂ ಸಮುದಾಯದವರು ಬಡ ಈದ್ಗಾ ಜಾಗವನ್ನು ಉಪಯೋಗಿಸುತ್ತಾರೆ. ಜೊತೆಗೆ ಇಲ್ಲಿರುವ ಚಾಮರಾಜಪೇಟೆ ಬಿಬಿಎಂಪಿ ಆಟದ ಮೈದಾನ (ಈದ್ಗಾ ಮೈದಾನ, ವಿವಾದಿತ ಜಾಗ)ವನ್ನು ಬಳಕೆ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಚಾಮರಾಜಪೇಟೆಯ ಬಿಬಿಎಂಪಿಯು ಆಟದ ಮೈದಾನವನ್ನು ಬಳಸಿಕೊಳ್ಳಲು ಪ್ರಾರಂಭಿಸುತ್ತದೆ.

ಈ ಹಿನ್ನೆಲೆಯಲ್ಲಿ 1952ರಲ್ಲಿ ಇದು ಮುಸ್ಲಿಮರಿಗೆ ಸೇರಿದ ಜಾಗ ಎಂದು ಅಬ್ದುಲ್ ವಾಜೀದ್ ಸಿವಿಲ್ ಕೋರ್ಟ್‍ನಲ್ಲಿ ದಾವೆ ಹೂಡ್ತಾರೆ. ಆದರೆ ಕೋರ್ಟ್‍ನಲ್ಲಿ ಇದು ವಸತಿ ಪ್ರದೇಶ ಆಗಿರುವುದರಿಂದ, ಈ ಈದ್ಗಾ ಮೈದಾನಕ್ಕೆ ಬದಲಿ ಜಾಗವನ್ನು ಕೊಟ್ಟಾಗಿದೆ. ಇದರಲ್ಲಿ ನಿಮಗೆ ಯಾವುದೇ ಹಕ್ಕಿಲ್ಲ ಎಂದು ಅರ್ಜಿ ವಜಾ ಆಗುತ್ತದೆ. 1962ರಲ್ಲಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿ ಹಾಕಿದರೂ, ಮುಸ್ಲಿಮರಿಗೂ, ಈ ಜಾಗಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ತೀರ್ಪು ನೀಡಿ 1964ರಲ್ಲಿ ವಜಾ ಆಗುತ್ತದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಈದ್ಗಾ ಮೈದಾನ ವಿವಾದ- ಗ್ರೌಂಡ್‍ನಲ್ಲಿ ಹಿಂದೂ ಸಂಘಟನೆಯ ಮುಖಂಡರ ಹೈಡ್ರಾಮಾ

ಬಿಬಿಎಂಪಿಯ ದಾಖಲೆ ಹೇಳೋದೇನು?
ಈದ್ಗಾ ಮೈದಾನ ಬಿಬಿಎಂಪಿಯ ಸ್ವತ್ತಾಗಿದ್ದು, ಆಟದ ಮೈದಾನ, ಪಿಐಡಿ ನಂ. 46-8-2 ಬಿಬಿಎಂಪಿ ಸ್ವತ್ತುಗಳಾಗಿವೆ. ಇದರ ಜೊತೆಗೆ ದರ್ಗಾ ಬಿಬಿಎಂಪಿ ಸ್ವತ್ತು ಎಂದು ದಾಖಲೆಯಲ್ಲಿದೆ. 2 ಎಕರೆಯಲ್ಲಿರುವ ಮೈದಾನದಲ್ಲಿ 941 ಚದರಡಿ ಈದ್ಗಾ ಗೋಡೆಯಿದೆ. 941 ಅಡಿ ದರ್ಗಾ ಇದ್ದು, ಉಳಿದದ್ದು ಬಿಬಿಎಂಪಿ ಸ್ವತ್ತಾಗಿದೆ.

ಈಗ ಏನು ಚಟುವಟಿಕೆ ನಡೆಯುತ್ತಿದೆ?
ಕೋರ್ಟ್‍ನಲ್ಲಿ ಮುಸ್ಲಿಂ ವ್ಯಕ್ತಿ ದಾವೆ ಹೂಡಿದಾಗ ಅದು ವಜಾ ಆಗುತ್ತದೆ. ಆಗ ವರ್ಷದಲ್ಲಿ ಎರಡು ಆಚರಣೆ ಮಾಡಿಕೊಳ್ತೇವೆ ಅಂತ ಆಗ್ರ್ಯೂಮೆಂಟ್‍ನಲ್ಲಿ ರುಕ್ಕುನ್ ಉಲ್ ಮುಲ್ಕ್ ಅಬ್ದುಲ್ ವಾಜೀದ್ ಹೇಳ್ತಾರೆ. ಇದ್ದಕ್ಕೆ ಕೋರ್ಟ್‍ನಲ್ಲಿ ಒಪ್ಪಿಗೆ ಸಿಗುತ್ತದೆ. ಇದರಿಂದಾಗಿ ವರ್ಷಕ್ಕೆ ಎರಡು ಬಾರಿಯಂತೆ ರಂಜಾನ್, ಬಕ್ರಿದ್ ಆಚರಣೆ ನಡೆಯುತ್ತದೆ. ಸಾಂಸ್ಕೃತಿಕ, ಧಾರ್ಮಿಕ, ಇತರೆ ಕಾರ್ಯಕ್ರಮಗಳು ನಡೆಯಬಾರದೆಂದು ಎಲ್ಲಿಯೂ ಕೋರ್ಟ್ ಆದೇಶ ನೀಡಿಲ್ಲ. ಎರಡು ಧರ್ಮಗಳ ವಿಚಾರ ಆಗಿರುವುದರಿಂದ ಈದ್ಗಾ ಮೈದಾನ(ಚಾಮರಾಜಪೇಟೆ ಬಿಬಿಎಂಪಿ ಆಟದ ಮೈದಾನ) ಅತಿಸೂಕ್ಷ್ಮ ಪ್ರದೇಶವೆಂದು ಪೊಲೀಸರು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ 16 ದಿನಗಳ ಬಳಿಕ ಕೊರೊನಾಗೆ ಮಹಿಳೆ ಬಲಿ

ಪೊಲೀಸರ ಪಾತ್ರ ಏನು?
ಈದ್ಗಾ ಮೈದಾನ ಅತಿಸೂಕ್ಷ್ಮ ಪ್ರದೇಶ ಆಗಿರೋದ್ರಿಂದ ಮುಸ್ಲಿಂ ಸಮುದಾಯದ ರಂಜಾನ್, ಬಕ್ರಿದ್ ಆಚರಣೆ ಹೊರತುಪಡಿಸಿ ಯಾವ ಧಾರ್ಮಿಕ ಆಚರಣೆಗಳಿಗೂ ಪೊಲೀಸರಿಂದ ಅವಕಾಶವಿಲ್ಲ. ಆರ್‌ಎಸ್‍ಎಸ್ ಪಥ ಸಂಚಲನ, ಧಾರ್ಮಿಕ ಆಚರಣೆಗಳು, ಇತರೆ ಕಾರ್ಯಕ್ರಮ ಮಾಡಲು ಹೊರಟಾಗ ಪೊಲೀಸರು ಠಾಣೆಯಿಂದ ಅವಕಾಶ ಕೊಟ್ಟಿರಲಿಲ್ಲ. ಸ್ಥಳೀಯ ಶಾಸಕರ ಕುಮ್ಮಕ್ಕುನಿಂದ, ಪ್ರತಿಯೊಂದು ಕಾರ್ಯಕ್ರಮಗಳಿಗೆ ಪೊಲೀಸರಿಂದ ಅಡ್ಡಿಪಡಿಸಲಾಗ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಈ ಹಿಂದೆ ಈದ್ಗಾ ಮೈದಾನದಲ್ಲಿ ಕ್ಷೇತ್ರದ ಆಗಿನ ಶಾಸಕಿ ಪ್ರಮೀಳಾ ನೇಸರ್ಗಿ ರಾಷ್ಟ್ರಧ್ವಜ ಹಾರಿಸಲು ಮುಂದಾದಾಗ ಪೊಲೀಸರು ಶಾಸಕಿಯನ್ನು ಬಂಧಿಸಿದ್ದರು. ಕಳೆದ ವರ್ಷ ವಂದೇ ಮಾತರಂ ಕನ್ನಡ ಸಂಘಟನೆಯ ರಾಜ್ಯಾಧ್ಯಕ್ಷ ಶಿವಕುಮಾರ್ ನಾಯ್ಕ್ ರಾಷ್ಟ್ರಧ್ವಜ ಹಾರಿಸಿದ್ದರು. ಈ ವೇಳೆ ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಯೋಗ ದಿನಾಚರಣೆ ಮಾಡಲು, ಮೈದಾನಕ್ಕೆ ಅನುಮತಿ ಕೋರಿ ಅಂದಿನ ಸ್ಥಳೀಯ ಕಾರ್ಪೋರೇಟರ್ ಬಿ. ವಿ ಗಣೇಶ್ ಪತ್ರ ಬರೆದ್ರೂ ಈದ್ಗಾ ಕೊಟ್ಟಿರಲಿಲ್ಲ. ಇದನ್ನೂ ಓದಿ: ಚರ್ಚ್‍ನಲ್ಲಿ ಹತ್ಯಾಕಾಂಡ – 50 ಮಂದಿಯನ್ನು ಗುಂಡಿಟ್ಟು ಕೊಂದ

ಹಿಂದೂ ಸಂಘಟನೆಗಳ ಬೇಡಿಕೆ ಏನು?
ಈದ್ಗಾ ಮೈದಾನ, ಸಾರ್ವಜನಿಕರ ಸ್ವತ್ತು. ಪಾಲಿಕೆಯ ಆಟದ ಮೈದಾನ. ಮುಸ್ಲಿಂ ಸ್ವತ್ತಲ್ಲ ಎಂದು ಮೊದಲಿಗೆ ವಿಶ್ವ ಸನಾತನ ಪರಿಷತ್ ಸಂಘ ಧ್ವನಿ ಎತ್ತಿತ್ತು. ಈದ್ಗಾ ಗೋಡೆಗೆ, ಮುಸ್ಲಿಂ ದರ್ಗಾ ಅಂತ ಖಾತೆ ಮಾಡಿಕೊಡಲಾಗಿದೆ. ಈ ಖಾತೆಯನ್ನು ಕ್ಯಾನ್ಸಲ್ ಮಾಡಿ. ಗೋಡೆಯನ್ನ ತೆರವು ಮಾಡಬೇಕು. ಸಾಂಸ್ಕೃತಿಕ, ಧಾರ್ಮಿಕ, ರಾಷ್ಟ್ರಿಯ ಆಚರಣೆ, ಆಟ, ಇತರೆ ಕಾರ್ಯಕ್ರಮಗಳು ಈ ಮೈದಾನದಲ್ಲಿ ನಡೆಯಬೇಕು. ಈದ್ಗಾ ಮೈದಾನದಲ್ಲಿ ಕುರಿ, ಮೇಕೆ ಮಾರಾಟ ನಿಲ್ಲಬೇಕು. ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಲಾಗಿದೆ. ಅಷ್ಟರೊಳಗೆ ಮಧ್ಯಪ್ರವೇಶ ಮಾಡಿ, ಹಿಂದೂ ಆಚರಣೆಗಳಿಗೆ ಮೈದಾನದಲ್ಲಿ ಅವಕಾಶ ನೀಡದಿದ್ರೆ ಈದ್ಗಾ ಮೈದಾನವನ್ನ ನೆಲಸಮ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದೆ.

Leave a Reply

Your email address will not be published.

Back to top button