ಚಾಮರಾಜನಗರ: ಗೊಂಬೆ ಕೂರಿಸುವುದು ದಸರಾ ಹಬ್ಬದ ಪ್ರಮುಖ ಆಚರಣೆಗಳಲ್ಲೊಂದು. ಚಾಮರಾಜನಗರ ಜಿಲ್ಲೆಯ ಕುಟುಂಬವೊಂದು ಕಳೆದ 80 ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ದಸರಾ ಗೊಂಬೆ ಕೂರಿಸುವ ಆಚರಣೆ ಮಾಡಿಕೊಂಡು ಬರುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿರುವ ಈ ದಸರಾ ಗೊಂಬೆ ಪ್ರದರ್ಶನ ಅತ್ಯಾಕರ್ಷಕವಾಗಿದೆ.
ಮಹಿಷಾಸುರನನ್ನು ದುರ್ಗಾದೇವಿ ಸಂಹರಿಸಲು ದೇವಾನುದೇವೆತೆಗಳು ತಮ್ಮ ಶಕ್ತಿಯನ್ನು ನೀಡಿ ಶಕ್ತಿಹೀನರಾಗಿ ಪ್ರತಿಮೆಗಳಾದರು ಎಂಬ ಪುರಾಣವಿದೆ. ದೇವಾನುದೇವತೆಗಳ ಈ ತ್ಯಾಗವನ್ನು ಸ್ಮರಿಸಲು ಗೊಂಬೆ ಕೂರಿಸುವ ಪದ್ದತಿಯನ್ನು ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಹಳೇ ಮೈಸೂರು ಭಾಗದ ಮನೆ ಮನೆಗಳಲ್ಲಿ ಗೊಂಬೆ ಕೂರಿಸುವ ಪದ್ದತಿ ರೂಢಿಯಲ್ಲಿತ್ತು. ಕೆಲವು ಮನೆಗಳಲ್ಲಿ ಈಗಲೂ ದಸರಾ ಗೊಂಬೆ ಕೂರಿಸುವ ಅಚರಣೆಯನ್ನು ಅನೂಚಾನವಾಗಿ ನಡೆಸುಕೊಂಡು ಬರಲಾಗುತ್ತಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಉಮಾ ಸುಬ್ಬರಾವ್ ಕುಟುಂಬ ಕಳೆದ 80 ವರ್ಷಗಳಿಂದ ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಗೊಂಬೆ ಕೂರಿಸುವ ಆಚರಣೆ ಮಾಡಿಕೊಂಡು ಬರುತ್ತಿದೆ.
ಈ ದಸರಾ ಗೊಂಬೆ ಪ್ರದರ್ಶನದಲ್ಲಿ ಪುರಾಣ ಹಾಗೂ ಐತಿಹಾಸಿಕ ಘಟನೆಗಳು, ಸಂಸ್ಕೃತಿ, ಕಲೆ ಅನಾವರಣಗೊಳಿಸುವ ಚಿತ್ರಣಗಳು, ಶ್ರೀನಿವಾಸ ಕಲ್ಯಾಣ, ಕೃಷ್ಣಾವತಾರ, ರಾಮಾಯಣ, ಮಹಾಭಾರತ, ಜಂಬೂಸವಾರಿ ಮೊದಲಾದ ಸಂಗತಿಗಳು ಬಿಂಬಿತವಾಗಿವೆ.
ಪಟ್ಟದ ಬೊಂಬೆಗಳು ಸೇರಿದಂತೆ ನಾನಾ ಬಗೆಯ ಗೊಂಬೆಗಳು, ಹಿಂದೆ ಬಳಸುತ್ತಿದ್ದ ಹಿತ್ತಾಳೆ, ತಾಮ್ರ, ಪಿಂಗಾಣಿ ವಸ್ತುಗಳು ಗಮನ ಸೆಳೆಯುತ್ತಿವೆ. ಗೊಂಬೆ ಪ್ರದರ್ಶನ ವೀಕ್ಷಣೆಗೆ ಬೇರೆ ಬೇರೆ ಕಡೆಯಿಂದ ಜನ ಬರುತ್ತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.